Last Updated:
ಪ್ಲೇಆಫ್‌ಗೆ ಪ್ರವೇಶಿಸಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಒಂದು ಪ್ರಶ್ನೆ ನಿರಂತವಾಗಿ ಕಾಡುತ್ತಿದೆ. ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಫಿಲ್ ಸಾಲ್ಟ್ ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮೈದಾನಕ್ಕಿಳಿಯುತ್ತಾರೆಯೇ? ಇಲ್ಲವೇ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
2026ರ ಐಪಿಎಲ್ನ ಮೊದಲ ಕ್ವಾಲಿಫೈಯರ್ (Qualifier 1) ಪಂದ್ಯವು ಮಂಗಳವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್‌ಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ (Royal Challengers Bengaluru vs Gujarat Titans) ನಡುವೆ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಂದ್ಯವು ಸಂಜೆ 7:30ಕ್ಕೆ ಪ್ರಾರಂಭವಾಗಲಿದ್ದು, ಈಗಾಗಲೇ ಎರಡೂ ತಂಡಗಳು ಸ್ಪರ್ಧೆಗಾಗಿ ಧರ್ಮಶಾಲಾಕ್ಕೆ ಆಗಮಿಸಿ, ಅಭ್ಯಾಸ ನಡೆಸಿವೆ. ಈ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್ (Rajat Patidar) ಪ್ಲೇಯಿಂಗ್ ಇಲೆವನ್, ಸಿದ್ಧತೆ ಕುರಿತಂತೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ಲೇಆಫ್‌ಗೆ ಪ್ರವೇಶಿಸಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಒಂದು ಪ್ರಶ್ನೆ ನಿರಂತರವಾಗಿ ಕಾಡುತ್ತಿದೆ. ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಫಿಲ್ ಸಾಲ್ಟ್ ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮೈದಾನಕ್ಕಿಳಿಯುತ್ತಾರೆಯೇ? ಇಲ್ಲವೇ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಪಂದ್ಯದ ಮುನ್ನಾದಿನದಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಈ ಪ್ರಶ್ನೆಗೆ ಉತ್ತರಿಸಿದ್ದು, ಫಿಲ್ ಸಾಲ್ಟ್ ಆಡುವ ಸಾಧ್ಯತೆಯ ಆಶಾವಾದ ವ್ಯಕ್ತಪಡಿಸಿದರು. ಆದರೆ, ಅಂತಿಮ ನಿರ್ಧಾರವು ವೈದ್ಯಕೀಯ ತಂಡದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದಾರೆ.
“ಸಾಲ್ಟ್ ಫಿಟ್ ಆಗಿದ್ದಾರೆ. ಆದರೆ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಅವರು ಕೆಲವು ಅಭ್ಯಾಸ ಸೆಷನ್ಗಳಲ್ಲೂ ಭಾಗವಹಿಸುತ್ತಿದ್ದರು. ಆದರೆ ನಾವು ಇನ್ನೂ ನಮ್ಮ ಪ್ಲೇಯಿಂಗ್ XI ಅನ್ನು ಅಂತಿಮಗೊಳಿಸಿಲ್ಲ. ಪಿಚ್ ಪರಿಸ್ಥಿತಿಗಳನ್ನು ನಿರ್ಣಯಿಸಿದ ನಂತರ ನಾವು ತಂಡಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ವೈದ್ಯಕೀಯ ತಂಡದಿಂದ ಸಲಹೆಗಳು ಮತ್ತು ನವೀಕರಣಗಳನ್ನು ಪಡೆದ ನಂತರವೇ ಅವರ ಭಾಗವಹಿಸುವಿಕೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಪಾಟೀದಾರ್ ಹೇಳಿದ್ದಾರೆ.
ಏಪ್ರಿಲ್ 18 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬಲಗೈ ಓಪನಿಂಗ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರು ಬೆರಳಿಗೆ ತೀವ್ರ ಗಾಯ ಮಾಡಿಕೊಂಡರು ಎಂಬುದು ಗಮನಿಸಬೇಕಾದ ಸಂಗತಿ. ಪರಿಣಾಮವಾಗಿ, ಅವರು ವಿಸ್ತೃತ ಅವಧಿಗೆ ಇಂಗ್ಲೆಂಡ್‌ಗೆ ಮರಳಿದ್ದರು. ಈಗ, ಕ್ಯಾಪ್ಟನ್ ಪಾಟೀದಾರ್ ಸಾಲ್ಟ್ ಫಿಟ್ ಆಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಆದರೆ ಪ್ಲೇಯಿಂಗ್ XI ನಲ್ಲಿ ಅವರು ಕಣಕ್ಕಿಳಿಯಲಿದ್ದಾರಾ ಎಂಬುದು ಟಾಸ್ ವೇಳೆ ಮಾತ್ರ ತಿಳಿಯಲಿದೆ.
ಫಿಲ್ ಸಾಲ್ಟ್ ಗಾಯಗೊಂಡ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಕಪ್ ಓಪನರ್ ಜೇಕಬ್ ಬೆಥೆಲ್ಗೆ ಆರಂಭಿಕ ಸ್ಥಾನ ನೀಡಿತ್ತು. ಆದರೆ ಈ ಅವಧಿಯಲ್ಲಿ ಅವರ ಪ್ರದರ್ಶನ ಕಳಪೆಯಾಗಿತ್ತು ಮತ್ತು ಪರಿಣಾಮವಾಗಿ ತಂಡವು ಹಲವಾರು ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಬೇಕಾಯಿತು. ನಂತರ ಜೇಕಬ್ ಬೆಥೆಲ್ ಕೂಡ ಗಾಯಗೊಂಡು ತಂಡದಿಂದ ಹೊರಬಿದ್ದರು. ಕಳೆದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಣಕ್ಕಿಳಿದು 18 ಎಸೆತಗಳಲ್ಲಿ 43 ರನ್ಗಳಿಸಿದ್ದರು. ಈ ಸನ್ನಿವೇಶವನ್ನು ಗಮನಿಸಿದರೆ, ಆರ್‌ಸಿಬಿ ಈಗ ಗಮನಾರ್ಹ ಸವಾಲನ್ನು ಎದುರಿಸುತ್ತಿದೆ. ಫಿಟ್ ಆಗಿರುವ ಫಿಲ್ ಸಾಲ್ಟ್ ಅವರನ್ನು ಓಪನರ್ ಆಗಿ ಆಡಿಸಬೇಕೆ ಅಥವಾ ಕಳೆದ ಪಂದ್ಯದ ಸಂಯೋಜನೆಯನ್ನೇ ಮುಂದುವರಿಸಬೇಕೋ ಎಂದು ಚಿಂತೆಗೀಡು ಮಾಡಿದೆ. ಒಳ್ಳೆಯ ಸಂಗತಿ ಎಂದರೆ ಇಬ್ಬರೂ ಒಳ್ಳೆಯ ಆಯ್ಕೆಯಾಗಿರುವುದರಿಂದ ಯಾರು ಆಡಿದರೂ ತಂಡಕ್ಕೆ ಅನುಕೂಲವಾಗಲಿದೆ.
ಈ ವರ್ಷದ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸುವ ಮೂಲಕ 18 ಅಂಕಗಳೊಂದಿಗೆ ಪ್ಲೇಆಫ್ ತಲುಪಿದೆ ಎಂಬುದು ಗಮನಿಸಬೇಕಾದ ಸಂಗತಿ. ಅದೇ ರೀತಿ, ಗುಜರಾತ್ ಟೈಟನ್ಸ್ ಕೂಡ ಅಷ್ಟೇ ಸಂಖ್ಯೆಯ ಅಂಕಗಳೊಂದಿಗೆ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಆದರೆ, ಆರ್‌ಸಿಬಿಗೆ ಹೋಲಿಸಿದರೆ ಕಡಿಮೆ ನಿವ್ವಳ ರನ್ ದರದಿಂದಾಗಿ, ಜಿಟಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೂ ಎರಡೂ ತಂಡಗಳ ನಡುವೆ ತೀವ್ರ ಮತ್ತು ನಿಕಟ ಪೈಪೋಟಿಯ ಪಂದ್ಯವನ್ನು ನಿರೀಕ್ಷಿಸಲಾಗಿದೆ.













