Oman: ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರೋಚಕ ರಕ್ಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಒಮಾನಿ ಸಮುದ್ರದಲ್ಲಿ ಭಾರತೀಯ ಸರಕು ಹಡಗು ಎಂಎಸ್‌ವಿ ವಿರಾಟ್-1 ಮುಳುಗಿದ ಭೀಕರ ಘಟನೆಯ ವಿವರಗಳು ಈಗ ಬಹಿರಂಗಗೊಂಡಿವೆ. ನಡುಸಮುದ್ರದಲ್ಲಿ ಹಡಗಿನ ಇಂಜಿನ್ ದಿಢೀರ್ ಕೈಕೊಟ್ಟಿದ್ದು, ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಹಡಗು ನಿಯಂತ್ರಣ ಕಳೆದುಕೊಂಡಿತು. ಇನ್ನು, ಪರಿಸ್ಥಿತಿಯ ಗಂಭೀರತೆ ಅರಿತು ಯುಎಸ್ ನೌಕಾಪಡೆ ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಧುಮುಕಿತು. ಸಮುದ್ರದ ಮಧ್ಯೆ ನಡೆದ ಈ ರೋಚಕ ರಕ್ಷಣೆ ಕಡಲ ಯಾನದ ಅಪಾಯವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ. ಆ ಕುರಿತ ವರದಿ ಇಲ್ಲಿದೆ.

News18
News18

ಡುಕ್ಮ್ (ಒಮಾನ್): ಒಮಾನಿ ಸಮುದ್ರದಲ್ಲಿ (Oman Sea) ಭಾರತೀಯ ಸರಕು ಹಡಗು (Indian Cargo Ship) ಎಂಎಸ್‌ವಿ ವಿರಾಟ್-1 (MSV Virat-1) ಮುಳುಗಿದ ಭೀಕರ ಘಟನೆಯ ವಿವರಗಳು ಈಗ ಬಹಿರಂಗಗೊಂಡಿವೆ. ನಡುಸಮುದ್ರದಲ್ಲಿ ಹಡಗಿನ ಇಂಜಿನ್ ದಿಢೀರ್ ಕೈಕೊಟ್ಟಿದ್ದು, ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಹಡಗು ನಿಯಂತ್ರಣ ಕಳೆದುಕೊಂಡಿತು. ನೀರು ಒಳನುಗ್ಗುತ್ತಿದ್ದಂತೆ ಮುಳುಗುವ ಹಂತ ತಲುಪಿದಾಗ ಸಿಬ್ಬಂದಿ SOS ಸಂದೇಶ ರವಾನಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತು ಅಮೆರಿಕದ ನೌಕಾಪಡೆ (US Navy) ತಕ್ಷಣ ರಕ್ಷಣಾ ಕಾರ್ಯಾಚರಣೆಗೆ (Rescue Operation) ಧುಮುಕಿತು. ಇದರ ಪರಿಣಾಮ ಜೀವ ಉಳಿಸಿಕೊಳ್ಳಲು ದಿನವಿಡೀ ಹೋರಾಡಿದ ನಮ್ಮ ದೇಶದ ಸಿಬ್ಬಂದಿ ಕೊನೆಗೂ ಸುರಕ್ಷಿತವಾಗಿ ದಡ ಸೇರಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ಅರಬ್ಬಿ ಸಮುದ್ರದ ಒಮನ್ ಕರಾವಳಿ ತೀರದಲ್ಲಿ ಭಾರತದ 14 ಮಂದಿ ಸಿಬ್ಬಂದಿ ಇದ್ದ ‘ವಿರಾಟ್-1’ ಹಡಗು ಭೀಕರ ಅಪಘಾತಕ್ಕೆ ಈಡಾಗುವ ಹಂತ ತಲುಪಿತ್ತು. ಹಡಗು ಚಲಿಸುತ್ತಿರುವಾಗಲೇ ತಾಂತ್ರಿಕ ದೋಷದಿಂದಾಗಿ ಇಂಜಿನ್ ಸಂಪೂರ್ಣವಾಗಿ ಕೈಕೊಟ್ಟಿತ್ತು. ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದರಿಂದ ಇಂಜಿನ್ ಇಲ್ಲದ ಹಡಗು ನಿಯಂತ್ರಣ ತಪ್ಪಿ ನೀರಿನಲ್ಲಿ ತೇಲಾಡಲು ಆರಂಭಿಸಿತು. ಸಮಯ ಕಳೆಯುತ್ತಿದ್ದಂತೆ ಹಡಗಿನೊಳಗೆ ನೀರು ನುಗ್ಗಲು ಶುರುವಾಗಿ, ಅದು ಮುಳುಗುವ ಮುನ್ಸೂಚನೆ ಸಿಕ್ಕಾಗ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾದರು. ಭಾರತದಲ್ಲಿದ್ದ ಅವರ ಕುಟುಂಬಸ್ಥರು ಹಡಗು ಮುಳುಗುತ್ತಿರುವ ಸುದ್ದಿ ಕೇಳಿ, ತಮ್ಮವರ ಜೀವ ಉಳಿಯುತ್ತಾ ಇಲ್ಲವಾ ಎನ್ನುವ ಭಯದಲ್ಲಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿತ್ತು.

ಇದನ್ನೂ ಓದಿ: Oman: ಒಮನ್ ಹಡಗಿನಲ್ಲಿ ಭಾರತೀಯ ಸಾವು; ಬೇಡಿಕೊಂಡರೂ ಸಹಾಯ ಮಾಡದ ಅಮೆರಿಕ ನೌಕಾಪಡೆ!

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಹಡಗಿನ ಕ್ಯಾಪ್ಟನ್ ತಕ್ಷಣವೇ ಒಮನ್ ದೇಶದ ಕಡಲ ರಕ್ಷಣಾ ಕೇಂದ್ರಕ್ಕೆ ತುರ್ತು ಸಂದೇಶ ರವಾನಿಸಿ ಸಹಾಯಕ್ಕಾಗಿ ಮನವಿ ಮಾಡಿದರು. ಸುದ್ದಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಒಮನ್ ರಕ್ಷಣಾ ಪಡೆಗಳು ಮತ್ತು ಅಲ್ಲಿನ ನೌಕಾಸೇನೆ ತಕ್ಷಣವೇ ಕಾರ್ಯಾಚರಣೆಗೆ ಧುಮುಕಿದವು. ನಡುಸಮುದ್ರದಲ್ಲಿ ಭೋರ್ಗರೆಯುತ್ತಿದ್ದ ಅಲೆಗಳು ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಹೆಲಿಕಾಪ್ಟರ್ ಹಾಗೂ ವಿಶೇಷ ರಕ್ಷಣಾ ಬೋಟ್‌ಗಳ ಮೂಲಕ ಹಡಗಿದ್ದ ಜಾಗವನ್ನು ತಲುಪಿದವು. ಪ್ರಾಣದ ಹಂಗು ತೊರೆದು ಒಮನ್ ರಕ್ಷಣಾ ಸಿಬ್ಬಂದಿ ನಡೆಸಿದ ಸಾಹಸಿಕ ಕಾರ್ಯಾಚರಣೆಯಿಂದಾಗಿ ಹಡಗಿನಲ್ಲಿದ್ದ ಎಲ್ಲಾ 14 ಭಾರತೀಯರನ್ನು ಯಶಸ್ವಿಯಾಗಿ ಏರ್ ಲಿಫ್ಟ್ ಮಾಡಿ ರಕ್ಷಿಸಲಾಯಿತು.

ಅಪಘಾತಕ್ಕೊಳಗಾದ ‘ವಿರಾಟ್-1’ ಹಡಗಿನ ಇತಿಹಾಸವನ್ನು ನೋಡುವುದಾದರೆ, ಇದು ಕೇವಲ ಸರಕು ಸಾಗಿಸುವ ಸಾಮಾನ್ಯ ಹಡಗಾಗಿರಲಿಲ್ಲ. ಆದರೆ ತಾಂತ್ರಿಕ ನಿರ್ವಹಣೆಯ ಕೊರತೆಯೋ ಅಥವಾ ಹಳೆಯ ಇಂಜಿನ್ ಸಮಸ್ಯೆಯೋ ಗೊತ್ತಿಲ್ಲ, ನಡುಸಮುದ್ರದಲ್ಲೇ ಇಂಜಿನ್ ಬಂದ್ ಆಗಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು. ಕಡಲ ರಕ್ಷಣಾ ನಿಯಮಗಳ ಪ್ರಕಾರ ಇಂತಹ ದೊಡ್ಡ ಹಡಗುಗಳು ಇಂಜಿನ್ ವೈಫಲ್ಯಕ್ಕೆ ಒಳಗಾದಾಗ ಸಮುದ್ರದ ಬಂಡೆಗಳಿಗೆ ಅಥವಾ ತೀರಕ್ಕೆ ಅಪ್ಪಳಿಸುವ ಅಪಾಯ ಹೆಚ್ಚಿರುತ್ತದೆ. ಆದರೆ ಅದೃಷ್ಟವಶಾತ್ ಒಮನ್ ಕರಾವಳಿ ಭದ್ರತಾ ಪಡೆಗಳು ಸಮಯ ಪ್ರಜ್ಞೆ ಮೆರೆದು ಕೇವಲ ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ಧಾವಿಸಿದ್ದರಿಂದ ಭಾರತದ 14 ಜೀವಗಳು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗುವಂತಾಯಿತು.

ನಡುಸಮುದ್ರದ ದುರಂತದ ವಾರ್ತೆ…

ಇತ್ತ ಭಾರತದಲ್ಲಿರುವ ಸಿಬ್ಬಂದಿಯ ಪೋಷಕರು ಹಾಗೂ ಕುಟುಂಬಸ್ಥರಿಗೆ ಈ ಘಟನೆ ನೆಮ್ಮದಿ ಕೆಡಿಸಿತ್ತು. ತಮ್ಮ ಮನೆ ಮಗ ವಿದೇಶದಲ್ಲಿ ಕೆಲಸ ಮಾಡಿಕೊಂಡು ಆರಾಮಾಗಿದ್ದಾನೆ, ಕೈತುಂಬಾ ಸಂಬಳ ತರುತ್ತಾನೆ ಎಂದು ನಂಬಿದ್ದ ಹೆತ್ತವರಿಗೆ ಈ ನಡುಸಮುದ್ರದ ದುರಂತದ ವಾರ್ತೆ ಕೇಳಿ ಎದೆ ಜರ್ಜರಿತವಾಗಿತ್ತು. ಹಡಗು ಮುಳುಗುತ್ತಿದೆ ಎನ್ನುವ ಒಂದೇ ಒಂದು ಸುದ್ದಿ ಇಡೀ ಕುಟುಂಬವನ್ನು ಆತಂಕದ ಸುಳಿಗೆ ದೂಡಿತ್ತು. ಆದರೆ ಒಮನ್ ರಕ್ಷಣಾ ಇಲಾಖೆ “ಎಲ್ಲಾ 14 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಮತ್ತು ಅವರಿಗೆ ಅಗತ್ಯವಿರುವ ವೈದ್ಯಕೀಯ ನೆರವು ನೀಡಲಾಗಿದೆ” ಎಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ ಮೇಲಷ್ಟೇ ಭಾರತದಲ್ಲಿದ್ದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ: Morena Train Accident: ರೈಲಿಗೆ ಬೆಂಕಿ ಬಿದ್ದಿದೆ ಎಂದ ಕಿಡಿಗೇಡಿಗಳು, ವದಂತಿ ನಂಬಿ ಕೆಳಕ್ಕೆ ಜಿಗಿದ ಮಕ್ಕಳು ಸೇರಿ 8 ಮಂದಿ ಸಾವು!

ಮುಂದುವರೆದು, ಕಡಲ ಉದ್ಯೋಗ ಅಂದರೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಅದರ ಒಳಗಿನ ಅಸಲಿ ಪರಿಸ್ಥಿತಿ ಮತ್ತು ರಿಸ್ಕ್ ಮಾತ್ರ ತುಂಬಾನೇ ಭಯಾನಕವಾಗಿರುತ್ತದೆ. ತಿಂಗಳುಗಟ್ಟಲೆ ಕುಟುಂಬದಿಂದ ದೂರವಿದ್ದು, ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಹಗಲು-ರಾತ್ರಿ ಎನ್ನದೆ ಸಮುದ್ರದ ಮಧ್ಯೆ ಕೆಲಸ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂಜಿನ್ ವೈಫಲ್ಯದಂತಹ ತಾಂತ್ರಿಕ ದೋಷಗಳು ಎದುರಾದರೆ ಬದುಕಿ ಬರುವುದೇ ದೊಡ್ಡ ಪವಾಡ. ಈ ಘಟನೆಯಲ್ಲೂ ಅಷ್ಟೇ, ಒಂದು ವೇಳೆ ರಕ್ಷಣಾ ಪಡೆಗಳು ಬರುವುದು ಸ್ವಲ್ಪ ತಡವಾಗಿದ್ದರೂ 14 ಭಾರತೀಯರ ಸ್ಥಿತಿ ಏನಾಗುತ್ತಿತ್ತೋ ಏನೋ.

ಒಟ್ಟಾರೆಯಾಗಿ, ಒಮನ್ ಸಮುದ್ರದಲ್ಲಿ ನಡೆದ ಈ ಭೀಕರ ಹಡಗು ದುರಂತ ಭಾರತೀಯ ಸಿಬ್ಬಂದಿಯ ಪಾಲಿಗೆ ಮರುಜನ್ಮ ನೀಡಿದಂತಾಗಿದೆ. ಕಡಲಾಳದ ಕರಾಳ ಕತ್ತಲಿಗೆ ಸಿಲುಕಬೇಕಾಗಿದ್ದ ದೇಶದ ಯುವಕರನ್ನು ಒಮನ್ ರಕ್ಷಣಾ ಪಡೆಗಳು ದೇವದೂತರಂತೆ ಬಂದು ಕಾಪಾಡಿವೆ. ಸದ್ಯಕ್ಕೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದು, ಅಗತ್ಯ ಪ್ರಕ್ರಿಯೆಗಳ ನಂತರ ತಾಯ್ನಾಡಿಗೆ ಮರಳಲಿದ್ದಾರೆ. ಜಾಗತಿಕ ಕಡಲ ಯಾನದಲ್ಲಿ ಸುರಕ್ಷತಾ ನಿಯಮಗಳು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಇಡೀ ಜಗತ್ತಿಗೆ ನೆನಪಿಸಿಕೊಟ್ಟಿದೆ.

(ವರದಿ: ಚೈತ್ರ ಹರೀಶ್, ನ್ಯೂಸ್ 18 ಕನ್ನಡ)



Source link

Leave a Reply

Your email address will not be published. Required fields are marked *