Last Updated:
ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಹಾಗಿದ್ರೆ, ಐರ್ಲೆಂಡ್ ವಿರುದ್ಧ ಸೋಲಲು ಕಾರಣಗಳೇನು? ಟೀಂ ಇಂಡಿಯಾ ಎಡವಿದ್ದೇಲ್ಲಿ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಶ್ರೇಯಸ್ ಆಯ್ಯರ್ (Shreyas Iyer) ನೇತೃತ್ವದ ಟೀಂ ಇಂಡಿಯಾ (Team India) ಐರ್ಲೆಂಡ್ (Ireland) ವಿರುದ್ಧ ಮುಗ್ಗರಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ಕ್ರಿಕೆಟ್ ತಂಡ ಐರ್ಲೆಂಡ್ ವಿರುದ್ಧ ಸೋಲು ಕಂಡಿದೆ. ಟಿ20 ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ (Suryakumar Yadav) ತಂಡದಿಂದ ನಿರ್ಗಮಿಸಿದ ಭಾರತದ ತಂಡ ಮೊದಲ ಟಿ20 ಸರಣಿಯನ್ನು ಆಡ್ತಿದ್ದು, ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಹಾಗಿದ್ರೆ, ಐರ್ಲೆಂಡ್ ವಿರುದ್ಧ ಸೋಲಲು ಕಾರಣಗಳೇನು? ಟೀಂ ಇಂಡಿಯಾ ಎಡವಿದ್ದೇಲ್ಲಿ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ 2 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬೆಲ್ಫಾಸ್ಟ್ ಮೈದಾನದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ನಿಗಧಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಕಲೆ ಹಾಕಿತು. ಆದ್ರೆ, ಭಾರತ ತಂಡ 18.5 ಓವರ್ಗೆ 148 ಗಳಿಸಿ ಆಲ್ ಔಟ್ ಆಗುವ ಮೂಲಕ 34 ರನ್ಗಳ ಸೋಲು ಕಂಡಿದೆ.
ಸವಾಲಿನ ಮೊತ್ತವನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ ಆರಂಭದಲ್ಲೆ ನಿರಾಶಾದಾಯಕ ಆರಂಭ ಪಡೆಯಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮೂಲಕ ಕೇವಲ 20 ಎಸೆತಗಳಲ್ಲಿ 7 ಬೌಂಡರಿಗಳು ಮತ್ತು 2 ಸಿಕ್ಸರ್ಗಳ ಬಾರಿಸಿ 50 ರನ್ಗಳನ್ನು ಗಳಿಸಿದರು, ಆದರೆ ಮತ್ತೊಂದು ಕಡೆ ಅವರಿಗೆ ಯಾರು ಸಾಥ್ ನೀಡಲಿಲ್ಲ.
ಅಭಿಷೇಕ್ ಅವರ ಅಬ್ಬರದ ಅರ್ಧಶತಕದ ಹೊರತಾಗಿಯೂ ಕೂಡ ಟೀಂ ಇಂಡಿಯಾದ ಅಗ್ರ ಮತ್ತು ಮಧ್ಯಮ ಕ್ರಮಾಂಕವು ಸಂಪೂರ್ಣ ತರಗೆಲೆಯಂತೆ ಕುಸಿಯಿತು. ವಿಕೆಟ್ಕೀಪರ್-ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರನ್ನು ಜೇ ಮುಂದ್ರಾ ಕೇವಲ 5 ರನ್ಗಳಿಗೆ ಔಟ್ ಮಾಡಿದ್ರು. ಅವರ ಹಿಂದೆ ಇಶಾನ್ ಕಿಶನ್ ಕೂಡ ಕ್ರೀಸ್ನಲ್ಲಿ ಕಷ್ಟಪಟ್ಟು 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟ್ ಆದ್ರೂ. ನಾಯಕ ಶ್ರೇಯಸ್ ಅಯ್ಯರ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು, ಆದರೆ ಅವರು ಕೂಡ 7 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ್ದ ಪೆವಿಲಿಯನ್ ಸೇರಿದರು. ನಂತರ ಬಂದ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ಔಟ್ ನಿರ್ಗಮಿಸಿದರು.
ತಮ್ಮ ಮಾರಕ ದಾಳಿಯ ಮೂಲಕ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದಿದ್ದ ಪ್ರಸಿದ್ಧ್ ಕೃಷ್ಣ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. 4 ಓವರ್ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಬರೋಬ್ಬರಿ 57 ರನ್ ನೀಡಿ ಸತತ ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎನಿಸಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳು ಕೇಳಿಬಂದಿವೆ. ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶ್ರೇಯಸ್ ಅಯ್ಯರ್ ಅವರಿಗೆ ನಾಯಕತ್ವ ನೀಡಲಾಗಿತ್ತು, ಆದರೆ ಶ್ರೇಯಸ್ ಅಯ್ಯರ್ ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲೇ ಸೋಲನ್ನು ಅನುಭವಿಸಿದ್ರು, ಬೌಲರ್ಸ್ಗಳ ಆಯ್ಕೆಯಲ್ಲಿ ಶ್ರೇಯಸ್ ಎಡವಿದ್ದಾರೆ. ಅಲ್ಲದೇ ಟೀಮ್ ಇಂಡಿಯಾದ ಟಾಪ್-8 ರಲ್ಲಿ, ಶ್ರೇಯಸ್ ಆಡುವ ಹನ್ನೊಂದರಲ್ಲಿರುವ 6 ಎಡಗೈ ಬ್ಯಾಟ್ಸ್ಮನ್ಗಳಿಗೆ ಅವಕಾಶ ನೀಡಿದ್ದರು.
Jun 26, 2026 10:19 PM IST













