Last Updated:
2028 ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ (Ajit Agarkar) ಇಬ್ಬರು ಹೊಸ ಯುವ ನಾಯಕನನ್ನ ನೇಮಿಸುವ ಸಾಧ್ಯತೆ ಇದೆ.
ಟಿ20 ವಿಶ್ವಕಪ್ (T20 World Cup) ಹಾಗೂ ಐಪಿಎಲ್ನಲ್ಲಿ (IPL) ದಯನೀಯ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ಟಿ20 ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಮುಂದಿನ ವಿಶ್ವಕಪ್ ವೇಳೆಗೆ ಬಲಿಷ್ಠ ತಂಡ ಕಟ್ಟುವ ಆಲೋಚನೆಯಲ್ಲಿರುವ ಆಯ್ಕೆ ಸಮಿತಿ ಸೂರ್ಯಕುಮಾರ್ರನ್ನ (Suryakumar Yadav) ತಂಡದ ನಾಯಕತ್ವದಿಂದ ಹೊರಗಿಡಲು ಸಿದ್ಧವಾಗುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಆದರೆ ದೊಡ್ಡ ಪ್ರಶ್ನೆಯೆಂದರೆ ಸೂರ್ಯಕುಮಾರ್ ಉತ್ತರಾಧಿಕಾರಿ ಯಾರಾಗುತ್ತಾರೆ? ಎಂಬುದಾಗಿದೆ. 2028 ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ (Ajit Agarkar) ಇಬ್ಬರು ಹೊಸ ಯುವ ನಾಯಕನನ್ನ ನೇಮಿಸುವ ಸಾಧ್ಯತೆ ಇದೆ. ಪ್ರಸ್ತುತ ವರದಿಗಳ ಪ್ರಕಾರ, ಹಿರಿಯ ಪುರುಷರ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಆಯ್ಕೆ ಶ್ರೇಯಸ್ ಅಯ್ಯರ್ ಎನ್ನಲಾಗುತ್ತಿದೆ. ಆದರೆ ಗೌತಮ್ ಗಂಭೀರ್ ಇನ್ನೂ ತಮ್ಮ ಆಯ್ಕೆಯನ್ನ ಬಹಿರಂಗಪಡಿಸಿಲ್ಲ.
ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಕಡೆಗಣಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಅಜಿತ್ ಅಗರ್ಕರ್ ಅವರ ಅಭಿಪ್ರಾಯವನ್ನು ಒಪ್ಪುತ್ತಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಶಿಸಿದೆ.
ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಗಾಯದ ಕಾರಣ ಕಳಪೆ ಬ್ಯಾಟಿಂಗ್ ಫಾರ್ಮ್ ಹಾಗೂ ಒತ್ತಡದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸೂರ್ಯ ಈ ಗಾಯದ ಕಾರಣವನ್ನ ನಿರಾಕರಿಸಿದ್ದರು. ತಾವೂ ಲಾಸ್ ಏಂಜಲೀಸ್ 2028ರ ಒಲಿಂಪಿಕ್ಸ್ ಆಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಆದರೆ ಬಿಸಿಸಿಐ ಮಾತ್ರ ಹೊಸ ನಾಯಕನ ಬಗ್ಗೆ ಆಲೋಚನೆಯಲ್ಲಿದ್ದಾರೆ. ವರದಿಗಳ ಪ್ರಕಾರ, ಮುಂಬೈ ಮೂಲದ ಶ್ರೇಯಸ್ ಅಯ್ಯರ್ ಅವರನ್ನು ಟಿ20 ತಂಡದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿ ಪರಿಗಣಿಸಲಾಗುತ್ತಿದ್ದು, ಇದು ಸೂರ್ಯಕುಮಾರ್ ಅವರ ಆಡುವ ಹನ್ನೊಂದರಲ್ಲಿ ಸ್ಥಾನವನ್ನು ಖಚಿತಪಡಿಸಿದೆ.
” ಅಜಿತ್ ಒಬ್ಬ ಶಿಸ್ತಿನ ಹಾಗೂ ಕಠಿಣ ಆಯ್ಕೆದಾರ, ಇದುವರೆಗಿನ ಆಯ್ಕೆಗಾರರಲ್ಲಿ ತುಂಬಾ ಕಠಿಣ ನಿರ್ಧಾರ ತೆಗೆದುಕೊಂಡಿರುವ ಬಲಿಷ್ಠ ಆಯ್ಕೆಗಾರ. ಅವರು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. T20I ನಾಯಕತ್ವ ಮತ್ತು ತಮ್ಮ ತಂಡದೊಂದಿಗೆ ಭವಿಷ್ಯದ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಇದಕ್ಕಾಗಿಯೇ ಶ್ರೇಯಸ್ ಅವರನ್ನು ODIಗಳಲ್ಲಿ ಉಪನಾಯಕರನ್ನಾಗಿ ಮಾಡಲಾಗಿದೆ. T20 ವಿಶ್ವಕಪ್‌ಗೆ ಮೊದಲು ಭಾರತ ಆಡಿದ ಕೊನೆಯ ದ್ವಿಪಕ್ಷೀಯ ಸರಣಿಗೆ ಅವರನ್ನ ತಂಡದಲ್ಲಿ ಸೇರಿಸಲಾಗಿತ್ತು. ಈಗ ಬಂದಿರುವ ಪ್ರಶ್ನೆ ಎಂದರೆ ಅಯ್ಯರ್ ಕೋಚ್ ಒಪ್ಪುತ್ತಾರೆಯೇ? ಅಥವಾ ಅವರ ಮನಸ್ಸಿನಲ್ಲಿ ಬೇರೆ ಯಾರಾದರೂ ಇದ್ದಾರೆಯೇ? ಎಂಬುದು ಚರ್ಚೆಯ ಪ್ರಮುಖ ಅಂಶಗಳಾಗಿವೆ” ಎಂದು ಹೆಸರು ಬಹಿರಂಗಪಡಿಸದ ಉನ್ನತ ಶ್ರೇಣಿಯ ಮೂಲವನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ನಾಯಕತ್ವದ ಇತರ ಸಂಭಾವ್ಯ ಅಭ್ಯರ್ಥಿಗಳಲ್ಲಿ ಶುಭ್ಮನ್ ಗಿಲ್, ಅಕ್ಷರ್ ಪಟೇಲ್, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಸಂಜು ಸ್ಯಾಮ್ಸನ್ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ. ಶ್ರೇಯಸ್ ನಾಯಕನಾಗಿ ಐಪಿಎಲ್ ಗೆದ್ದಿರುವುದರಿಂದ ಮತ್ತು ತಂಡವನ್ನು ಫೈನಲ್‌ಗೆ ಕೊಂಡೊಯ್ದಿರುವುದರಿಂದ ಅವರ ಹೆಸರೇ ಇನ್ನೂ ಬಲವಾಗಿದೆ. ಅವರು ಲೀಗ್‌ನಲ್ಲಿ ಅತ್ಯಂತ ಅನುಭವಿ ಸಕ್ರಿಯ ನಾಯಕರಲ್ಲಿ ಒಬ್ಬರು.
Jun 03, 2026 10:30 PM IST













