Last Updated:
ಶುಕ್ರವಾರ ಸುಪ್ರೀಂ ಕೋರ್ಟ್ ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಪ್ರಕರಣವೊಂದರ ಅರ್ಜಿದಾರರೊಬ್ಬರು, ನ್ಯಾಯಾಧೀಶರ ಆದೇಶಗಳನ್ನು ಧಿಕ್ಕರಿಸಿ, ಕಾಗದಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.
ದೆಹಲಿ: ಭಾರತದ ಸುಪ್ರೀಂ ಕೋರ್ಟ್ (Supreme Court) ದೇಶದ ಅತ್ಯುನ್ನತ ಸಾಂವಿಧಾನಿಕ ನ್ಯಾಯಾಲಯ. ಕಾನೂನು ಸುವ್ಯವಸ್ಥೆಯ ಅಂತಿಮ ಅಧಿಕಾರವನ್ನು ಹೊಂದಿದೆ. ಆದ್ರೆ, ಶುಕ್ರವಾರ ಸುಪ್ರೀಂ ಕೋರ್ಟ್ ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಪ್ರಕರಣವೊಂದರ ಅರ್ಜಿದಾರರೊಬ್ಬರು, ನ್ಯಾಯಾಧೀಶರ (Judge) ಆದೇಶಗಳನ್ನು ಧಿಕ್ಕರಿಸಿ, ಕಾಗದಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.
ಈ ಹೈಡ್ರಾಮಾ ಘಟನೆಯ ನಂತರ, ಭದ್ರತಾ ಸಿಬ್ಬಂದಿ ಅರ್ಜಿದಾರರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದಿದ್ದು, ದೆಹಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ವಕೀಲ ಪ್ರಬಲ್ ಪ್ರತಾಪ್ ಎಂಬುವರು ಅಲಹಾಬಾದ್ ಹೈಕೋರ್ಟ್ನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ತಮ್ಮ ಅರ್ಜಿಯನ್ನು ಪೊಲೀಸ್ ತನಿಖೆಯ ಬದಲು ‘ವೈಯಕ್ತಿಕ ದೂರು’ ಎಂದು ಪರಿಗಣಿಸಿದ್ದಕ್ಕೆ ಅವರು ಅಸಮಾಧಾನಗೊಂಡಿದ್ದರು. ವಿಚಾರಣೆ ಆರಂಭವಾದಾಗ, ನ್ಯಾಯಾಧೀಶರು ತಮ್ಮ ಪ್ರಕರಣವನ್ನು ತಾವೇ ವಾದಿಸುತ್ತೀರಾ ಎಂದು ಕೇಳಿದರು. ಇದು ನ್ಯಾಯಾಲಯದಲ್ಲಿ ವಾಗ್ವಾದಕ್ಕೆ ಕಾರಣವಾಯಿತು.
ವಕೀಲ ಪ್ರಬಲ್ ಪ್ರತಾಪ್, ‘ಲಕ್ನೋ ಎಸಿಪಿ ವಿರುದ್ಧ ಎಫ್ಐಆರ್ ದಾಖಲಿಸಲು ನಾನು ನಿಮಗೆ ಆದೇಶಿಸುತ್ತೇನೆ’ ಎಂದು ವಾದ ಮಂಡಿಸಿದ್ದರು. ಇದನ್ನು ಕೇಳಿದ, ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಆಶ್ಚರ್ಯಚಕಿತರಾಗಿ, ‘ನೀವು ನನಗೆ ಆದೇಶಿಸುತ್ತಿದ್ದೀರಾ?’ ಎಂದು ಪ್ರಶ್ನಿಸಿದರು. ಇದಕ್ಕೆ, ವಕೀಲ ಪ್ರಬಲ್ ಪ್ರತಾಪ್, ‘ನನ್ನ ಕಡೆಯಿಂದ ಅಷ್ಟೆ. ಎಲ್ಲವೂ ದಾಖಲೆಯಲ್ಲಿದೆ’ ಎಂದು ಉತ್ತರಿಸಿದರು. ಇದನ್ನು ಹೇಳಿದ ನಂತರ, ವಕೀಲರು ತಮ್ಮ ಫೈಲ್ ಅನ್ನು ಗಾಳಿಯಲ್ಲಿ ಎಸೆದು ನ್ಯಾಯಾಧೀಶರನ್ನು ನಿಂದಿಸಲು ಪ್ರಾರಂಭಿಸಿದರು.
ಇನ್ನು, ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವಿಶ್ವನಾಥನ್, ‘ಈ ವ್ಯಕ್ತಿ ತೀವ್ರ ದುಃಖಿತನಾಗಿದ್ದಾನೆ ಮತ್ತು ಇದು ಅವನ ಹತಾಶೆಯ ಪರಿಣಾಮವಾಗಿದೆ’ ಎಂದು ಹೇಳಿದರು. ನ್ಯಾಯಾಲಯವು, ‘ನಮಗೆ ಅವರ ಬಗ್ಗೆ ಕೇವಲ ಸಹಾನುಭೂತಿ ಇದೆ ಮತ್ತು ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಬಯಸುವುದಿಲ್ಲ’ ಎಂದು ಹೇಳಿದೆ. ಆದ್ರೆ, ಹೈಕೋರ್ಟ್ನ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ದೃಢವಾದ ಆಧಾರವಿಲ್ಲ ಎಂದು ಹೇಳಿ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿದೆ.
Jul 10, 2026 11:15 PM IST














