Last Updated:
ರೈಲ್ಟೆಲ್ನ ಹೋಮ್ ಇಂಟರ್ನೆಟ್ ಸೇವಾ ವಿಭಾಗವಾದ ರೈಲ್ವೈರ್, ಪ್ರಸಾರ ಭಾರತಿಯ OTT ಪ್ಲಾಟ್ಫಾರ್ಮ್ ವೇವ್ಸ್ ಮತ್ತು 9 ಇತರ ಪ್ರೀಮಿಯಂ OTT ಗಳೊಂದಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, 30 Mbps ಹೈ-ಸ್ಪೀಡ್ ಇಂಟರ್ನೆಟ್, 400+ ಲೈವ್ ಟಿವಿ ಚಾನೆಲ್ಗಳು ಮತ್ತು 200+ ಆಟಗಳನ್ನು ನೀಡುತ್ತದೆ ಎನ್ನಲಾಗಿದೆ.
ಟೆಲಿಕಾಂ ಮೂಲಸೌಕರ್ಯ (Telecom Infrastructure) ಸಂಸ್ಥೆಯಾದ ರೈಲ್ಟೆಲ್ನ (RailTel) ಹೋಮ್ ಇಂಟರ್ನೆಟ್ ಸರ್ವಿಸ್ (Home Internet Service) ಆರ್ಮ್ ರೈಲ್ವೈರ್ ಒಟಿಟಿ (OTT) ಕಂಟೆಂಟ್ ಪ್ಲ್ಯಾಟ್ಫಾರ್ಮ್ಗಳೊಂದಿಗೆ ಹೊಸ ಸೇವಾ ಯೋಜನೆಯನ್ನು ಪ್ರಾರಂಭಿಸಿದೆ. ಸಂಸ್ಥೆ ಆರಂಭಿಸಿರುವ ಫ್ರೀಡಂ ಪ್ಲಾನ್ ಒಟಿಟಿಯು ಹೋಮ್ ಇಂಟರ್ನೆಟ್ ಯೋಜನೆಯಾಗಿದ್ದು, ಚಂದಾದಾರರಿಗೆ ಗುಣಮಟ್ಟದ ಮನರಂಜನೆಗೆ (Entertainment) ಪ್ರವೇಶವನ್ನು ನೀಡುತ್ತದೆ ಎಂದು ರೈಲ್ಟೆಲ್ ಹೇಳಿಕೆಯಲ್ಲಿ ತಿಳಿಸಿದೆ.
ರೈಲ್ವೈರ್ ಎಂಬುದು ರೈಲ್ಟೆಲ್ನ ರಿಟೇಲ್ ಬ್ರಾಡ್ಬ್ಯಾಂಡ್ ಸೇವೆಯಾಗಿದ್ದು, ಒಂದು ಸಹಯೋಗದ ಸಾರ್ವಜನಿಕ ಖಾಸಗಿ ಸ್ಥಳೀಯ ವಾಣಿಜ್ಯೋದ್ಯಮಿ (PPLE) ಮಾದರಿಯಾಗಿದ್ದು, ಇದರೊಂದಿಗೆ ರೈಲ್ಟೆಲ್, ಆಕ್ಸೆಸ್ ನೆಟ್ವರ್ಕ್ ಪ್ರೊವೈಡರ್, ಒಗ್ಗೂಡಿಸುವಿಕೆ ನೆಟ್ವರ್ಕ್ ಪ್ರೊವೈಡರ್ (AGNP) ಮತ್ತು ಮ್ಯಾನೇಜ್ಡ್ ಸರ್ವಿಸ್ ಪ್ರೊವೈಡರ್ (MSP) ನಂತಹ ವಿವಿಧ ಪಾಲುದಾರರೊಂದಿಗೆ ಸೇರಿಕೊಂಡು ಹೆಚ್ಚಿನ ವೇಗದೊಂದಿಗೆ ಬ್ರಾಡ್ಬ್ಯಾಂಡ್ ಸೇವೆಗಳನ್ನು ಒದಗಿಸಲಿದೆ.
ತಿಂಗಳಿಗೆ ರೂ 299 ಪಾವತಿಯೊಂದಿಗೆ ಚಂದಾದಾರರು ಫ್ರೀಡಂ ಪ್ಲಾನ್ ಮೂಲಕ ಒಂಬತ್ತು ಹೆಚ್ಚು ಪ್ರೀಮಿಯಂ ಒಟಿಟಿಗಳು, 30 ಎಮ್ಬಿಪಿಎಸ್ ಹೈ-ಸ್ಪೀಡ್ ಇಂಟರ್ನೆಟ್ ಜೊತೆಗೆ 400 ಕ್ಕಿಂತ ಹೆಚ್ಚಿನ ಲೈವ್ ಟಿವಿ ಚಾನೆಲ್ಗಳು ಮತ್ತು 200 ಕ್ಕಿಂತ ಹೆಚ್ಚಿನ ಗೇಮ್ಸ್ಗಳೊಂದಿಗೆ ಮನರಂಜನೆ ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ. ಈ ಸಹಯೋಗವು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಮನರಂಜನಾ ಪರಂಪರೆಯನ್ನು ಪ್ರದರ್ಶಿಸಲು ಅಭಿವೃದ್ಧಿಪಡಿಸಿದ ಪ್ರಸಾರ ಭಾರತಿಯ ವೇವ್ಸ್ ಒಟಿಟಿ ಪ್ಲ್ಯಾಟ್ಫಾರ್ಮ್ ಅನ್ನು ಸಂಯೋಜಿಸುವ ಮೊದಲ ಟೆಲಿಕಾಂ ಪೂರೈಕೆದಾರರಾಗಿ ರೈಲ್ಟೆಲ್ ಅನ್ನು ಗುರುತಿಸುತ್ತದೆ.
ರೈಲ್ಟೆಲ್ ತನ್ನ ಪ್ಲಾಟ್ಫಾರ್ಮ್ಗೆ ಪ್ರಸಾರ ಭಾರತಿಯ ಹೊಸದಾಗಿ ಪ್ರಾರಂಭಿಸಿರುವ ಒಟಿಟಿ ಪ್ಲ್ಯಾಟ್ಫಾರ್ಮ್ ವೇವ್ಸ್ನೊಂದಿಗೆ ಬಂದಿದ್ದು, ಒಟಿಟಿಯ ಸಂಗ್ರಾಹಕವಾಗಿ ಪ್ಲೇಬಾಕ್ಸ್ ಸಹಯೋಗದೊಂದಿಗೆ ಕಾರ್ಯಾರಂಭಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದು, ಕಾರ್ಯಕ್ರಮದಲ್ಲಿ ಪ್ಲೇಬಾಕ್ಸ್ ಸಂಸ್ಥಾಪಕ ಹಾಗೂ ಸಿಇಒ ಅಮೀರ್ ಮುಲಾನಿ ರೈಲ್ ಟೆಲ್ ಸಿಎಮ್ಡಿ ಸಂಜಯ್ ಕುಮಾರ್ ಮತ್ತು ಪ್ರಸಾರ ಭಾರತಿ, ಸಿಇಒ ಗೌರವ್ ದ್ವಿವೇದಿ ಭಾಗವಹಿಸಿದ್ದು, ಫ್ರೀಡಮ್ ಯೋಜನೆಯು ಶ್ರೇಣಿ 2, ಹಾಗೂ 3 ರಲ್ಲಿರುವ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅನುಗುಣವಾಗಿ ಕೈಗೆಟಕುವ ಹಾಗೂ ಲಭ್ಯವಿರುವ ಯೋಜನೆಯಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯವಾಹಿನಿಯ ಪೂರೈಕೆದಾರರಿಂದ ಹೆಚ್ಚಾಗಿ ಕಡೆಗಣಿಸಲಾದ ಪ್ರದೇಶಗಳಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಮನರಂಜನೆಯನ್ನು ತರಲು ಕಂಪನಿಯು ಪ್ಲೇಬಾಕ್ಸ್ಟಿವಿ ಯೊಂದಿಗೆ ಕೈಜೋಡಿಸಿದೆ. ರೈಲ್ವೈರ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಶ್ರೇಣಿ 2 ಮತ್ತು 3 ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಗಮನಹರಿಸುತ್ತದೆ.
ಭಾರತದ ಪ್ರಮುಖ ಮನರಂಜನಾ ಮತ್ತು ಇನ್ಫೋಟೈನ್ಮೆಂಟ್ ಕೇಂದ್ರವಾದ ಪ್ರಸಾರ ಭಾರತಿ ತನ್ನದೇ ಆದ ಒಟಿಟಿ ಪ್ಲಾಟ್ಫಾರ್ಮ್ ವೇವ್ಸ್ ಅನ್ನು ಪ್ರಾರಂಭಿಸುವುದನ್ನು ನೋಡಲು ತುಂಬಾ ಉತ್ಸುಕವಾಗಿದ್ದು, ಈ ಸಹಯೋಗದಲ್ಲಿ ನಾವು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಮುಲಾನಿ ತಿಳಿಸಿದ್ದಾರೆ.
ರೈಲ್ವೈರ್ ಬ್ರಾಡ್ಬ್ಯಾಂಡ್ ಅಡಿಯಲ್ಲಿ ರೈಲ್ಟೆಲ್ ಪ್ರಾರಂಭಿಸುತ್ತಿರುವ ಫ್ರೀಡಂ ಪ್ಲಾನ್ ವೇವ್ಸ್ ಅತ್ಯಂತ ಮನೋಜ್ಞ ಹಾಗೂ ಮಾಹಿತಿಯುಕ್ತ ಕಂಟೆಂಟ್ಗಳನ್ನೊಳಗೊಂಡಿದ್ದು, ಮಾಸಿಕ ರೂ 299 ರ ಯೋಜನೆಯೊಂದಿಗೆ ಆರಂಭಗೊಳ್ಳುತ್ತಿದೆ. ಈ ಯೋಜನೆ ಪ್ರತಿ ಭಾರತೀಯ ಮನೆಗೆ ಪರಿಪೂರ್ಣ ಮನರಂಜನೆಯಾಗಿದೆ ಎಂದು ಮುಲಾನಿ ಹರ್ಷ ವ್ಯಕ್ತಪಡಿಸಿದ್ದಾರೆ.
ವೇವ್ಸ್, ಪ್ರಸಾರ ಭಾರತೀಯ ಒಟಿಟಿ ಪ್ಲ್ಯಾಟ್ಫಾರ್ಮ್ ಎಂದೆನಿಸಿದ್ದು, ಲೈವ್ ಟಿವಿ, ಚಲನಚಿತ್ರಗಳು, ಪಾಡ್ಕಾಸ್ಟ್ಗಳು ಮತ್ತು ಗೇಮ್ಸ್ ಜೊತೆಗೆ ಮಹಾಭಾರತ, ರಾಮಾಯಣ ಮತ್ತು ಶಕ್ತಿಮಾನ್ನಂತಹ ಮನೆ ಮಂದಿ ಕುಳಿತು ಆನಂದಿಸುವ ಧಾರ್ಮಿಕ ವಿಷಯಗಳನ್ನು ವೀಕ್ಷಕರಿಗೆ ಆನಂದಿಸುವ ಸೌಲಭ್ಯವನ್ನು ಒದಗಿಸುತ್ತದೆ. ನಮ್ಮ ಹೋಮ್ ಇಂಟರ್ನೆಟ್ ಸೇವೆ ರೈಲ್ವೈರ್ ದೇಶದ ಹಿಂದುಳಿದ ಭಾಗಗಳಿಗೆ ಕೈಗೆಟುಕುವ ಇಂಟರ್ನೆಟ್ ಅನ್ನು ತರುವ ಗುರಿಯನ್ನು ಈ ಮೂಲಕ ಹೊಂದಿದೆ.
ಈ ಸಹಯೋಗವು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವ ಮೂಲಕ ಮತ್ತು ಪ್ರತಿ ಮನೆಯವರು ದೇಶದ ಡಿಜಿಟಲ್ ರೂಪಾಂತರದಲ್ಲಿ ಭಾಗವಹಿಸಬಹುದೆಂದು ಖಚಿತಪಡಿಸಿಕೊಳ್ಳುವ ಮೂಲಕ ಜ್ಞಾನದ ಆರ್ಥಿಕತೆಯ ಭಾರತದ ದೃಷ್ಟಿಗೆ ಹೊಂದಿಕೆಯಾಗುತ್ತದೆ ಎಂದು ಗೌರವ್ ದ್ವಿವೇದಿ ತಿಳಿಸಿದ್ದಾರೆ.













