Last Updated:
ಟಾಲಿವುಡ್ನ ಜನಪ್ರಿಯ ನಟ ವಿಜಯ್ ದೇವರಕೊಂಡ (Vijay Deverakonda) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹೊಸ ಸಿನಿಮಾ ಅಥವಾ ವೈಯಕ್ತಿಕ ಜೀವನದ ಕಾರಣದಿಂದಲ್ಲ, ಬದಲಾಗಿ ಕ್ರಿಕೆಟ್ ಲೀಗ್ಗೆ ಸಂಬಂಧಿಸಿದ ವಿವಾದದಿಂದಾಗಿ.
ಟಾಲಿವುಡ್ನ ಜನಪ್ರಿಯ ನಟ ವಿಜಯ್ ದೇವರಕೊಂಡ (Vijay Deverakonda) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹೊಸ ಸಿನಿಮಾ ಅಥವಾ ವೈಯಕ್ತಿಕ ಜೀವನದ ಕಾರಣದಿಂದಲ್ಲ, ಬದಲಾಗಿ ಕ್ರಿಕೆಟ್ ಲೀಗ್ಗೆ ಸಂಬಂಧಿಸಿದ ವಿವಾದದಿಂದಾಗಿ. ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ ವಿಜಯ್ ದೇವರಕೊಂಡ ಸೇರಿದಂತೆ ಕೆಲ ಪ್ರಮುಖ ಸೆಲೆಬ್ರಿಟಿಗಳಿಗೆ ಲೀಗಲ್ ನೋಟಿಸ್ ಜಾರಿ ಮಾಡಿರುವ ವಿಚಾರ ಇದೀಗ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಟಿಜಿ20 ಲೀಗ್ಗೆ ಸಂಬಂಧಿಸಿದಂತೆ ಈ ವಿವಾದ ಆರಂಭವಾಗಿದೆ. ಈ ಲೀಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಅಂದರೆ ಬಿಸಿಸಿಐಯಿಂದ ಕಡ್ಡಾಯ ಅನುಮತಿ ಪಡೆಯಲಾಗಿಲ್ಲ ಎಂದು ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಲೀಗ್ಗೆ ಬೆಂಬಲ ನೀಡುತ್ತಿರುವ ಮತ್ತು ಪ್ರಚಾರ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಟಿಸಿಎ ಆಕ್ಷೇಪ ವ್ಯಕ್ತಪಡಿಸಿದೆ. ಕ್ರೀಡಾ ನಿಯಮಗಳನ್ನು ಪಾಲಿಸದೇ ಆಯೋಜಿಸಲಾಗುತ್ತಿರುವ ಟೂರ್ನಿಯನ್ನು ಪ್ರಚಾರ ಮಾಡುವುದರಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಹೋಗುವ ಸಾಧ್ಯತೆಯಿದೆ ಎಂಬುದು ಟಿಸಿಎ ವಾದವಾಗಿದೆ.
ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗುರುವಾ ರೆಡ್ಡಿ ಅವರ ಮಾಹಿತಿ ಪ್ರಕಾರ, ನಟ ವಿಜಯ್ ದೇವರಕೊಂಡ ಮಾತ್ರವಲ್ಲದೆ ಹಲವು ಗಣ್ಯರಿಗೆ ಕಾನೂನು ನೋಟಿಸ್ ಕಳುಹಿಸಲಾಗಿದೆ.
ನಟ ವೆಂಕಟೇಶ್ ದಗ್ಗುಬಾಟಿ, ಭಾರತೀಯ ಕ್ರಿಕೆಟಿಗರಾದ ಮೊಹಮ್ಮದ್ ಸಿರಾಜ್, ತಿಲಕ್ ವರ್ಮಾ ಹಾಗೂ ಅಂಬಟಿ ರಾಯುಡು ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಎಲ್ಲರು ಲೀಗ್ಗೆ ಪ್ರಚಾರಕರಾಗಿ ಅಥವಾ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಆರಂಭಿಸುತ್ತಿರುವ ಮೊದಲ ಟಿಜಿ20 ಲೀಗ್ಗೆ ವಿಜಯ್ ದೇವರಕೊಂಡ ಅವರನ್ನು ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಲೀಗ್ ಪ್ರಚಾರದ ವಿವಿಧ ಕಾರ್ಯಕ್ರಮಗಳಲ್ಲಿ ಅವರ ಹೆಸರು ಪ್ರಮುಖವಾಗಿ ಬಳಸಲಾಗಿದೆ.
ವಿವಾದ ತೀವ್ರಗೊಂಡಿದ್ದರೂ ವಿಜಯ್ ದೇವರಕೊಂಡ ಅಥವಾ ಅವರ ತಂಡದ ಪರವಾಗಿ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ನೋಟಿಸ್ ಕುರಿತು ಅವರು ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಅಭಿಮಾನಿಗಳು ಮತ್ತು ಚಿತ್ರರಂಗದ ವಲಯಗಳು ಕಾದು ನೋಡುತ್ತಿವೆ.
ಕಾನೂನು ನೋಟಿಸ್ಗೆ ಉತ್ತರ ನೀಡಲಾಗುತ್ತದೆಯೇ? ಅಥವಾ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲಾಗುತ್ತದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ.
ಈ ವಿವಾದದ ನಡುವೆಯೇ ವಿಜಯ್ ದೇವರಕೊಂಡ ತಮ್ಮ ಮುಂಬರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ನಲ್ಲಿ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ‘ರಣಬಲಿ’ ಮತ್ತು ‘ರೌಡಿ ಜನಾರ್ದನ’ ಸಿನಿಮಾಗಳಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಐತಿಹಾಸಿಕ ಹಿನ್ನೆಲೆಯ ಆಕ್ಷನ್ ಡ್ರಾಮಾ ಆಗಿ ನಿರ್ಮಾಣವಾಗುತ್ತಿರುವ ‘ರಣಬಲಿ’ ಚಿತ್ರವನ್ನು ರಾಹುಲ್ ಸಂಕೃತ್ಯನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದ್ದು, ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
Bangalore [Bangalore],Bangalore,Karnataka













