Last Updated:
ನಟಿ ಶ್ರೀದೇವಿ ಅವರ ಕುಟುಂಬಕ್ಕೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ ನೀಡಿದೆ.
ಶ್ರೀದೇವಿ (Sridevi) ಭಾರತದ ಮೊಟ್ಟ ಮೊದಲ ಲೇಡಿ ಸೂಪರ್ ಸ್ಟಾರ್, ತನ್ನ ಸೌಂದರ್ಯ ಮತ್ತು ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದ ನಟಿ ಇನ್ನು ನೆನಪು ಮಾತ್ರ. ಸದ್ಯ, ನಟಿ ಶ್ರೀದೇವಿ ಅವರ ಕುಟುಂಬಕ್ಕೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಸಲಹೆ ನೀಡಿದೆ.
ಚೆನ್ನೈನ ಶೋಲಿಂಗನಲ್ಲೂರು ಪ್ರದೇಶದಲ್ಲಿರುವ ಸುಮಾರು 4.77 ಎಕರೆ ಭೂಮಿಗೆ ಸಂಬಂಧಿಸಿದ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ನ ಮಾಜಿ ನ್ಯಾಯಾಧೀಶರೊಬ್ಬರನ್ನು ಮಧ್ಯಸ್ಥಗಾರರನ್ನಾಗಿ ನೇಮಿಸುವುದಾಗಿ ತಿಳಿಸಿದೆ.
ಇದೇ ವಿಚಾರವಾಗಿ ಕಪೂರ್ ಕುಟುಂಬವು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವರ್ಷದ ಮೇ ತಿಂಗಳಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿ ಟಿ.ವಿ. ತಮಿಳ್ಸೆಲ್ವಿ ಅವರ ಪೀಠವು ಬೋನಿ ಕಪೂರ್ ಮತ್ತು ಅವರ ಪುತ್ರಿಯರಿಗೆ ರಿಲೀಫ್ ನೀಡಿತು. ಕೆಳ ನ್ಯಾಯಾಲಯದಲ್ಲಿ ಹೂಡಲಾಗಿದ್ದ ಸಿವಿಲ್ ಸೂಟ್ ಅನ್ನು ಆ ಪೀಠವು ತಳ್ಳಿಹಾಕಿತು. 1988ರಲ್ಲಿ ನಡೆದ ಮಾರಾಟವನ್ನು ಸುಮಾರು 40 ವರ್ಷಗಳ ಬಳಿಕ ಪ್ರಶ್ನಿಸಲಾಗಿದೆ ಮತ್ತು ಕಾನೂನಿನಲ್ಲಿ ನಿಗದಿಪಡಿಸಲಾದ ಕಾಲಮಿತಿಯ ಕಾರಣದಿಂದ ಈ ವಾದವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿತು.
ನ್ಯಾಯಮೂರ್ತಿ ಕೆ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಅರುಣ್ ಪಲ್ಲಿ ಅವರ ಪೀಠವು ಆಸ್ತಿಗೆ ಸಂಬಂಧಿಸಿದಂತೆ ಯಥಾಸ್ಥಿತಿ (Status Quo) ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದೆ. ಅಂದರೆ ಮುಂದಿನ ವಿಚಾರಣೆಯವರೆಗೆ ಭೂಮಿಯ ಪ್ರಸ್ತುತ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 18 ರಂದು ನಡೆಯಲಿದೆ. ಎರಡು ಕಡೆಯವರು ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಕೋರ್ಟ್ ಸಲಹೆ ನೀಡಿದೆ.














