Last Updated:
ಏನೇ ಲಾಭ ಬರುತ್ತೆ ಅಂದರೂ ಸ್ವಂತ ಅಪ್ಪ- ಅಮ್ಮನನ್ನೇ ಮಕ್ಕಳು ಕೊಲ್ಲುತ್ತಾರೆ ಎಂದರೆ ನೀವು ನಂಬ್ತೀರಾ? ನಂಬಲೇಬೇಕು. ಇಲ್ಲೊಬ್ಬ ಮಗಳು ಸರ್ಕಾರಿ ಕೆಲಸದ ದುರಾಸೆಯಲ್ಲಿ ತನ್ನ ಹೆತ್ತಮ್ಮನನ್ನೇ ಕೊಲೆ ಮಾಡಿದ್ದಾಳೆ. ಎಲ್ಲಿ? ಏನಿದು ಕಥೆ? ಇಲ್ಲಿದೆ ನೋಡಿ.
ಇತ್ತೀಚಿಗೆ ಎಲ್ಲಿ ನೋಡಿದ್ರು ಗಂಡ ಹೆಂಡತಿ (Husband Wife) ಜಗಳ, ಕೊಲೆ ಇಂಥದ್ದೇ ಕ್ರೈಂ ಸೀನ್ಗಳು (Crime Scene) ನಡೆಯುತ್ತಿದೆ. ಇಲ್ಲಿ ಸ್ವಲ್ಪ ಬೇರೆ ಕಥೆ, ಮಕ್ಕಳಿಗೆ ಅಪ್ಪ ಅಮ್ಮನೇ ದೇವರು ಅಂತಾರೆ. ಆದರೆ ಇಲ್ಲೊಬ್ಬಳು ಪಾಪಿ ಮಗಳು ತನ್ನ ಹೆತ್ತಮ್ಮನನ್ನೇ ಹತ್ಯೆ ಮಾಡಿದ್ದಾರೆ. ಹೌದು, ರಾಜಸ್ಥಾನದ (Rajasthan) ರಾಜಧಾನಿ ಜೈಪುರದಲ್ಲಿ ನಡೆದ ಒಂದು ಆಘಾತಕಾರಿ ಕೊಲೆ ಪ್ರಕರಣ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮೊದಲಿಗೆ ಅಪಘಾತ ಎನ್ನಲಾಗಿತ್ತು, ಆದರೆ ನಂತರ ಅದರ ಹಿಂದಿನ ಕೊಲೆ ರಹಸ್ಯ ಬಯಲಾಗಿದೆ.
3 ದಿನಗಳ ಹಿಂದೆ ನಡೆದ ಅಪಘಾತ ಎಂದು ನಂಬಲಾಗಿದ್ದ ಘಟನೆ ವಾಸ್ತವದಲ್ಲಿ ಕೊಲೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವ ಸಲುವಾಗಿ ತಾಯಿಯನ್ನು ಮಗಳೇ ಕೊಲ್ಲಿಸಿದ್ದಾಳೆ ಎಂದು ತಿಳಿದುಬಂದಿದ್ದು, ಈ ಪ್ರಕರಣದಲ್ಲಿ ಮೃತರ ಮಗಳು ಆಯುಷಿ (23) ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 4 ರಂದು ಪ್ರತಾಪ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 45 ವರ್ಷದ ನೀರಜಾ ಶರ್ಮಾ ಎಂಬ ಮಹಿಳೆ ಅಪಘಾತದಲ್ಲಿ ಮೃತಪಟ್ಟಿದ್ದರು. ವೇಗವಾಗಿ ಬಂದ ವಾಹನವೊಂದು ಢಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ನಂಬಲಾಗಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಇದು ಅಪಘಾತವಲ್ಲ ಎಂದು ಬೆಳಕಿಗೆ ಬಂದಿದೆ. ಇದು ಯೋಜಿತ ಕೊಲೆ ಎಂದು ಜೈಪುರ ಡಿಸಿಪಿ (ಪೂರ್ವ) ರಂಜಿತಾ ಶರ್ಮಾ ಹೇಳಿದ್ದಾರೆ.
ನೀರಜ್ ಶರ್ಮಾ ಸರ್ಕಾರಿ ಉದ್ಯೋಗಿಯಾಗಿದ್ದರು. ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಅದಾದ ನಂತರ ಅನುಕಂಪದ ಆಧಾರದ ಮೇಲೆ ನೀರಜಾ ಗಂಡನ ಬದಲಿಗೆ ಕೆಲಸ ಪಡೆದಿದ್ದರು. ಆದರೆ ಅವರ ಮಗಳು ಆಯುಷಿ ತಂದೆಯ ಉದ್ಯೋಗವನ್ನು ತಾನು ಪಡೆಯಬೇಕು ಎಂದು ಬಯಸಿದ್ದಳು. ಇದಕ್ಕಾಗಿ ತಾಯಿಯನ್ನು ಕೊಲ್ಲುವ ಯೋಜನೆ ರೂಪಿಸಿದ್ದಾಳೆ. ಆಯುಷಿ ಜೊತೆಗೆ ಅವಳ ಚಿಕ್ಕಪ್ಪ ಮತ್ತು ಇತರ ಕುಟುಂಬ ಸದಸ್ಯರು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಕೊಲೆಗೆ ಐದು ಅಪರಾಧಿಗಳನ್ನು ನೇಮಿಸಿಕೊಂಡಿದ್ದು, ಅವರಿಗೆ 7 ಲಕ್ಷ ರೂಪಾಯಿಗಳ ಸುಪಾರಿ ನೀಡಲಾಗಿತ್ತು.
ಪೊಲೀಸರು ತನಿಖೆಯ ಸಮಯದಲ್ಲಿ ಸತ್ಯ ಬೆಳಕಿಗೆ ಬಂದಿದೆ. ಈಗಾಗಲೇ ಮೃತರ ಮಗಳು ಆಯುಷಿ, ಚಿಕ್ಕಪ್ಪ ಮತ್ತು ಇತರ ಆರೋಪಿಗಳನ್ನು ಬಂಧಿಸಿದ್ದಾರೆ. ಬಲರಾಮ್ ಎಂಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಜೈಪುರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣವು ಕುಟುಂಬದಲ್ಲಿ ಆಸ್ತಿ ಮತ್ತು ಉದ್ಯೋಗದ ಲೋಭಕ್ಕಾಗಿ ನಡೆಯುವ ಕೊಲೆಗಳು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತಿದೆ. ಈ ಘಟನೆ ಸಮಾಜಕ್ಕೆ ಒಂದು ದೊಡ್ಡ ಎಚ್ಚರಿಕೆಯಾಗಿದೆ. ಕುಟುಂಬ ಸದಸ್ಯರ ನಡುವಿನ ವಿಶ್ವಾಸ ಮತ್ತು ಗೌರವ ಮುಖ್ಯ. ಸ್ವಾರ್ಥಕ್ಕಾಗಿ ಕುಟುಂಬದ ಸದಸ್ಯರನ್ನು ಕೊಲ್ಲುವಂತಹ ಘಟನೆಗಳು ಮುಂದೆ ನಡೆಯದಂತೆ ಎಲ್ಲರೂ ಜಾಗರೂಕರಾಗಬೇಕು. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿ ಎಲ್ಲಾ ಆರೋಪಿಗಳನ್ನು ಬಂಧಿಸಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ.
Jaipur,Rajasthan













