Last Updated:
ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ (WCL 2026) ಟೂರ್ನಿಯಲ್ಲಿ ಆಸ್ಟೇಲಿಯಾ ಯುವರಾಜ್ ಸಿಂಗ್ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 71 ರನ್‌ಗಳ ಗಳಿಸಿದ್ದಾರೆ.
2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ (England) ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಒಂದೇ ಓವರ್ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಇತಿಹಾಸ ಬರೆದಿದ್ದರು. ಈ ಐತಿಹಾಸಿಕ ಕ್ಷಣ ಈಗಲೂ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಆದ್ರೀಗ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ (Yuvraj Singh) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ (Cricket) ಗುಡ್ ಬೈ ಹೇಳಿದ್ದಾರೆ. ಆದ್ರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿರುವ ಯುವರಾಜ್ ಸಿಂಗ್ ಮತ್ತೆ ತಮ್ಮ ಬಿರುಸಿನ ಬ್ಯಾಟಿಂಗ್ನಿಂದ ಗಮನ ಸೆಳೆದಿದ್ದಾರೆ.
ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ (WCL 2026) ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಯುವರಾಜ್ ಸಿಂಗ್ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 71 ರನ್‌ಗಳ ಗಳಿಸಿದ್ದಾರೆ. ಯುವರಾಜ್ ಸಿಂಗ್ ಅವರ ಈ ಸ್ಪೋಟಕ ಇನ್ನಿಂಗ್ಸ್ನಿಂದ ಇಂಡಿಯಾ ಚಾಂಪಿಯನ್ಸ್ ತಂಡ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.
ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಶನಿವಾರ ಇಂಡಿಯಾ ಚಾಂಪಿಯನ್ಸ್ ಹಾಗೂ ಆಸ್ಟ್ರೇಲಿಯಾ ಚಾಂಪಿಯನ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವು 46 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 16.2 ಓವರ್‌ಗಳಲ್ಲಿ 150 ರನ್‌ಗಳಿಗೆ ಸರ್ವಪತನ ಕಂಡಿತು.
ಇನ್ನು, ಭಾರತದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭವು ಉತ್ತಮವಾಗಿರಲಿಲ್ಲ. ನಾಯಕ ಉಸ್ಮಾನ್ ಖಾವಾಜಾ (0) ಹಾಗೂ ಮೂರನೇ ಕ್ರಮಾಂಕದಲ್ಲಿ ಬಂದ ಬೆನ್ ಡಂಕ್ (06) ಬೇಗನೆ ವಿಕೆಟ್ ಒಪ್ಪಿಸಿದರು. ಇದರ ಬಳಿಕ ಡಾರ್ಸಿ ಶಾರ್ಟ್ ಮತ್ತು ಜೋ ಬರ್ನ್ಸ್ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಇವರಿಬ್ಬರೂ ಸೇರಿ ಕೇವಲ 9ನೇ ಓವರ್‌ನಲ್ಲೇ ಆಸ್ಟ್ರೇಲಿಯಾ ಸ್ಕೋರ್ ಅನ್ನು 100 ರನ್‌ಗಳ ಗಡಿ ದಾಟಿಸಿದರು.
ಶಾರ್ಟ್ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್‌ಗಳೊಂದಿಗೆ 65 ರನ್ ಗಳಿಸಿ ಔಟಾದರು. ಮತ್ತೊಂದೆಡೆ ಬರ್ನ್ಸ್ 32 ಎಸೆತಗಳಲ್ಲಿ 4 ಸಿಕ್ಸರ್‌ಗಳ ಸಹಾಯದಿಂದ 45 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ಆದರೆ ಇದರ ಬಳಿಕ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಮತ್ತೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಕ್ಯಾಲಮ್ ಫರ್ಗುಸನ್ (00), ಜೊನಾಥನ್ ವೆಲ್ಸ್ (11), ನಾಥನ್ ಕೌಲ್ಟರ್ ನೈಲ್ (00), ಕೇನ್ ರಿಚರ್ಡ್ಸನ್ (04), ಬೆನ್ ಹಿಲ್ಫೆನ್‌ಹಾಸ್ (01) ಮತ್ತು ಫವಾದ್ ಅಹ್ಮದ್ (09) ರನ್‌ಗಳಿಸಿ ಔಟಾದರು.
ಇಂಡಿಯಾ ಚಾಂಪಿಯನ್ಸ್ ಪರ ಬೌಲಿಂಗ್‌ನಲ್ಲಿ ಮೋಹಿತ್ ಶರ್ಮಾ 3 ವಿಕೆಟ್ ಹಾಗೂ ಧವನ್ ಕುಲಕರ್ಣಿ 4 ವಿಕೆಟ್ ಪಡೆದು ಮಿಂಚಿದರೆ, ಸ್ಪಿನ್ನರ್ ಪೀಯೂಷ್ ಚಾವ್ಲಾ 2 ವಿಕೆಟ್ ಮತ್ತು ಹರ್ಭಜನ್ ಸಿಂಗ್ 1 ವಿಕೆಟ್ ಪಡೆದು ಗೆಲುವಿಗೆ ಕಾರಣರಾದರು.














