Last Updated:
ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳಿಸಿದೆ. ಇದು ಪ್ಲೇಆಫ್ ಪಂದ್ಯದಲ್ಲೇ ದಾಖಲೆ ಮೊತ್ತವಾಗಿದೆ.
ಧರ್ಮಶಾಲಾ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವೆ ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಗುಜರಾತ್ ವೇಗಿಗಳನ್ನ ಮನಸೋ ಇಚ್ಛೆ ಬೆಂಡೆತ್ತಿದ ಆರ್ಸಿಬಿ ಬ್ಯಾಟರ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಆರ್ಸಿಬಿ ಪರ ನಾಯಕ ರಜತ್ ಪಾಟೀದಾರ್ ಅಜೇಯ 93, ವಿರಾಟ್ ಕೊಹ್ಲಿ 43, ಕೃನಾಲ್ ಪಾಂಡ್ಯ 43 ಹಾಗೂ ಪಡಿಕ್ಕಲ್ 30 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮೊದಲ ಓವರ್ನಲ್ಲೇ 3 ಬೌಂಡರಿ ಸಿಡಿಸಿದ್ದ ವೆಂಕಟೇಶ್ ಅಯ್ಯರ್ 2ನೇ ಓವರ್ನಲ್ಲಿ ರಬಾಡ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಗಿಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಅಯ್ಯರ್ 7 ಎಸೆತಗಳಲ್ಲಿ 19 ರನ್ಗಳಿಸಿದ್ದರು. ನಂತರ ಬಂದ ಪಡಿಕ್ಕಲ್ 2ನೇ ವಿಕೆಟ್ಗೆ ಕೇವಲ 38 ಎಸೆತಗಳಲ್ಲಿ 72 ರನ್ ಸೇರಿಸಿದರು. ಸ್ಫೋಟಕ ಆಟವಾಡುತ್ತಿದ್ದ ಈ ಜೋಡಿ ಒಂದೇ ಓವರ್ನಲ್ಲಿ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 25 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 43 ರನ್ಗಳಿಸಿ ಬೌಲ್ಡ್ ಆದರೆ, ಪಡಿಕ್ಕಲ್ 19 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 30 ರನ್ಗಳಿಸಿ ಬಟ್ಲರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
3 ಎಸೆತಗಳ ಅಂತರದಲ್ಲಿ ಆರ್ಸಿಬಿ 2 ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ರಜತ್ ಪಾಟೀದಾರ್ ಹಾಗೂ ಕೃನಾಲ್ ಒಂದೆರಡು ಓವರ್ ಎಚ್ಚರಿಕೆಯಿಂದ ಆಡಿ ನಂತರ ಮತ್ತೆ ತಮ್ಮ ಅಬ್ಬರ ಶುರು ಮಾಡಿಕೊಂಡರು. ಈ ಇಬ್ಬರು ಅನುಭವಿಗಳು 4ನೇ ವಿಕೆಟ್ ಜೊತೆಯಾಟದಲ್ಲಿ 95 ರನ್ಗಳ ಭರ್ಜರಿ ಜೊತೆಯಾಟ ನೀಡಿದರು. 28 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 43 ರನ್ಗಳಿಸಿದ್ದ ಕೃನಾಲ್ ಪಾಂಡ್ಯ 17ನೇ ಓವರ್ನಲ್ಲಿ ರಬಾಡಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಫೋಟಕ ಆಟಗಾರ ಟಿಮ್ ಡೇವಿಡ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. 5 ಎಸೆತಗಳಲ್ಲಿ 4 ರನ್ಗಳಿಸಿದ್ದ ಡೇವಿಡ್ ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ನಾಯಕ ರಜತ್ ಪಾಟೀದಾರ್ 33 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್ಗಳ ಸಹಿತ ಅಜೇಯ 93 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಜಿತೇಶ್ ಶರ್ಮಾ 5 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 15 ರನ್ಗಳಿಸಿದರು.
ಗುಜರಾತ್ ಟೈಟನ್ಸ್ ಪರ ರಬಾಡ 54ಕ್ಕೆ2, ಜೇಸನ್ ಹೋಲ್ಡರ್ 39ಕ್ಕೆ2, ಪ್ರಸಿದ್ಧ್ ಕೃಷ್ಣ 53ಕ್ಕೆ1 ವಿಕೆಟ್ ಪಡೆದರು.
ಈ ಪಂದ್ಯದಲ್ಲಿ 254 ರನ್ಗಳಿಸುವ ಮೂಲಕ ಆರ್ಸಿಬಿ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ ದಾಖಲಿಸಿತು. ಇದಕ್ಕೂ ಮುನ್ನ ಈ ದಾಖಲೆ ಗುಜರಾತ್ ಟೈಟನ್ಸ್ ಹೆಸರಿನಲ್ಲಿತ್ತು. 2023ರಲ್ಲಿ ಗುಜರಾತ್ ಟೈಟನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 233 ರನ್ಗಳಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. 2025ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಟೈಟನ್ಸ್ ವಿರುದ್ಧ 228 ರನ್ಗಳಿಸಿ 3ನೇ ಸ್ಥಾನದಲ್ಲಿದೆ. 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 222 ರನ್ಗಳಿಸಿ 4ನೇ ಸ್ಥಾನದಲ್ಲಿದೆ.
ಆರ್ಸಿಬಿ ಮಾತ್ರವಲ್ಲ ನಾಯಕನಾಗಿ ರಜತ್ ಕೂಡ ಪ್ಲೇಆಫ್ ಪಂದ್ಯದಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆಗೆ ಪಾತ್ರರಾದರು. ಪಾಟೀದಾರ 93 ರನ್ಗಳಿಸಿ ಎಸ್ಆರ್ಹೆಚ್ ಮಾಜಿ ನಾಯಕ ಡೇವಿಡ್ ವಾರ್ನರ್ ದಾಖಲೆ ಸರಿಗಟ್ಟಿದರು. 2016ರ ಕ್ವಾಲಿಫೈಯರ್ 2ರಲ್ಲಿ ಡೇವಿಡ್ ವಾರ್ನರ್ ಕೂಡ ಅಜೇಯ 93 ರನ್ಗಳಿಸಿದ್ದರು. ಪಂಜಾಬ್ ತಂಡದ ಶ್ರೇಯಸ್ ಅಯ್ಯರ್ ಅಜೇಯ 89 ರನ್ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.













