ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದ ಪ್ರಶಾಂತ್, ಜಗ್ಗ ಮಮ್ಮಿ ಎಂದೇ ಕರೆಯಲ್ಪಡುವ ಜಗದೀಶ್ ಜೊತೆ ತುಂಬಾನೇ ಆತ್ಮೀಯವಾಗಿ ಮಾತನಾಡಿದ್ದಾರೆ. ಬಿಗ್ ಬಾಸ್ ತಮಗೆ ಇಮ್ಯುನಿಟಿ ಪವರ್ ನೀಡಿದ್ದಾರೆ ಹಾಗೂ ಫೋನ್ ಕೂಡ ನೀಡಲಾಗಿದೆ ಎಂದು ಪ್ರಶಾಂತ್ ಹೇಳಿದ್ದಾರೆ. ರಾತ್ರಿ ಫೋನ್ ಕೊಡುತ್ತೇನೆ, ಮಾತನಾಡಿ ಎಂದು ಜಗ್ಗ ಮಮ್ಮಿಗೆ ಹೇಳುವ ಮೂಲಕ ತುಸು ಕಾಡಿಸಿದ್ದಾರೆ.
ಆದರೆ ಈ ಮಾತಿನ ಸಂದರ್ಭದಲ್ಲೇ ಜಗ್ಗ ಮಮ್ಮಿ ತಮ್ಮ ವೈಯಕ್ತಿಕ ಜೀವನದ ನೋವನ್ನು ಹಂಚಿಕೊಂಡಿದ್ದಾರೆ. ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಚಾರವನ್ನು ಹೇಳಿಕೊಂಡ ಅವರು, ತಾಯಿಗೆ ಏನೂ ಆಗದಿದ್ದರೆ ಸಾಕು ಎಂದು ಭಾವುಕರಾಗಿದ್ದಾರೆ.
ಪ್ರಶಾಂತ್ ಮುಂದೆ ಮನಸ್ಸು ಬಿಚ್ಚಿ ಮಾತನಾಡಿದ ಜಗದೀಶ್, ತಮ್ಮ ಜೀವನದಲ್ಲಿ ತಾಯಿ ಮತ್ತು ಮಗಳೇ ಪ್ರಮುಖರು ಎಂದು ಹೇಳಿದ್ದಾರೆ. ತಮ್ಮ ತಾಯಿಯೇ ತಮ್ಮ ಪ್ರಪಂಚವಾಗಿದ್ದು, ಅವರ ಆರೋಗ್ಯದ ಬಗ್ಗೆ ಆತಂಕವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ತಮ್ಮ ತಾಯಿಗೆ ಏನೂ ಆಗಬಾರದು ಎಂಬುದು ತಮ್ಮ ಬಯಕೆ ಎಂದು ಜಗದೀಶ್ ಹೇಳಿದ್ದಾರೆ. ತಾಯಿಗೆ ಏನಾದರೂ ಆದರೆ ತಾವು ಏನು ಮಾಡಬೇಕು ಎಂಬ ಭಯ ಕಾಡುತ್ತಿದೆ ಎಂದು ನೋವು ವ್ಯಕ್ತಪಡಿಸಿದ್ದಾರೆ.
ತಮ್ಮ ಕುಟುಂಬದ ಪರಿಸ್ಥಿತಿಯ ಬಗ್ಗೆಯೂ ಜಗ್ಗ ಮಮ್ಮಿ ಮಾತನಾಡಿದ್ದಾರೆ. ತನಗೆ ನಾಲ್ಕು ಮಂದಿ ಅಣ್ಣಂದಿರಿದ್ದರೂ, ಕಷ್ಟದ ಸಂದರ್ಭದಲ್ಲಿ ತಮ್ಮನ್ನು ನೋಡಿಕೊಳ್ಳಲು ಯಾರೂ ಮುಂದೆ ಬರಲಿಲ್ಲ ಎಂದು ಹೇಳಿದ್ದಾರೆ. ಒಂದು ಹಂತದಲ್ಲಿ ಬದುಕುವುದೇ ಯಾಕೆ ಎಂದು ಅನಿಸಿತ್ತು ಎಂಬ ನೋವಿನ ಮಾತನ್ನೂ ಹಂಚಿಕೊಂಡಿದ್ದಾರೆ.
ತಮ್ಮ ಮಗಳು ಅಜ್ಜಿ ಮನೆಯಲ್ಲಿದ್ದಾಳೆ ಎಂದು ಹೇಳಿದ ಜಗ್ಗ ಮಮ್ಮಿ, ಮಗಳ ಸ್ಥಿತಿಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ತಾಯಿ ಆಸ್ಪತ್ರೆಯಲ್ಲಿರುವಾಗ ತಾವು ಬಿಗ್ ಬಾಸ್ ಮನೆಯಲ್ಲಿ ಇರುವುದರಿಂದ ಮಗಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ.
ಅಮ್ಮ ಆಸ್ಪತ್ರೆಯಲ್ಲಿದ್ದಾರೆ. ನನ್ನ ಮಗಳು ತಬ್ಬಲಿಯಾಗಿಬಿಡುತ್ತಾಳೆ ಎಂಬ ಭಯವಾಗುತ್ತಿದೆ. ನನ್ನ ಪ್ರೀತಿಯೂ ಇಲ್ಲ, ತಾಯಿಯ ಪ್ರೀತಿಯೂ ಇಲ್ಲ. ಭಯವಾಗುತ್ತಿದೆ ಎಂದು ಜಗ್ಗ ಮಮ್ಮಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಜಗ್ಗ ಮಮ್ಮಿ ಕಣ್ಣೀರಿಡುತ್ತಿರುವುದನ್ನು ನೋಡಿದ ಪ್ರಶಾಂತ್, ಅವರಿಗೆ ಧೈರ್ಯ ತುಂಬಿದ್ದಾರೆ. ಈ ಮನೆಯಲ್ಲಿ ತನಗೆ ಜಗ್ಗ ಮಮ್ಮಿ ಒಬ್ಬರೇ ಇಷ್ಟ ಎಂದು ಹೇಳಿದ ಪ್ರಶಾಂತ್, ಹೆಚ್ಚು ಯೋಚನೆ ಮಾಡಬೇಡಿ, ತಾನು ಜೊತೆಗಿದ್ದೇನೆ ಎಂದು ಭರವಸೆ ನೀಡಿದ್ದಾರೆ.
ಅಣ್ಣಾ, ಈ ಮನೆಯಲ್ಲಿ ನೀನೊಬ್ಬನೇ ನನಗೆ ಇಷ್ಟ. ಯೋಚನೆ ಮಾಡಬೇಡ, ನಾನಿದ್ದೀನಿ. ನಿನಗೋಸ್ಕರ ನಾನು ನಿಂತುಕೊಳ್ಳುತ್ತೇನೆ ಎಂದು ಪ್ರಶಾಂತ್ ಹೇಳಿದ್ದಾರೆ.













