IPL 2026: ಇವರು ಐಪಿಎಲ್ ಇತಿಹಾಸದ ಒನ್​​ ಸೀಸನ್​ ವಂಡರ್ಸ್! ಕೇವಲ ಒಂದು ಆವೃತ್ತಿಯಲ್ಲಿ ಮಿಂಚಿ ಮರೆಯಾದ ಕ್ರಿಕೆಟಿಗರಿವರು | ಕ್ರೀಡಾ ಸುದ್ದಿ | ACTPnews

IPL 2026: ಇವರು ಐಪಿಎಲ್ ಇತಿಹಾಸದ ಒನ್​​ ಸೀಸನ್​ ವಂಡರ್ಸ್! ಕೇವಲ ಒಂದು ಆವೃತ್ತಿಯಲ್ಲಿ ಮಿಂಚಿ ಮರೆಯಾದ ಕ್ರಿಕೆಟಿಗರಿವರು | ಕ್ರೀಡಾ ಸುದ್ದಿ


ಸ್ವಪ್ನಿಲ್ ಅಸ್ನೋಡ್ಕರ್ (ರಾಜಸ್ಥಾನ ರಾಯಲ್ಸ್, 2008)

2008ರ ಐಪಿಎಲ್ ಋತುವಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಸ್ವಪ್ನಿಲ್ ಅಸ್ನೋಡ್ಕರ್ ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಆಕ್ರಮಣಕಾರಿ ಆಟದ ಶೈಲಿಯಿಂದ, ಅವರು 9 ಪಂದ್ಯಗಳಲ್ಲಿ 311 ರನ್ ಗಳಿಸಿ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿದ್ದರು. ದಕ್ಷಿಣ ಆಫ್ರಿಕಾದ ಆಟಗಾರ ಗ್ರೇಮ್ ಸ್ಮಿತ್ ಅವರೊಂದಿಗೆ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಅವರು, ಉತ್ತಮ ಜೊತೆಯಾಟ ರೂಪಿಸಿ ರಾಜಸ್ಥಾನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ನಂತರದ ಮೂರು ಋತುಗಳಲ್ಲಿ ಅವರು ಶೋಚನೀಯವಾಗಿ ವಿಫಲರಾದರಲ್ಲದೆ, ಐಪಿಎಲ್​​​ನಿಂದ ದೂರವಾದರು.

ಮನ್‌ಪ್ರೀತ್ ಗೋನಿ (ಚೆನ್ನೈ ಸೂಪರ್ ಕಿಂಗ್ಸ್, 2008)

ಮನ್‌ಪ್ರೀತ್ ಗೋನಿ 2008ರ ಮೊದಲ ಐಪಿಎಲ್​ ಸೀಸನ್‌ನಲ್ಲಿ ಸಿಎಸ್‌ಕೆ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ 16 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದರು. ತಕ್ಷಣವೇ ಇವರಿಗೆ ಭಾರತ ತಂಡದ ಕ್ಯಾಪ್ ಕೂಡ ಸಿಕ್ಕಿತು. ಆದರೆ ಬ್ಯಾಟರ್‌ಗಳು ಇವರ ಬೌಲಿಂಗ್ ಲೆಂತ್ ಅನ್ನು ಸುಲಭವಾಗಿ ರೀಡ್ ಮಾಡಲು ಶುರುಮಾಡಿದರು. ಬೌಲಿಂಗ್‌ನಲ್ಲಿ ವೈವಿಧ್ಯತೆ (Variations) ಇಲ್ಲದ ಕಾರಣ ಇವರು ರನ್​ ನೀಡುವ ಪ್ರಮಾಣ ಹೆಚ್ಚಾಗಿ, ತಂಡದಿಂದ ಹೊರಬಿದ್ದರು. 44 ಪಂದ್ಯಗಳನ್ನಾಡಿರುವ ಗೋನಿ ಕೇವಲ 37 ವಿಕೆಟ್ ಪಡೆದಿದ್ದಾರೆ.

ಸೌರಭ್ ತಿವಾರಿ (ಮುಂಬೈ ಇಂಡಿಯನ್ಸ್ 2010)

ತಮ್ಮ ಉದ್ದನೆಯ ಕೂದಲಿನ ಸ್ಟೈಲ್ ಮತ್ತು ಭರ್ಜರಿ ಸಿಕ್ಸರ್‌ಗಳಿಂದ “ಜೂನಿಯರ್ ಧೋನಿ” ಎಂದೇ ಖ್ಯಾತರಾಗಿದ್ದ ತಿವಾರಿ, 2010ರಲ್ಲಿ ಮುಂಬೈ ಪರ 419 ರನ್ ಗಳಿಸಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು. ಈ ಪ್ರದರ್ಶನದಿಂದ ಅವರಿಗೆ ಭಾರತ ತಂಡದಲ್ಲೂ ಅವಕಾಶ ಸಿಕ್ಕಿತ್ತು. ಆದರೆ ನಂತರದ ಸೀಸನ್‌ಗಳಲ್ಲಿ ಕನಿಷ್ಠ 200 ರನ್ ಗಳಿಸಲು ಸಹ ಇವರು ತೀವ್ರ ಕಷ್ಟಪಟ್ಟರು. ಆ ಆರಂಭಿಕ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಕಾಪಾಡಿಕೊಳ್ಳಲು ಇವರಿಂದ ಸಾಧ್ಯವಾಗಲೇ ಇಲ್ಲ. ಆ ನಂತರ ತಂಡದಲ್ಲಿದ್ದರೂ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಪಡೆಯಲು ವಿಫಲರಾಗಿ ಕೊನೆಗೆ ಕ್ರಿಕೆಟ್​​ನಿಂದ ಧೋನಿಗಿಂತ ಮೊದಲೇ ಹೊರಬಿದ್ದರು.

ಪಾಲ್ ವಾಲ್ತಾಟಿ (ಕಿಂಗ್ಸ್ XI ಪಂಜಾಬ್, 2011)

ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಪಾಲ್ ವಾಲ್ತಾಟಿ ಕೂಡ ಒಂದೇ ಒಂದು ಋತುವಿಗೆ ಮಾತ್ರ ಸೀಮಿತರಾದರು. 2011 ರಲ್ಲಿ, ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 63 ಎಸೆತಗಳಲ್ಲಿ 123 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದರು. 2026ರ ಐಪಿಎಲ್ ಋತುವಿನಲ್ಲಿ ಯಶಸ್ವಿ ಜೈಸ್ವಾಲ್ ದಾಖಲೆಯನ್ನು ಮುರಿಯುವವರೆಗೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಅನ್‌ಕ್ಯಾಪ್ಡ್ ಆಟಗಾರ ಎಂಬ ಹೆಗ್ಗಳಿಕೆಯನ್ನು ವಾಲ್ತಾಟಿ ಹೊಂದಿದ್ದರು.

ಈ ಶತಕದ ನಂತರ, ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ 75 ರನ್ ಗಳಿಸಿದ್ದಲ್ಲದೆ, ಬೌಲಿಂಗ್​​ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಆಲ್‌ರೌಂಡರ್ ಆಗಿ ತಮ್ಮ ಪ್ರತಿಭೆಯನ್ನು ಮತ್ತಷ್ಟು ಪ್ರದರ್ಶಿಸಿದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿನ ಅವರ ಪ್ರದರ್ಶನದ ಬಲದಿಂದ ಪಂಜಾಬ್ ತಂಡದಲ್ಲಿ ಸ್ಥಾನ ಪಡೆದ ವಾಲ್ತಾಟಿ, 2011 ರ ಐಪಿಎಲ್ ಋತುವಿನಲ್ಲಿ 14 ಪಂದ್ಯಗಳಲ್ಲಿ 463 ರನ್‌ಗಳನ್ನು ಗಳಿಸಿದ್ದರು. ಆದರೆ, 2012 ರ ಐಪಿಎಲ್ ಋತುವಿನಲ್ಲಿ ಮಣಿಕಟ್ಟಿನ ಗಾಯದಿಂದಾಗಿ ತಮ್ಮ ಫಾರ್ಮ್ ಅನ್ನು ಕಳೆದುಕೊಂಡ ನಂತರ, ವಾಲ್ತಾಟಿ ಕಣ್ಮರೆಯಾಗಿಬಿಟ್ಟರು.

ಮನ್ವಿಂದರ್ ಬಿಸ್ಲಾ (ಕೋಲ್ಕತ್ತಾ ನೈಟ್ ರೈಡರ್ಸ್, 2012)

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಟಗಾರ ಮನ್ವಿಂದರ್ ಬಿಸ್ಲಾ ಕೂಡ 2012ರ ಐಪಿಎಲ್ ಋತುವಿನಲ್ಲಿ ಭಾರಿ ಪ್ರಭಾವ ಬೀರಿದರು, ಆದರೆ ನಂತರ ಲೀಗ್​ನಿಂದ ಕಣ್ಮರೆಯಾದರು. 2012 ರಲ್ಲಿ ಕೆಕೆಆರ್ ಪ್ರಶಸ್ತಿ ಗೆಲುವಿನಲ್ಲಿ ಬಿಸ್ಲಾ ಪ್ರಮುಖ ಪಾತ್ರ ವಹಿಸಿದ್ದರು. ಫೈನಲ್​​​​​​​​​ನಲ್ಲಿ ಅಬ್ಬರಿಸಿದ್ದ ಬಿಸ್ಲಾ ಕೆಕೆಆರ್ ಚೊಚ್ಚಲ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು.

ಆ ಋತುವಿನಲ್ಲಿ ಏಳು ಪಂದ್ಯಗಳಲ್ಲಿ 213 ರನ್ ಗಳಿಸಿದ ಮನ್ವಿಂದರ್ ಬಿಸ್ಲಾ ಫೈನಲ್​​ನಲ್ಲಿ ಕೇವಲ 48 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಕೆಕೆಆರ್​ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ಈ ಸಾಧನೆ ಮೂಲಕ ಐಪಿಎಲ್ ಫೈನಲ್‌ನಲ್ಲಿ ಅನ್​ಕ್ಯಾಪ್ಡ್ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಎಂಬ ದಾಖಲೆಯನ್ನು ಅವರು ಸ್ಥಾಪಿಸಿದ್ದರು. ಈ ದಾಖಲೆ ಇಂದಿಗೂ ಅಜೇಯವಾಗಿ ಉಳಿದುಕೊಂಡಿದೆ. ಆದರೆ ಬಿಸ್ಲಾ ತಮ್ಮ ಅದೇ ಆವೇಗವನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ.

ಪ್ರವೀಣ್ ತಾಂಬೆ (ರಾಜಸ್ಥಾನ್ ರಾಯಲ್ಸ್ 2014)

2013ರ ಐಪಿಎಲ್ ಋತುವಿನಲ್ಲಿ 41 ನೇ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪಾದಾರ್ಪಣೆ ಮಾಡಿ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿದ್ದ ಪ್ರವೀಣ್ ತಾಂಬೆ, ಲೀಗ್‌ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ಸ್ಥಾಪಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಾವುದೇ ಅನುಭವವಿಲ್ಲದಿದ್ದರೂ, ಅವರನ್ನು ಗುರುತಿಸಿದ್ದ ರಾಹುಲ್ ದ್ರಾವಿಡ್ ರಾಜಸ್ಥಾನ್ ತಂಡದಲ್ಲಿ ಅವಕಾಶ ನೀಡಿದ್ದರು.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡಿದ್ದ ತಾಂಬೆ, ನಿರಂತರವಾಗಿ ಬೌಲಿಂಗ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ಸ್ಕೌಟ್‌ಗಳ ಗಮನ ಸೆಳೆದಿದ್ದರು. ಅವರು ಮೇ 7, 2013 ರಂದು ದೆಹಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ನಿಖರವಾಗಿ ಒಂದು ವರ್ಷದ ನಂತರ, ಮೇ 5, 2014 ರಂದು – 42 ನೇ ವಯಸ್ಸಿನಲ್ಲಿ – ತಾಂಬೆ ಮೊಟೆರಾ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹ್ಯಾಟ್ರಿಕ್ ಪಡೆದರು. ಈ ಮೂಲಕ ತಮ್ಮ ತಂಡದ 10 ರನ್‌ಗಳ ಗೆಲುವಿಗೆ ಕಾರಣರಾದರು. ಆ ಋತುವಿನಲ್ಲಿ, ಅವರು 13 ಪಂದ್ಯಗಳಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದರು.

ಗುಜರಾತ್ ಲಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಹಲವಾರು ತಂಡಗಳಿಗೆ ಆಡಿರುವ ತಾಂಬೆ, 33 ಪಂದ್ಯಗಳಿಂದ ಒಟ್ಟು 28 ವಿಕೆಟ್‌ಗಳನ್ನು ಕಬಳಿಸಿ 30.5 ಸರಾಸರಿಯಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಕೊನೆಗೊಳಿಸಿದರು. 2019 ರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ₹20 ಲಕ್ಷಕ್ಕೆ ಖರೀದಿಸಿದಾಗ, ಅವರು 48 ನೇ ವಯಸ್ಸಿನಲ್ಲಿ ಹರಾಜಿಗೆ ಪ್ರವೇಶಿಸಿದ ಅತ್ಯಂತ ಹಿರಿಯ ಆಟಗಾರರಾದರು. ಆದರೆ, ಬಿಸಿಸಿಐ ಅನುಮತಿ ಇಲ್ಲದೆ ದುಬೈನಲ್ಲಿ ನಡೆದ ಟಿ 10 ಲೀಗ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು 2020ರ ಐಪಿಎಲ್ ಋತುವಿಗೆ ಅನರ್ಹ ಎಂದು ಘೋಷಿಸಿತು. ಅದರ ನಂತರ, ಅವರು ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದರು. ಪ್ರವೀಣ್ ತಾಂಬೆ ಅವರ ಜೀವನ ಕಥೆಯನ್ನು ಆಧರಿಸಿದ ಚಲನಚಿತ್ರವೂ ಬಿಡುಗಡೆಯಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed