Last Updated:
ಇಂದು ಪ್ರಧಾನಿ ಮೋದಿ ಅವರ 76ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಚಹಾ ವ್ಯಾಪಾರಿಯೊಬ್ಬರು ಮೋದಿ ಹುಟ್ಟುಹಬ್ಬಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿ, 76 ಕಪ್ ಉಚಿತ ಚಹಾ ನೀಡಿ ಅಭಿಮಾನ ಮೆರೆದಿದ್ದಾರೆ.
ಇಂದು ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ (PM Narendra Modi) ಅವರ ಹುಟ್ಟುಹಬ್ಬ. ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ (Birthday) ಸಂದರ್ಭದಲ್ಲಿ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಒಂದು ವಿಶಿಷ್ಟ ಘಟನೆ ನಡೆದಿದೆ. ಕತಿಹಾರ್ನ ಮೆಡಿಕಲ್ ಕಾಲೇಜ್ ಮೋರ್ನಲ್ಲಿ ಚಹಾ ಅಂಗಡಿ ನಡೆಸುವ ಜವಾಹರ್ ಭಗತ್ ಒಬ್ಬರು ವಿಶೇಷವಾಗಿ ಮೋದಿಗೆ ಅಭಿಮಾನ ಮೆರೆದಿದ್ದಾರೆ. ಸಾರ್ವಜನಿಕರಿಗೆ 76 ಕಪ್ ಬಿಸಿ ಚಹಾವನ್ನು ಉಚಿತವಾಗಿ ವಿತರಿಸಿದ್ದಾರೆ.
ಭಗತ್ ಅವರು ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಅಂಗಡಿಗೆ ಬಂದ ಮೊದಲ 76 ಗ್ರಾಹಕರಿಗೆ ಉಚಿತ ಚಹಾ ನೀಡಿದ್ದಾರೆ. ಪ್ರಧಾನಿ ಅವರು 76ನೇ ವಯಸ್ಸಿಗೆ ಕಾಲಿಟ್ಟ ಸಂಕೇತವಾಗಿ ಈ ಕಾರ್ಯಕ್ರಮವನ್ನು ನಡೆಸಿದ್ದೇನೆ ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ ಜವಾಹರ್ ಭಗತ್, ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬರು ಪ್ರಧಾನಿ ಹುದ್ದೆಗೆ ಏರಿದ್ದು ತಮಗೆ ಸ್ಫೂರ್ತಿ ಎಂದು ತಿಳಿಸಿದ್ದಾರೆ. ಭಗತ್ ಅವರು ‘ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಆದರೆ ಬಡವರು ಮತ್ತು ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಸಿಗುತ್ತಿರುವುದು ಮುಖ್ಯ. ಸ್ವತಃ ಚಹಾ ಮಾರುತ್ತಿದ್ದ ಮೋದಿ ಅವರ ಪರಿಶ್ರಮದ ಬದುಕು ನಮ್ಮಂತಹ ಬೀದಿ ವ್ಯಾಪಾರಿಗಳಿಗೆ ದಾರಿದೀಪ’ ಎಂದು ಹೇಳಿದ್ದಾರೆ.
ದೇಶಾದ್ಯಂತ ಸಣ್ಣ ಚಹಾ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ಪ್ರತ್ಯೇಕ ಕಲ್ಯಾಣ ಯೋಜನೆ ರೂಪಿಸಬೇಕು ಎಂಬ ಮನವಿಯನ್ನು ಅವರು ಮುಂದಿಟ್ಟಿದ್ದಾರೆ. ಯೋಜನೆ ಜಾರಿಯಾಗಲಿ ಅಥವಾ ಆಗದಿರಲಿ, ತಮ್ಮ ಅಭಿಮಾನ ಕಡಿಮೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ 20 ವರ್ಷಗಳಿಂದ ಅವರ ಅಂಗಡಿಯಲ್ಲಿ ಚಹಾ ಕುಡಿಯುತ್ತಿರುವ ಆನಂದ್ ಸಿಂಗ್ ಸೇರಿದಂತೆ ಸ್ಥಳೀಯರು ಈ ಕಾರ್ಯಕ್ರಮವನ್ನು ಗಮನಿಸಿದ್ದಾರೆ. ಅಲ್ಲದೇ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17, 1950ರಂದು ಗುಜರಾತ್ನ ವಡ್ನಗರದಲ್ಲಿ ಜನಿಸಿದರು. ಬಾಲ್ಯದಲ್ಲಿ ತಂದೆಯ ಜೊತೆ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ “ಚಾಯ್ ಪೇ ಚರ್ಚಾ” ಅಭಿಯಾನವನ್ನು ನಡೆಸಲಾಗಿತ್ತು. ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ‘ಪಿಎಂ ಸ್ವನಿಧಿ’ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಗ್ಯಾರಂಟಿ ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರಕುತ್ತದೆ. ಲಕ್ಷಾಂತರ ವ್ಯಾಪಾರಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸರ್ಕಾರ ಹೇಳುತ್ತದೆ.
ಪ್ರಧಾನಿ ಅವರ 76ನೇ ಜನ್ಮದಿನ ಮತ್ತು 25 ವರ್ಷಗಳ ಸಾರ್ವಜನಿಕ ಜೀವನದ ಸಂದರ್ಭದಲ್ಲಿ ದೇಶಾದ್ಯಂತ ರಕ್ತದಾನ ಶಿಬಿರಗಳು, ಸ್ಯಾಂಡ್ ಆರ್ಟ್, ಬೈಕ್ ರ್ಯಾಲಿಗಳು ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ಥಳೀಯ ಅಭಿಮಾನಿಗಳ ವಿಶಿಷ್ಟ ಆಚರಣೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿವೆ. ಕತಿಹಾರ್ನ ಈ ಘಟನೆ ಸ್ಥಳೀಯ ಮಟ್ಟದ ಒಂದು ಉದಾಹರಣೆಯಾಗಿದೆ. ಚಹಾ ವ್ಯಾಪಾರಿ ಜವಾಹರ್ ಭಗತ್ ಅವರು 76 ಕಪ್ ಉಚಿತ ಚಹಾ ನೀಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.














