Last Updated:
ಮೈಸೂರು ದಸರಾ ಸಂಭ್ರಮದ ನಡುವೆ ತೆಲುಗು ನಟ ಮಂಚು ಮನೋಜ್ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವದ ಸಂಭ್ರಮ ಕಳೆಗಟ್ಟಿರುವ ಬೆನ್ನಲ್ಲೇ, ಸ್ಯಾಂಡಲ್‍ವುಡ್ ಹಾಗೂ ಟಾಲಿವುಡ್‍ನ ಗಣ್ಯರು, ಸೆಲೆಬ್ರಿಟಿಗಳು ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ. ಇದರ ಭಾಗವಾಗಿ, ತೆಲುಗು (Telugu) ಚಿತ್ರರಂಗದ ಖ್ಯಾತ ನಟ, ಪಂಚಭಾಷಾ ನಟ ಡಾ. ಮೋಹನ್ ಬಾಬು ಅವರ ಪುತ್ರ ಮಂಚು ಮನೋಜ್ (Manchu Manoj) ಅವರು ಬುಧವಾರ ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ (Chamundeshwari) ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ
ದಸರಾ ಹಬ್ಬದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣದ ನಡುವೆಯೇ ಕುಟುಂಬದ ಸದಸ್ಯರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ನಟ ಮಂಚು ಮನೋಜ್, ದೇವಾಲಯದ ಒಳಗೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಟನಿಗೆ, ದೇವಸ್ಥಾನದ ಅರ್ಚಕರು ಪ್ರಸಾದ ನೀಡಿ ಗೌರವಿಸಿದರು.
ಅಭಿಮಾನಿಗಳ ಹರ್ಷೋದ್ಗಾರ
ತೆಲುಗು ಚಿತ್ರರಂಗದ ಜನಪ್ರಿಯ ನಟ ಮಂಚು ಮನೋಜ್ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ, ದೇವಸ್ಥಾನದ ಆವರಣದಲ್ಲಿದ್ದ ಭಕ್ತರು ಹಾಗೂ ಅವರ ಅಭಿಮಾನಿಗಳು ಅವರನ್ನು ಗುರುತಿಸಿ ಅಚ್ಚರಿಪಟ್ಟರು. ನಟನ ಸರಳತೆಯ ನಡಿಗೆಯನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ಹತ್ತಿರದಿಂದ ನೋಡಲು ಮುಗಿಬಿದ್ದರು. ದಸರಾ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಇದರ ಜೊತೆಗೆ ಚಾಮುಂಡಿ ಬೆಟ್ಟದಲ್ಲಿ ಸೆಲೆಬ್ರಿಟಿಗಳ ಭೇಟಿಯೂ ಹೆಚ್ಚಾಗಿರುವುದು ವಿಶೇಷ ಮೆರುಗು ತಂದಿದೆ.













