Last Updated:
PM Modi: ಸರ್ಕಾರಿ ಯೋಜನೆಗಳು ಅಂದ್ರೆ ವಿಳಂಬ, ಫೈಲ್ ತಿರುಗಾಟ ಅನ್ನೋ ಕಾಲ ಇನ್ಮುಂದೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ‘ಪ್ರಗತಿ’ ಸಭೆ ಈಗ ದೇಶದ ಅಭಿವೃದ್ಧಿಯ ಹಾದಿಯನ್ನೇ ಬದಲಿಸಲು ಸಜ್ಜಾಗಿದೆ.
ನವದೆಹಲಿಯಲ್ಲಿ ನಡೆದ 51ನೇ ಪ್ರಗತಿ ಸಭೆಯಲ್ಲಿ (Pragati Meeting) ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಮಿಷನ್ 2.0 (Swachh Bharat Mission 2.0) ಸೇರಿದಂತೆ ಪ್ರಮುಖ ಯೋಜನೆಗಳ ಅನುಷ್ಠಾನದ ಬಗ್ಗೆ ಖಡಕ್ ಸೂಚನೆ ನೀಡಿದ್ದಾರೆ. ಕೇವಲ ಮೂಲಸೌಕರ್ಯ (Infrastructure) ನಿರ್ಮಿಸಿದರೆ ಸಾಲದು, ಅದರ ಫಲಿತಾಂಶ (Measurable results) ಜನರಿಗೆ ನೇರವಾಗಿ ಕಾಣಬೇಕು ಎಂದು ಅವರು ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಇನ್ನು ಮುಂದೆ ಪ್ರತಿ ತಿಂಗಳು ರಾಜ್ಯ ಮಟ್ಟದಲ್ಲಿ ಯೋಜನೆಗಳ ಪರಿಶೀಲನೆ ನಡೆಯಲಿದ್ದು, ಹೊಣೆಗಾರಿಕೆ (Accountability) ಹೆಚ್ಚಾಗಲಿದೆ.
ದೇಶದಾದ್ಯಂತ ಘನತ್ಯಾಜ್ಯ ನಿರ್ವಹಣೆ (Solid waste management) ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಧಾನಿ ನಿರ್ದೇಶನ ನೀಡಿದ್ದಾರೆ. ಅದರಲ್ಲೂ ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಗೋವರ್ಧನ್ ಸ್ಥಾವರಗಳ ಕೆಲಸಗಳಲ್ಲಿ ಯಾವುದೇ ವಿಳಂಬ ಸಲ್ಲದು ಎಂದು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಯೋಜನೆಗಳು ಕಾಲಮಿತಿಯಲ್ಲಿ ಮುಗಿದರೆ ಮಾತ್ರ ನಾಗರಿಕರಿಗೆ ಸ್ವಚ್ಛ ಪರಿಸರದ ಲಾಭ ಸಿಗಲು ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಇಂಧನ ವಲಯದಲ್ಲಿ ನಗರ ಪ್ರದೇಶಗಳ ಪಾತ್ರವನ್ನು ಮೋದಿ ಅವರು ಹೈಲೈಟ್ ಮಾಡಿದ್ದಾರೆ. ವಸತಿ ಸಂಕೀರ್ಣಗಳು ಮತ್ತು ಸರ್ಕಾರಿ ಕಟ್ಟಡಗಳ ಮೇಲ್ಛಾವಣಿ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಕೆಯನ್ನು ‘ಮಿಷನ್ ಮೋಡ್’ನಲ್ಲಿ ಮಾಡುವಂತೆ ಕರೆ ನೀಡಿದ್ದಾರೆ. ಇದು ವಿದ್ಯುತ್ ಬಿಲ್ ಕಡಿಮೆ ಮಾಡುವುದಲ್ಲದೆ, ದೇಶವನ್ನು ಶುದ್ಧ ಇಂಧನದ (Clean energy) ಕಡೆಗೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದ್ದಾರೆ.
ರಸ್ತೆ ಮತ್ತು ಬಂದರು ಸಂಪರ್ಕ ಯೋಜನೆಗಳನ್ನು ಪರಿಶೀಲಿಸಿದ ಮೋದಿ, ವಾಧ್ವಾನ್ ಬಂದರನ್ನು ಕೇವಲ ಬಂದರಾಗಿ ನೋಡಬೇಡಿ ಎಂದಿದ್ದಾರೆ. ಇದನ್ನು ಹೆದ್ದಾರಿ, ಹೈ-ಸ್ಪೀಡ್ ರೈಲು ಮತ್ತು ಜಲಮಾರ್ಗಗಳೊಂದಿಗೆ ಬೆಸೆದು ಒಂದು ‘ರಾಷ್ಟ್ರೀಯ ದ್ವಾರ’ವಾಗಿ ಅಭಿವೃದ್ಧಿಪಡಿಸಬೇಕು. ಈ ಬಹು-ಮಾದರಿ ಸಂಪರ್ಕವು ದೇಶದ ಆರ್ಥಿಕತೆಗೆ ದೊಡ್ಡ ಬೂಸ್ಟ್ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯ ಬಗ್ಗೆ ಮಾತನಾಡುತ್ತಾ, ಇದು ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದಿದ್ದಾರೆ. ರಾಜ್ಯಗಳ ನಡುವಿನ ಜಲ ವಿವಾದಗಳನ್ನು ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆಯಿಂದ ಬಗೆಹರಿಸಬಹುದು ಎಂದು ಅವರು ತಿಳಿಸಿದ್ದಾರೆ. ಜಲ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣದಂತಹ ಕೆಲಸಗಳನ್ನು ಮಿಷನ್ ಮೋಡ್ನಲ್ಲಿ ಮಾಡಿದರೆ ರೈತರ ಬದುಕು ಬದಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಅವರ ಮತ್ತೊಂದು ಹೊಸ ಐಡಿಯಾ ಅಂದ್ರೆ ಕಾಲುವೆಗಳ ಬಳಕೆ. ಕಾಲುವೆಗಳ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನೆಲ್ ಹಾಕುವ ಸಾಧ್ಯತೆಗಳನ್ನು ಅಧ್ಯಯನ ಮಾಡಲು ಅವರು ಸೂಚಿಸಿದ್ದಾರೆ. ಇದರಿಂದ ನೀರಿನ ಆವಿಯಾಗುವಿಕೆ ತಡೆಯಬಹುದು ಮತ್ತು ಹೆಚ್ಚುವರಿ ಆರ್ಥಿಕ ಮೌಲ್ಯ ಸೃಷ್ಟಿಸಬಹುದು. ಇಂತಹ ನವೀನ ಚಿಂತನೆಗಳು ಅಭಿವೃದ್ಧಿಗೆ ಹೊಸ ಆಯಾಮ ನೀಡುತ್ತವೆ ಎಂಬುದು ಅವರ ಮಾತು.
ಯಾವುದೇ ಯೋಜನೆ ವಿಳಂಬವಾದರೆ ಅದರ ನೇರ ಹೊಡೆತ ಬೀಳುವುದು ಬಡವರ ಮೇಲೆ ಮತ್ತು ಸರ್ಕಾರಿ ಬೊಕ್ಕಸದ ಮೇಲೆ. ಇದನ್ನು ಮನಗಂಡಿರುವ ಮೋದಿ, ಅಡೆತಡೆಗಳನ್ನು ತೆಗೆದುಹಾಕಿ ಕೆಲಸ ವೇಗಗೊಳಿಸಲು ಸಚಿವಾಲಯಗಳಿಗೆ ತಾಕೀತು ಮಾಡಿದ್ದಾರೆ. ಇನ್ನು ಮುಂದೆ ಪ್ರತಿ ವಿಳಂಬಕ್ಕೂ ಉತ್ತರ ನೀಡಬೇಕಾದ ಕಾಲ ಬಂದಿದ್ದು, ಅಭಿವೃದ್ಧಿಯ ವೇಗಕ್ಕೆ ಇನ್ಮುಂದೆ ಯಾವುದೇ ಬ್ರೇಕ್ ಇರುವುದಿಲ್ಲ!













