Last Updated:
Social Media Ban: ಮಕ್ಕಳ ಮಾನಸಿಕ ಆರೋಗ್ಯ ಮತ್ತು ಆನ್‌ಲೈನ್ ಸುರಕ್ಷತೆಗೆ ಆದ್ಯತೆ ನೀಡಿ ಯುಎಇ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ 15 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ. ಸೈಬರ್ ಬುಲ್ಲೀಯಿಂಗ್, ಆನ್‌ಲೈನ್ ವಂಚನೆ, ಅನುಚಿತ ಕಂಟೆಂಟ್‌ನಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಈ ಕಠಿಣ ಕ್ರಮ ಜಾರಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ.
ದುಬೈ (ಯುಎಇ): ಮಕ್ಕಳ ಮಾನಸಿಕ ಆರೋಗ್ಯ (Children’s Mental Health) ಮತ್ತು ಆನ್‌ಲೈನ್ ಸುರಕ್ಷತೆಗೆ ಆದ್ಯತೆ ನೀಡಿ ಯುಎಇ ಸರ್ಕಾರ (UAE Government) ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ, ಇನ್ನೂ ಮುಂದೆ ದೇಶದಲ್ಲಿ 15 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ (Social Media Ban). ಸೈಬರ್ ಬುಲ್ಲೀಯಿಂಗ್, ಆನ್‌ಲೈನ್ ವಂಚನೆ, ಅನುಚಿತ ಕಂಟೆಂಟ್‌ನಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಈ ಕಠಿಣ ಕ್ರಮ ಜಾರಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ.
ಹೌದು, ಇತ್ತೀಚಿನ ವರ್ಷಗಳಲ್ಲಿ ಸೈಬರ್ ಬುಲ್ಲಿಂಗ್ (ಆನ್‌ಲೈನ್ ಪೀಡನೆ), ಸ್ಕ್ರೀನ್ ಅಡಿಕ್ಷನ್ (ಮೊಬೈಲ್ ದಾಸ್ಯ), ಖಿನ್ನತೆ ಮತ್ತು ಅಪರಿಚಿತರಿಂದ ಎದುರಾಗುವ ಅಪಾಯಗಳು ಮಕ್ಕಳಲ್ಲಿ ಗಣನೀಯವಾಗಿ ಹೆಚ್ಚುತ್ತಿವೆ. ಮಕ್ಕಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ಡಿಜಿಟಲ್ ವಾತಾವರಣವನ್ನು ನಿರ್ಮಿಸುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ. ಕೇವಲ ಮನರಂಜನೆಯ ಹೆಸರಿನಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳಬಾರದು ಮತ್ತು ಆನ್‌ಲೈನ್ ವಂಚನೆಗಳಿಗೆ ಬಲಿಯಾಗಬಾರದು ಎಂದು ಯುಎಇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಅಪ್ಪ-ಅಮ್ಮ ಒಪ್ಪಿಕೊಂಡ್ರೂ ಅಷ್ಟೇ….
ಮನಿಕಂಟ್ರೋಲ್ ವರದಿ ಮಾಡಿರುವಂತೆ, ಈ ಹೊಸ ಕಾನೂನಿನ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ಎಕ್ಸ್ (ಟ್ವಿಟರ್) ಅಥವಾ ಸ್ನ್ಯಾಪ್‌ಚಾಟ್‌ನಂತಹ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಖಾತೆಗಳನ್ನು ಹೊಂದುವಂತಿಲ್ಲ. ಕೇವಲ ಖಾತೆ ತೆರೆಯುವುದಷ್ಟೇ ಅಲ್ಲದೆ, ಪೋಸ್ಟ್‌ಗಳನ್ನು ಮಾಡುವುದು, ಕಮೆಂಟ್ ಮಾಡುವುದು, ಶೇರ್ ಮಾಡುವುದು ಅಥವಾ ಸಾರ್ವಜನಿಕ ಗ್ರೂಪ್‌ಗಳನ್ನು ಸೇರುವುದನ್ನು ಸಹ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅತ್ಯಂತ ಪ್ರಮುಖವಾದ ಅಂಶವೆಂದರೆ, ಪೋಷಕರು ಒಪ್ಪಿಗೆ ನೀಡಿದರೂ ಸಹ ಮಕ್ಕಳಿಗೆ ಖಾತೆ ತೆರೆಯಲು ಕಾನೂನಿನಲ್ಲಿ ಅವಕಾಶವಿಲ್ಲ.!
ಏತನ್ಮಧ್ಯೆ, 15 ರಿಂದ 16 ವರ್ಷದ ಹದಿಹರೆಯದವರಿಗೆ ಸಾಮಾಜಿಕ ಜಾಲತಾಣ ಬಳಸಲು ಸೀಮಿತ ಅವಕಾಶ ನೀಡಲಾಗಿದ್ದರೂ, ಅದಕ್ಕೆ ಕಠಿಣ ನಿಬಂಧನೆಗಳನ್ನು ವಿಧಿಸಲಾಗಿದೆ. ಇವರ ಖಾತೆಗಳಲ್ಲಿ ಪೋಷಕರ ನಿಗಾ ಕಡ್ಡಾಯವಾಗಿರುತ್ತದೆ. ಅಪರಿಚಿತರೊಂದಿಗೆ ಸಂವಹನ ನಡೆಸುವುದು, ವಯಸ್ಸಿಗೆ ಸೂಕ್ತವಲ್ಲದ ಕಂಟೆಂಟ್‌ಗಳನ್ನು ವೀಕ್ಷಿಸುವುದನ್ನು ನಿರ್ಬಂಧಿಸಲಾಗುತ್ತದೆ. ಅಲ್ಲದೆ, ರಾತ್ರಿ ವೇಳೆ ಆಪ್ ಬಳಕೆಯನ್ನು ನಿಯಂತ್ರಿಸುವ ಸ್ಕ್ರೀನ್ ಟೈಮ್ ಮಿತಿಗಳನ್ನು ಅನ್ವಯಿಸಲಾಗುತ್ತದೆ.
ಮುಂದುವರೆದು, ಈ ಕಾನೂನನ್ನು ಜಾರಿಗೆ ತರಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಯುಎಇ ಸರ್ಕಾರ 12 ತಿಂಗಳ ಕಾಲಾವಕಾಶ ನೀಡಿದೆ. ಕಂಪನಿಗಳು ಕೇವಲ ಬಳಕೆದಾರರು ಸ್ವಯಂ ಘೋಷಿಸುವ ವಯಸ್ಸನ್ನು ನಂಬುವಂತಿಲ್ಲ. ಬದಲಿಗೆ ಸುಧಾರಿತ ಎಐ (AI) ತಂತ್ರಜ್ಞಾನ ಮತ್ತು ಅಧಿಕೃತ ಡಿಜಿಟಲ್ ಐಡಿಗಳ ಮೂಲಕ ಕಡ್ಡಾಯವಾಗಿ ವಯಸ್ಸನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸುವ ಕಂಪನಿಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ ಅಥವಾ ಯುಎಇನಲ್ಲಿ ಆ ಆಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಅಧಿಕಾರವನ್ನು ಅಲ್ಲಿನ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಲಾಗಿದೆ.
ಕೇವಲ ಬ್ರಿಟನ್ ಮಾತ್ರವಲ್ಲದೆ, ವಿಶ್ವದ ಹಲವು ರಾಷ್ಟ್ರಗಳು ಈಗಾಗಲೇ ಇಂತಹ ನಿರ್ಧಾರಗಳನ್ನು ಕೈಗೊಂಡಿವೆ:
- ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ಮಲೇಷ್ಯಾ ಮತ್ತು ಇಂಡೋನೇಷ್ಯಾ: ಈ ದೇಶಗಳೂ ಸಹ ಕಟ್ಟುನಿಟ್ಟಾದ ವಯಸ್ಸಿನ ತಪಾಸಣೆಯ ಮೂಲಕ 16 ವರ್ಷದೊಳಗಿನವರ ಡಿಜಿಟಲ್ ಬಳಕೆಯನ್ನು ನಿಯಂತ್ರಿಸುತ್ತಿವೆ.
- ಬ್ರಿಟನ್: ಎರಡು ದಿನದ ಹಿಂದೆ ಬ್ರಿಟನ್ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಿಸಿದೆ.
Jun 18, 2026 11:00 PM IST













