Last Updated:
ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟದ ಪ್ರಯೋಗ ನಡೆಸಿದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್‌ಗೆ (Drone Prathap) ಕೊನೆಗೂ ರಿಲೀಫ್ ಸಿಕ್ಕಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟದ ಪ್ರಯೋಗ ನಡೆಸಿದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್‌ಗೆ (Drone Prathap) ಕೊನೆಗೂ ರಿಲೀಫ್ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದ ಸ್ಫೋಟದ ವಿಡಿಯೋ ಆಧರಿಸಿ ದಾಖಲಿಸಲಾಗಿದ್ದ ಪ್ರಕರಣದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ತೀರ್ಪಿನ ಬಳಿಕ ಡ್ರೋನ್ ಪ್ರತಾಪ್ ವಿಡಿಯೋ ಮಾಡಿ ಭಾವುಕರಾಗಿ ಮಾತನಾಡಿದ್ದು, ಕಣ್ಣೀರಿಟ್ಟಿದ್ದಾರೆ
ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಬಳಸಿ ಸ್ಫೋಟದ ಪ್ರಯೋಗ ನಡೆಸಿದ್ದರು. ಈ ಪ್ರಯೋಗವನ್ನು ವಿಡಿಯೋ ಮಾಡಿಸಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಪೊಲೀಸರ ಗಮನಕ್ಕೆ ಬಂದಿತ್ತು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋವನ್ನು ಆಧರಿಸಿ ಮಿಡಿಗೇಶಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಡ್ರೋನ್ ಪ್ರತಾಪ್ ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಹೈಕೋರ್ಟ್ ತೀರ್ಪು ಹೊರಬಂದ ಬಳಿಕ ಡ್ರೋನ್ ಪ್ರತಾಪ್ ವಿಡಿಯೋ ಮೂಲಕ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಈ ವೇಳೆ ಡ್ರೋನ್ ಪ್ರತಾಪ್ ಗಳಗಳನೆ ಅತ್ತಿದ್ದು, ಕೊನೆಗೂ ತನಗೆ ಜಯ ಸಿಕ್ಕಿದೆ ಎಂದು ಭಾವುಕರಾಗಿ ಹೇಳಿದ್ದಾರೆ.
ಎಲ್ಲಾ ಕೇಸ್‌ಗಳಿಂದ ಮುಕ್ತಗೊಳಿಸಲಾಗಿದೆ. ನನ್ನ ವಿರುದ್ಧ ಹೇಳಬಾರದ್ದನ್ನೆಲ್ಲ ಹೇಳಿದರು. ಏನೇನೋ ಬರೆದರು. ಕೊನೆಗೂ ದೇವರು ಕಣ್ಣುಬಿಟ್ಟ. ನನಗೆ ಜಯ ಸಿಕ್ಕಿದೆ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.
ಡ್ರೋನ್ ಪ್ರತಾಪ್ ಬಂಧನದ ಬಳಿಕ ಪೊಲೀಸರು ಅವರ ಇಬ್ಬರು ಸ್ನೇಹಿತರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ನ್ಯಾಯಾಲಯದಿಂದ ಜಾಮೀನು ದೊರೆತಿತ್ತು.
ಇದೀಗ ಹೈಕೋರ್ಟ್ ಎಫ್‌ಐಆರ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಡ್ರೋನ್ ಪ್ರತಾಪ್‌ಗೆ ದೊಡ್ಡ ಮಟ್ಟದ ಕಾನೂನು ರಿಲೀಫ್ ಸಿಕ್ಕಂತಾಗಿದೆ. ತೀರ್ಪಿನ ಬಳಿಕ ಹಂಚಿಕೊಂಡಿರುವ ಭಾವುಕ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.














