Last Updated:
Vijay: ವಿಜಯ್ ಅವರು ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ದಿನ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಹೇಗಿರಲಿದೆ?
ಇಂದು ತಮಿಳುನಾಡು (Tamil Nadu) ಸಿಎಂ ವಿಜಯ್ (Vijay) ಅವರು ಉಡುಪಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ (Kollur Mookambika Temple) ಭೇಟಿ ನೀಡಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಕೊಲ್ಲೂರು ಭೇಟಿ ನೀಡುವ ಹಿನ್ನೆಲೆಯಲ್ಲಿ ವಿಜಯ್ ಭೇಟಿ ಬಗ್ಗೆ ಅರ್ಚಕ ನಿತ್ಯಾನಂದ ಅಡಿಗ ಮಾಹಿತಿ ನೀಡಿದ್ದಾರೆ.
ವಿಜಯ್ ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದ್ದಾರೆ. ನಮಗೂ ಕೂಡ ಈ ಕುರಿತು ದೇವಸ್ಥಾನದಿಂದ ಒಂದು ವಿಜ್ಞಾಪನೆಯನ್ನು ಕಳಿಸಿದ್ದಾರೆ. ದೇವಸ್ಥಾನದಿಂದ ಒಳ್ಳೆಯ ರೀತಿಯಲ್ಲಿ ಸ್ವಾಗತಿಸ ಬೇಕು ಎನ್ನುವ ಆದೇಶವಿದೆ ಎನ್ನಲಾಗಿದೆ.
ದೇವಳದ ಅರ್ಚಕ ವೃಂದ ಸಿಬ್ಬಂದಿ ವರ್ಗಕ್ಕೆ ಮೌಖಿಕವಾಗಿ ಜೊತೆಗೆ ಲಿಖಿತವಾಗಿಯೂ ಆದೇಶ ನೀಡಿದ್ದಾರೆ. ತಮಿಳುನಾಡಿನಿಂದ ಕೊಲ್ಲೂರಿಗೆ ದೊಡ್ಡ ದೊಡ್ಡ ನಟರು ಪ್ರಭಾವಿಗಳು ಬರುವುದು ಸರ್ವೇ ಸಾಮಾನ್ಯ. ಹಿರಿಯ ಸಂಗೀತ ಮಾಂತ್ರಿಕ ಇಳಿಯರಾಜ, ಶಿವಮಣಿ ಅನೇಕರು ಇಲ್ಲಿಗೆ ಬರುತ್ತಾರೆ ಎಂದಿದ್ದಾರೆ.
ಜೊತೆಗೆ ನಮ್ಮ ರಾಜ್ಯದಿಂದ ಸಾಲುಮರದ ತಿಮ್ಮಕ್ಕ ಮೊದಲಾದವರು ಕೂಡ ಇಲ್ಲಿಗೆ ಭೇಟಿ ನೀಡಿದ್ದಾರೆ. ಆದರೆ ಅದು ದೊಡ್ಡ ಸುದ್ದಿ ಆಗಲಿಲ್ಲ ಎನ್ನುವ ಬೇಸರವಿದೆ. ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜಯಲಲಿತ ಅವರು ಒಮ್ಮೆ ಭೇಟಿ ನೀಡಿದ್ದರು. ಬಳಿಕ ಸ್ಟ್ಯಾಲಿನ್ ಅವರ ಪತ್ನಿ ಕುಟುಂಬದವರು ಬಂದು ಕೊಲ್ಲೂರು ದರ್ಶನ ಮಾಡಿದ್ದಾರೆ ಎಂದಿದ್ದಾರೆ.
ಹಾಗೆಯೇ ವಿಜಯ್ ಅವರ ಕುಟುಂಬದವರು ಈ ಹಿಂದೆ ಕೊಲ್ಲೂರಿಗೆ ಬರುತ್ತಿದ್ದರಂತೆ. ವಿಜಯ್ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ಕೊಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ ಎಂದಿದ್ದಾರೆ.
ಕೊಲ್ಲೂರಿನಲ್ಲಿ ಸಿಎಂ ಬಂದಿದ್ದಾರೆ ಎನ್ನುವ ಕಾರಣಕ್ಕೆ ವಿಶೇಷ ಪೂಜೆಗಳೇನು ಇರುವುದಿಲ್ಲ. ಉಳಿದ ಭಕ್ತರಂತೆ ಸಿಎಂ ವಿಜಯ್ ಅವರು ಕೂಡ ದೇವಿಯ ದರ್ಶನ ಮಾಡಲಿದ್ದಾರೆ. ಸರಕಾರಿ ಪ್ರೋಟೋಕಾಲ್ ಪ್ರಕಾರ ಅವರು ಪೂರ್ಣ ಕುಂಭ ಸ್ವಾಗತದೊಂದಿಗೆ ದೇವಳಕ್ಕೆ ಬರಲಿದ್ದಾರೆ ಎಂದಿದ್ದಾರೆ.
ಒಳಗೆ ಬಂದು ದೇವರ ದರ್ಶನವನ್ನು ಮಾಡಿ ದೇವಸ್ಥಾನ ನೋಡಿ ತೆರಳಲಿದ್ದಾರೆ. ಇಂದು ಶುಕ್ರವಾರ ಬಹಳ ವಿಶೇಷ ದಿನವೇನಲ್ಲ. ಆದರೆ ದೇವಿಗೆ ಸಂಜೆ ಪ್ರದೋಷ ಕಾಲಕ್ಕೂ ಮೊದಲು ಉತ್ಸವ ನಡೆಯಲಿದೆ. ಇದು ಸಿಎಂ ವಿಜಯ್ ಆಗಮನಕ್ಕೋಸ್ಕರ ಮಾಡಿರುವ ಸಿದ್ಧತೆಗಳೇನಲ್ಲ. ಎಂದಿನಂತೆ ನಡೆಯುವ ಉತ್ಸವ ಎಂದಿದ್ದಾರೆ.
ಈ ಉತ್ಸವ ಪ್ರತಿ ಶುಕ್ರವಾರವು ನಡೆಯುವಂತ ಒಂದು ಸಾಮಾನ್ಯ ಪೂಜಾ ಪ್ರಕ್ರಿಯೆ. ಕೊಲ್ಲೂರಿನಲ್ಲಿ ಯಾರೇ ಬಂದರೂ ಕೂಡ ವಿಶೇಷವಾದ ಪೂಜೆ ಎನ್ನುವ ಯಾವುದೇ ಪರಿಪಾಠವಿಲ್ಲ. ಕೆಲವು ದೇವಸ್ಥಾನಗಳಲ್ಲಿ ವಿಶೇಷ ವ್ಯಕ್ತಿಗಳು ಬಂದಾಗ ಪದೇ ಪದೇ ಮಂಗಳಾರತಿ ಮಾಡುವ ಪ್ರಕ್ರಿಯೆ ಇದೆ.
ಆದರೆ ನಮ್ಮ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಈ ರೀತಿಯ ಯಾವುದೇ ಪೂಜಾ ಪ್ರಕ್ರಿಯೆಗಳು ಇಲ್ಲ. ಮಂಗಳಾರತಿಯ ಸಮಯದಲ್ಲಿ ಸಿಎಂ ವಿಜಯ್ ಅವರು ಆಗಮಿಸಿದರೆ ಅವರಿಗೆ ಮಂಗಳಾರತಿ ನೋಡುವ ಅವಕಾಶವಿದೆ. ದೇವರ ಮೇಲೆ ವಿಶ್ವಾಸ ಇರುವವರು ಎಲ್ಲರೂ ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಿಗೆ ಬರುತ್ತಾರೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅರ್ಚಕ ನಿತ್ಯಾನಂದ ಅಡಿಗ ಹೇಳಿಕೆ ಕೊಟ್ಟಿದ್ದಾರೆ.
ವರದಿ: ಕಿಶನ್, ನ್ಯೂಸ್18 ಕನ್ನಡ ಪ್ರತಿನಿಧಿ, ಉಡುಪಿ
Bangalore,Karnataka













