Last Updated:
ಪ್ರದೋಷ್ ಗೆ ಊಟದ ವಿರಾಮದ ಸಮಯದಲ್ಲಿಯೂ ಹೇಳಿಕೆ ಕಲಿಸಲಾಗುತ್ತಿದೆ ಎಂಬ ಆರೋಪವನ್ನು ದರ್ಶನ್ ಪರ ವಕೀಲರು ಮಾಡಿದ್ದಾರೆ. ಈ ಆರೋಪದ ಕುರಿತು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ತಮ್ಮ ವಾದ ಮಂಡಿಸಿದ್ದಾರೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮಾಫಿ ಸಾಕ್ಷಿಯಾಗಿರುವ ಪ್ರದೋಷ್ (Pradosh) ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ. ಈ ನಡುವೆ ಪ್ರದೋಷ್ ನ ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವಾಗ ಯಾರೊಂದಿಗೂ ಮಾತನಾಡಲು ಅಥವಾ ಬೇರೆ ವ್ಯಕ್ತಿಗಳನ್ನು ಭೇಟಿಯಾಗಲು ಅವಕಾಶ ನೀಡಬಾರದು ಎಂದು ದರ್ಶನ್ (Darshan) ಪರ ವಕೀಲರು 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಇದೀಗ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದು, ಪ್ರದೋಷ್ ಗೆ ಭದ್ರತೆ ಒದಗಿಸುವ ವ್ಯವಸ್ಥೆ ಹಾಗೂ ಜೈಲಿನಲ್ಲಿಡಲು ಇರುವ ಕಾರಣಗಳ ಬಗ್ಗೆ ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ.
ಪ್ರದೋಷ್ ಮಾಫಿ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಜೈಲಿನಲ್ಲಿ ಇರಿಸಿರುವುದಕ್ಕೆ ಕಾರಣವಿದೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮೊದಲು ಪ್ರಾಸಿಕ್ಯೂಷನ್ ಪರವಾಗಿ ಅವರ ಹೇಳಿಕೆ ದಾಖಲಿಸಬೇಕು. ಬಳಿಕ ಅವರು ಹೊರಗೆ ಬಂದರೆ ಪ್ರಕರಣದ ಆರೋಪಿಗಳಿಂದ ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇರಬಾರದು ಎಂಬ ಕಾರಣಕ್ಕೆ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ ಎಂದು ವಾದಿಸಿದ್ದಾರೆ.
ಮಾಫಿ ಸಾಕ್ಷಿ ಹೇಳಿಕೆ ನೀಡಿದ ನಂತರ ಹೊರಗಿನ ಸಂಪರ್ಕದಿಂದ ಪ್ರಭಾವಿತರಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಇದೇ ಕಾರಣಕ್ಕೆ ಅವರನ್ನು ಜೈಲಿನಲ್ಲಿರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಸಿಕ್ಯೂಷನ್ ಪರವಾಗಿ ನ್ಯಾಯಾಲಯಕ್ಕೆ ವಿವರಿಸಲಾಗಿದೆ.
ಪ್ರದೋಷ್ ನ ನ್ಯಾಯಾಲಯಕ್ಕೆ ಕರೆತರುವ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರ ಎಸ್ಕಾರ್ಟ್ ನೀಡುವಂತೆ ಪ್ರಾಸಿಕ್ಯೂಷನ್ ಕೋರಿಲ್ಲ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಭದ್ರತೆ ಒದಗಿಸುವ ಉದ್ದೇಶದಿಂದ ಮಾತ್ರ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ನ್ಯಾಯಾಲಯ ಎಸ್ಕಾರ್ಟ್ ಅಗತ್ಯವಿಲ್ಲ ಎಂದು ಹೇಳಿದರೆ, ಕಾಮಾಕ್ಷಿಪಾಳ್ಯ ಪೊಲೀಸರಿಗೆ ಪ್ರದೋಷ್ ಜೊತೆ ಎಸ್ಕಾರ್ಟ್ ನೀಡುವ ಅಗತ್ಯವಿರುವುದಿಲ್ಲ ಎಂದು ಎಸ್‌ಪಿಪಿ ಹೇಳಿದ್ದಾರೆ. ಹೀಗಾಗಿ ಪೊಲೀಸರು ಪ್ರದೋಷ್ ಜೊತೆ ಇರುವುದಕ್ಕೆ ಬೇರೆ ಉದ್ದೇಶವಿಲ್ಲ, ಅವರ ಭದ್ರತೆಗಾಗಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಸಿಕ್ಯೂಷನ್ ಪರವಾಗಿ ವಾದಿಸಲಾಗಿದೆ.
ಇದೇ ವೇಳೆ ಪ್ರದೋಷ್ ಗೆ ಊಟದ ವಿರಾಮದ ಸಮಯದಲ್ಲಿಯೂ ಹೇಳಿಕೆ ಕಲಿಸಲಾಗುತ್ತಿದೆ ಎಂಬ ಆರೋಪವನ್ನು ದರ್ಶನ್ ಪರ ವಕೀಲರು ಮಾಡಿದ್ದಾರೆ. ಈ ಆರೋಪದ ಕುರಿತು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ತಮ್ಮ ವಾದ ಮಂಡಿಸಿದ್ದಾರೆ.
ಹೀಗಾಗಿ ಪೊಲೀಸರು ಪ್ರದೋಷ್ ಜೊತೆ ಏನು ಮಾಡುತ್ತಿದ್ದಾರೆ, ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಅಥವಾ ಅವರೊಂದಿಗೆ ಹೇಗೆ ವರ್ತಿಸುತ್ತಿದ್ದಾರೆ ಎಂಬುದಕ್ಕೆ ದಾಖಲೆಗಳು ಇವೆ ಎಂದು ಪ್ರಾಸಿಕ್ಯೂಷನ್ ಪರವಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಪ್ರದೋಷ್ ನ ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವ ಸಂದರ್ಭದಲ್ಲಿ ಸಂಪರ್ಕ ಮತ್ತು ಭದ್ರತೆಗೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿಯ ಕುರಿತು 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆದಿದೆ. ದರ್ಶನ್ ಪರ ವಕೀಲರ ವಾದ ಹಾಗೂ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರ ವಾದವನ್ನು ಆಲಿಸಿದ ನ್ಯಾಯಾಲಯ ಇದೀಗ ಆದೇಶವನ್ನು ಕಾಯ್ದಿರಿಸಿದೆ. ಅಕ್ಟೋಬರ್ 5ರಂದು ಈ ಅರ್ಜಿಗೆ ಸಂಬಂಧಿಸಿದಂತೆ ಆದೇಶ ಹೊರಬರುವ ನಿರೀಕ್ಷೆಯಿದೆ.
ವರದಿ: ಮಂಜುನಾಥ್ ಎನ್, ನ್ಯೂಸ್ 18 ಕನ್ನಡ ಪ್ರತಿನಿಧಿ, ಬೆಂಗಳೂರು














