Last Updated:
ಬಿಜೆಪಿಯ ವಿಜಯಯಾತ್ರೆಗೆ ಬ್ರೇಕ್ ಹಾಕಲು ಮತ್ತು ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಉನ್ನತ ಮಟ್ಟದ ಸರಣಿ ಸಭೆಗಳು ನಡೆದಿವೆ ಎಂದು ತಿಳಿದುಬಂದಿದೆ.
ನವದೆಹಲಿ: ಮುಂಬರುವ 2029ರ ಲೋಕಸಭಾ ಚುನಾವಣೆಯನ್ನು (2029 Lok Sabha elections) ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ (Congress High Command) ಭರ್ಜರಿ ರಣತಂತ್ರ ಹಾಗೂ ಪೂರ್ವತಯಾರಿಯನ್ನು ಈಗಿನಿಂದಲೇ ಆರಂಭಿಸಿದೆ. ಬಿಜೆಪಿಯ ವಿಜಯಯಾತ್ರೆಗೆ ಬ್ರೇಕ್ ಹಾಕಲು ಮತ್ತು ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಉನ್ನತ ಮಟ್ಟದ ಸರಣಿ ಸಭೆಗಳು ನಡೆದಿವೆ. ಈ ಮೂಲಕ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಶೈಲಿಯನ್ನು ಬದಲಾಯಿಸಿ ಹೊಣೆಗಾರಿಕೆಯುಳ್ಳ ಹೊಸ ವ್ಯವಸ್ಥೆಯನ್ನು ರೂಪಿಸಲು ಮುಂದಾಗಿದೆ.
ಈ ಮಾಸ್ಟರ್ ಪ್ಲಾನ್ನ ಮೊದಲ ಹಂತವಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ (AICC) ಹೊಸ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ತಳಮಟ್ಟದ ಜವಾಬ್ದಾರಿಯನ್ನು ಹೊರಲಿರುವ 65ಕ್ಕೂ ಹೆಚ್ಚು ಕಾರ್ಯದರ್ಶಿಗಳ ಹುದ್ದೆಗಳಿಗಾಗಿ ಅತ್ಯಂತ ಕಟ್ಟುನಿಟ್ಟಿನ ಸ್ಕ್ರೀನಿಂಗ್ (ಪರಿಶೀಲನೆ) ಪ್ರಕ್ರಿಯೆ ನಡೆಯುತ್ತಿದೆ.
ಕಾಂಗ್ರೆಸ್ ಮೈದಾನದಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ಇಂದಿನ ಯುವ ಪೀಳಿಗೆಯ (Gen Z) ಮತದಾರರನ್ನು ಸೆಳೆಯಬಲ್ಲ ಕೌಶಲ್ಯ ಹೊಂದಿರುವ ಯುವ ಮುಖಗಳನ್ನು ಈ ಹುದ್ದೆಗಳಿಗೆ ಪರಿಶೀಲಿಸಲಾಗುತ್ತಿದೆ. ಕಾಂಗ್ರೆಸ್ ಸಂಘಟನೆ ಅತ್ಯಂತ ದುರ್ಬಲವಾಗಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರಗಳಂತಹ ದೊಡ್ಡ ರಾಜ್ಯಗಳ ಮೇಲೆ ಹೈಕಮಾಂಡ್ ವಿಶೇಷ ಗಮನ ಹರಿಸಿದೆ.
ಕಾಂಗ್ರೆಸ್ ಪಕ್ಷದೊಳಗೆ ಪ್ರಿಯಾಂಕಾ ಗಾಂಧಿ ಅವರಿಗೆ ದೊಡ್ಡ ಜವಾಬ್ದಾರಿ ನೀಡಬೇಕೆಂಬ ಬೇಡಿಕೆ ದೀರ್ಘಕಾಲದಿಂದ ಇತ್ತು. ಇದನ್ನು ಮನಗಂಡು 2029ರ ಚುನಾವಣೆಗಾಗಿ ‘ಎಲೆಕ್ಷನ್ ಮ್ಯಾನೇಜ್ಮೆಂಟ್ ಸ್ಟ್ರ್ಯಾಟಜಿ ಗ್ರೂಪ್’ (ಚುನಾವಣಾ ನಿರ್ವಹಣಾ ರಣತಂತ್ರ ಸಮಿತಿ) ರಚಿಸಲು ಯೋಜಿಸಲಾಗಿದೆ.
ಈ ಸಮಿತಿಯ ಸಂಪೂರ್ಣ ಕಮಾಂಡ್ ಪ್ರಿಯಾಂಕಾ ಗಾಂಧಿ ಅವರ ಕೈಯಲ್ಲಿ ಇರಲಿದೆ. ಇವರು ಪರದೆಯ ಹಿಂದೆ ನಿಂತು ಪಕ್ಷದ ವರ್ಚಸ್ಸು ವೃದ್ಧಿ, ಚುನಾವಣಾ ಪ್ರಚಾರದ ದಿಕ್ಕು ಮತ್ತು ರಣತಂತ್ರಗಳನ್ನು ರೂಪಿಸಲಿದ್ದಾರೆ. ಪ್ರಿಯಾಂಕಾ ಅವರ ಈ ಸಮಿತಿಯಲ್ಲಿ ಮುಕುಲ್ ವಾಸಿಕ್ ಮತ್ತು ಅಶೋಕ್ ಗೆಹ್ಲೋಟ್ ಅವರಂತಹ ಹಿರಿಯ ಹಾಗೂ ಅನುಭವಿ ತಂತ್ರಜ್ಞರ ಜೊತೆಗೆ ಹೊಸ ಯುವ ಮುಖಗಳೂ ಇರಲಿದ್ದಾರೆ.
ರಾಹುಲ್ ಗಾಂಧಿ ಅವರು ಎಂದಿನಂತೆ ಪಕ್ಷದ ಪ್ರಮುಖ ಮತ್ತು ಅಧಿಕೃತ ಮುಖವಾಗಿ ಮುಂಚೂಣಿಯಲ್ಲಿರಲಿದ್ದಾರೆ. ಅವರು ದೇಶಾದ್ಯಂತ ಸಂಚರಿಸಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ತಲುಪಲು ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ನಂತಹ ಬೃಹತ್ ಜನಸಂಪರ್ಕ ಅಭಿಯಾನಗಳನ್ನು ನಡೆಸಲಿದ್ದಾರೆ.
ಕಳೆದ ಚುನಾವಣೆಗಳಲ್ಲಿ ಪ್ರಾದೇಶಿಕ ಮೈತ್ರಿ ಪಕ್ಷಗಳ ಮೇಲೆ ಅತಿಯಾಗಿ ಅವಲಂಬಿತವಾಗಿದ್ದರಿಂದ ಕಾಂಗ್ರೆಸ್ಗೆ ತನ್ನದೇ ಆದ ಪ್ರತ್ಯೇಕ ಅಸ್ತಿತ್ವ ಕಂಡುಕೊಳ್ಳಲು ಕಷ್ಟವಾಗಿತ್ತು ಎಂಬುದು ರಾಹುಲ್ ಗಾಂಧಿ ಅವರ ಸ್ಪಷ್ಟ ಅಭಿಪ್ರಾಯವಾಗಿದೆ. ಹೀಗಾಗಿ, ಇನ್ನು ಮುಂದೆ ಕೇವಲ ಮೈತ್ರಿಕೂಟದ ಪಕ್ಷಗಳನ್ನು ನೆಚ್ಚಿಕೊಳ್ಳದೇ, ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಸಂಘಟನೆಯನ್ನು ವಿಸ್ತರಿಸಲು ನಿರ್ಧರಿಸಿದೆ.
ಕಾಂಗ್ರೆಸ್ ಈ ಬಾರಿ ‘ದ್ವಿಮುಖ ನಾಯಕತ್ವ’ದ ಮಾದರಿಯನ್ನು ತಂದಿದೆ. ಇದರ ಅನ್ವಯ ರಾಹುಲ್ ಗಾಂಧಿ ಜನರ ಮಧ್ಯೆ ನಿಂತು ಪಕ್ಷದ ಮುಖವಾಡವಾಗಲಿದ್ದರೆ, ಪ್ರಿಯಾಂಕಾ ಗಾಂಧಿ ಪಕ್ಷದ ಕಾರ್ಯತಂತ್ರದ ಇಂಜಿನ್ ಆಗಿ ಕೆಲಸ ಮಾಡಲಿದ್ದಾರೆ. ಆಡಳಿತಾರೂಢ ಬಿಜೆಪಿಯ ಬಲಿಷ್ಠ ಚುನಾವಣಾ ಯಂತ್ರವನ್ನು ಎದುರಿಸಲು ಕಾಂಗ್ರೆಸ್ ಈಗಿನಿಂದಲೇ ಈ ಮಹಾ ರಣತಂತ್ರಕ್ಕೆ ಚಾಲನೆ ನೀಡಿದೆ.














