Last Updated:
ಮಹಾಭಾರತದಲ್ಲಿ, ಸುಯೋಧನ ಎಂದೇ ಕರೆಯಲ್ಪಡುವ ದುರ್ಯೋಧನ ಖಳನಾಯಕನಾಗಿ ಮಿಂಚುತ್ತಾನೆ. ಆದರೆ ಈ ಕೌರವ ರಾಜನಲ್ಲಿಯೂ ಅನೇಕ ಒಳ್ಳೆಯ ಗುಣಗಳಿದ್ದವು. ಇಂತಹ ಪರೋಪಕಾರಿ ಮತ್ತು ನ್ಯಾಯಯುತ ಆಡಳಿತಗಾರ ದುರ್ಯೋಧನನನ್ನು ಇಂದಿಗೂ ಕೇರಳದಲ್ಲಿ ಪೂಜಿಸಲಾಗುತ್ತದೆ.
Duryodhana Temple Kerala: ಮಹಾಭಾರತದಲ್ಲಿ ದುರ್ಯೋಧನ ಅನ್ನೋದು ಮರೆಯಲಾಗದ ಹೆಸರು. ದುರ್ಯೋಧನ ಇಲ್ಲದೇ ಮಹಾಭಾರತ ಪರಿಪೂರ್ಣ ಆಗೋದಿಲ್ಲ. ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಕೌರವರ ಹಿರಿಯ ರಾಜಕುಮಾರ ದುರ್ಯೋಧನನು ಬಾಲ್ಯದಿಂದಲೂ ಪಾಂಡವರ ಬಗ್ಗೆ ದ್ವೇಷ ಮತ್ತು ಆಕ್ರೋಶ ಹೊಂದಿದ್ದನು, ಇದರ ಹೊರತಾಗಿಯೂ, ಕೇರಳದಲ್ಲಿ ಒಂದು ದೇವಾಲಯವು ದುರ್ಯೋಧನನ ಹೆಸರಿನಲ್ಲಿ ಇಂದಿಗೂ ಒಂದು ಆಚರಣೆಯನ್ನು ಮುಂದುವರಿಸಿಕೊಂಡು ಬಂದಿದೆ.
ಮಹಾಭಾರತದಲ್ಲಿ, ಸುಯೋಧನ ಎಂದೇ ಕರೆಯಲ್ಪಡುವ ದುರ್ಯೋಧನ ಖಳನಾಯಕನಾಗಿ ಮಿಂಚುತ್ತಾನೆ. ಆದರೆ ಈ ಕೌರವ ರಾಜನಲ್ಲಿಯೂ ಅನೇಕ ಒಳ್ಳೆಯ ಗುಣಗಳಿದ್ದವು. ಜಾತಿ ವ್ಯವಸ್ಥೆಯ ವಿರುದ್ಧ ದುರ್ಯೋಧನನ ವಿರೋಧ, ಕರ್ಣನೊಂದಿಗಿನ ಅವನ ಅಚಲ ಸ್ನೇಹ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಬಡವರ ಬಗೆಗಿನ ಅವನ ಕರುಣೆಯಿಂದ ಆತ ನಿಜವಾದ ನಾಯಕನೂ ಹೌದು.. ಆದರೆ ಮಹಾಭಾರತದಲ್ಲಿ ಪಾಂಡವರೇ ಹೀರೋಗಳು, ಕೌರವರೇ ವಿಲನ್ಗಳು ಅನ್ನೋದು ನಿಯಮ.
ಕೇರಳದ ಕೊಲ್ಲಂ ಜಿಲ್ಲೆಯ ಪೊರುವಾಳಿ ಗ್ರಾಮದಲ್ಲಿರುವ ಪೊರುವಾಳಿ ಪೆರುವಿರುತಿ ಮಲನಾಡ ದೇವಾಲಯವು ಸಾಕಷ್ಟು ಪ್ರಸಿದ್ಧವಾಗಿದೆ. ಈ ದೇವಾಲಯದ ಸಂಕೀರ್ಣವು ಸುಮಾರು 15 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಅಧಿಕೃತ ಕಂದಾಯ ದಾಖಲೆಗಳು ಮತ್ತು ಭೂ ದಾಖಲೆಗಳ ಪ್ರಕಾರ, ಆಸ್ತಿಯನ್ನು ದುರ್ಯೋಧನನ ಹೆಸರಿನಲ್ಲಿ ನೋಂದಾಯಿಸಲಾಗಿತ್ತದೆ. ಅದಕ್ಕಾಗಿಯೇ, ವಾರ್ಷಿಕ ಭೂ ತೆರಿಗೆ ಪಾವತಿಸಿದಾಗಲೆಲ್ಲಾ, ತೆರಿಗೆ ರಶೀದಿಯನ್ನು ದುರ್ಯೋಧನನ ಹೆಸರಿನಲ್ಲಿ ನೀಡಲಾಗುತ್ತದೆ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.
ಸ್ಥಳೀಯ ನಂಬಿಕೆಯ ಪ್ರಕಾರ, ಪಾಂಡವರು ವನವಾಸದಲ್ಲಿದ್ದ ಕಾಲಕ್ಕೆ ಈ ದೇವಾಲಯದ ಇತಿಹಾಸ ಹಿಂತಿರುಗುತ್ತದೆ. ದಂತಕಥೆಗಳ ಪ್ರಕಾರ, ಪಾಂಡವರನ್ನು ಹುಡುಕುತ್ತಾ ದುರ್ಯೋಧನನು ಇಂದಿನ ಕೇರಳದ ಕಾಡುಗಳ ಮೂಲಕ ಪ್ರಯಾಣಿಸಿದನು. ಅವನ ಪ್ರಯಾಣದ ಸಮಯದಲ್ಲಿ, ಅವನಿಗೆ ದಣಿವು ಮತ್ತು ಬಾಯಾರಿಕೆಯಾಯಿತು. ಆಗ ಅಸ್ಪೃಶ್ಯ ಜಾತಿಗೆ ಸೇರಿದ ಕುರುವ ಸಮುದಾಯದ ವೃದ್ಧ ಮಹಿಳೆಯೊಬ್ಬರು ಅವನಿಗೆ ಸೇಂದಿಯನ್ನು ಅರ್ಪಿಸಿದರು. ಆದರೆ ಜಾತಿ ತಾರತಮ್ಯವನ್ನು ಪರಿಗಣಿಸದ ದುರ್ಯೋಧನನು ಅಸ್ಪೃಶ್ಯ ಮಹಿಳೆ ನೀಡಿದ ಸೇಂದಿಯನ್ನು ಸ್ವೀಕರಿಸಿದನು ಎಂದು ನಂಬಲಾಗಿದೆ.
ಸ್ಥಳೀಯ ನಿವಾಸಿಗಳು ದುರ್ಯೋಧನನ ನಿರ್ಧಾರವನ್ನು ಸಮಾನತೆ ಮತ್ತು ಕರುಣೆಯ ಸಂಕೇತವಾಗಿ ನೆನಪಿಸಿಕೊಳ್ಳುತ್ತಾರೆ. ಗ್ರಾಮಸ್ಥರ ಆತನ ದಯೆಯಿಂದ ಪ್ರೇರಿತರಾಗಿ, ಊರಿನ ಕಲ್ಯಾಣ ಮತ್ತು ಸಮೃದ್ಧಿಗಾಗಿ ದೊಡ್ಡ ಕೃಷಿ ಭೂಮಿಯನ್ನು ಊರಿನ ಜನತೆ ದಾನ ಮಾಡಿದರು ಎಂದು ಹೇಳಲಾಗುತ್ತದೆ.
ಈ ದೇವಾಲಯದ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ವಿಗ್ರಹವಿಲ್ಲ. ದುರ್ಯೋಧನನ ಪ್ರತಿಮೆಯ ಬದಲಿಗೆ, ದೇವಾಲಯವು ಎತ್ತರದ ವೇದಿಕೆ ತರದ ಚಾವಡಿಯನ್ನು ಹೊಂದಿದ್ದು, ಅಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ. ಅಲ್ಲಿ ದುರ್ಯೋಧನನ ಗದೆಯನ್ನು ಪೂಜಿಸಲಾಗುತ್ತದೆ. ಗ್ರಾಮಸ್ಥರು ಪ್ರೀತಿಯಿಂದ ದುರ್ಯೋಧನನನ್ನು ಅಪ್ಪುಪ್ಪ ಎಂದು ಕರೆಯುತ್ತಾರೆ, ಇದರರ್ಥ ಮಲಯಾಳಂನಲ್ಲಿ ‘ಅಜ್ಜ’ ಎಂದು.
ಈ ದೇವಾಲಯದಲ್ಲಿ ದೈನಂದಿನ ನೈವೇದ್ಯವಾಗಿ ಮದ್ಯವನ್ನು ಅರ್ಪಿಸಲಾಗುತ್ತದೆ. ಈ ಪದ್ಧತಿಯು ದುರ್ಯೋಧನನಿಗೆ ಸ್ಥಳೀಯ ಮಹಿಳೆಯೊಬ್ಬರು ಹೆಂಡ ಅರ್ಪಿಸಿದ ಪೌರಾಣಿಕ ಘಟನೆಯನ್ನು ಗೌರವಿಸುತ್ತದೆ ಎಂದು ಭಕ್ತರು ನಂಬುತ್ತಾರೆ. ಭಾರತದಲ್ಲಿನ ಧಾರ್ಮಿಕ ಸಂಸ್ಥೆಗಳು ಕೆಲವು ಆದಾಯ ತೆರಿಗೆ ವಿನಾಯಿತಿಗಳನ್ನು ಪಡೆಯುತ್ತಾದರೂ, ಈ ದೇಗುಲದಲ್ಲಿ ಮಾತ್ರ ಇಂದಿಗೂ ಭೂ ತೆರಿಗೆಯನ್ನು ಪಾವತಿಸುವ ಸಂಪ್ರದಾಯ ಇದೆ.
ಕೇರಳದ ಭೂಕಂದಾಯ ವ್ಯವಸ್ಥೆಯನ್ನು ಔಪಚಾರಿಕಗೊಳಿಸಿದಾಗ, ದೇವಾಲಯದ ಆಸ್ತಿಯನ್ನು ಅಧಿಕೃತವಾಗಿ ದುರ್ಯೋಧನನ ಹೆಸರಿನಲ್ಲಿ ಪ್ರಧಾನ ದೇವರಾಗಿ ನೋಂದಾಯಿಸಲಾಯಿತು ಎಂದು ಹೇಳಲಾಗುತ್ತದೆ.













