Last Updated:
KSR ಬೆಂಗಳೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ಮರುನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಇದೇ ವ್ಯವಸ್ಥೆ ಮುಂದುವರಿಯಲಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ನಿಮಗೊಂದು ಬಿಗ್ ಶಾಕ್ ಕಾದಿದೆ, ಎಚ್ಚರ! ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಬೃಹತ್ ಯಾರ್ಡ್ ಮರುನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಪಶ್ಚಿಮ ರೈಲ್ವೆಯು (South Western Railway) ದಿಢೀರ್ ನಿರ್ಧಾರ ಕೈಗೊಂಡಿದ್ದು, ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ಬದಲಾವಣೆ ಮಾಡಿದೆ. ಕೆಲವೊಂದು ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ, ಇನ್ನು ಕೆಲವು ರೈಲುಗಳ ಹೊರಡುವ ಸ್ಥಳ, ತಲುಪುವ ನಿಲ್ದಾಣ ಹಾಗೂ ಸಮಯವನ್ನು ಏಕಾಏಕಿ ಬದಲಾಯಿಸಲಾಗಿದೆ. ಹೀಗಾಗಿ, ಆಗಸ್ಟ್ ಮೊದಲ ವಾರದಲ್ಲಿ ಊರಿಗೆ ಹೋಗುವ ಧಾವಂತದಲ್ಲಿರುವ ಪ್ರಯಾಣಿಕರು ಒಮ್ಮೆ ನಿಮ್ಮ ಟಿಕೆಟ್ನ PNR ಸ್ಥಿತಿ ಹಾಗೂ ನವೀಕರಿಸಿದ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳದಿದ್ದರೆ ರೈಲು ನಿಲ್ದಾಣದಲ್ಲಿ ಪರದಾಡುವುದು ಗ್ಯಾರಂಟಿ ಎಂದು ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿಗೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆ ಶಾಕ್ ಕೊಟ್ಟಿದ್ದು, ಯಾರ್ಡ್ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ಪ್ರಮುಖ ವಾರಾಂತ್ಯದ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಆಗಸ್ಟ್ 02, 2026ರಂದು ಯಶವಂತಪುರದಿಂದ ಹೊರಡಬೇಕಿದ್ದ ರೈಲು ಸಂಖ್ಯೆ 16565 ಯಶವಂತಪುರ–ಮಂಗಳೂರು ಸೆಂಟ್ರಲ್ ವಾರಾಂತ್ಯ ಎಕ್ಸ್ಪ್ರೆಸ್ ಹಾಗೂ ಆಗಸ್ಟ್ 03, 2026ರಂದು ಮಂಗಳೂರಿನಿಂದ ಹೊರಡಬೇಕಿದ್ದ ರೈಲು ಸಂಖ್ಯೆ 16566 ಮಂಗಳೂರು ಸೆಂಟ್ರಲ್–ಯಶವಂತಪುರ ವಾರಾಂತ್ಯ ಎಕ್ಸ್ಪ್ರೆಸ್ ರೈಲುಗಳೆರಡೂ ರದ್ದಾಗಿವೆ. ಇದರ ಜೊತೆಗೆ, ಆಗಸ್ಟ್ 03, 2026ರಂದು ಮಧ್ಯಾಹ್ನ 2:25ಕ್ಕೆ ಹೊರಡಬೇಕಿದ್ದ ರೈಲು ಸಂಖ್ಯೆ 16586 ಮುರ್ಡೇಶ್ವರ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದ್ದು, ಆ ರೈಲು ಬರೋಬ್ಬರಿ ಒಂದು ಗಂಟೆ ತಡವಾಗಿ ಅಂದರೆ ಮಧ್ಯಾಹ್ನ 3:25ಕ್ಕೆ ಸಂಚರಿಸಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪ್ರಯಾಣಿಕರು ಮಾಡಬೇಕಿರೋದೇನು?
ಇಷ್ಟೆಲ್ಲಾ ದಿಢೀರ್ ಬದಲಾವಣೆಗಳಿರುವಾಗ ಪ್ರಯಾಣಿಕರು ಮೈಮರೆಯುವಂತಿಲ್ಲ! ಮನೆಯಿಂದ ಹೊರಡುವ ಮುನ್ನವೇ ನಿಮ್ಮ ಪಿಎನ್ಆರ್ (PNR) ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಅತ್ಯಗತ್ಯ. ನಿಮ್ಮ ರೈಲು ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ಬದಲು ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡುತ್ತದೆಯೇ ಅಥವಾ ಅಲ್ಲಿಯೇ ಕೊನೆಯಾಗುತ್ತದೆಯೇ ಎಂಬುದನ್ನು ನೂರು ಬಾರಿ ಖಚಿತಪಡಿಸಿಕೊಳ್ಳಿ. ನವೀಕರಿಸಿದ ವೇಳಾಪಟ್ಟಿಯಂತೆ ಸರಿಯಾದ ಸಮಯಕ್ಕೆ ನಿಲ್ದಾಣ ತಲುಪಿ ಹಾಗೂ ರದ್ದಾದ ರೈಲುಗಳ ಪ್ರಯಾಣಿಕರು ಕೂಡಲೇ ಪರ್ಯಾಯ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಯಾರ್ಡ್ ಮರುನಿರ್ಮಾಣ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೂ ಈ ತಾತ್ಕಾಲಿಕ ಬದಲಾವಣೆಗಳು ಅನಿವಾರ್ಯವಾಗಿ ಜಾರಿಯಲ್ಲಿರಲಿವೆ ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
Bangalore [Bangalore],Bangalore,Karnataka














