Last Updated:
Health Insurance: ಆರೋಗ್ಯ ವಿಮೆ ಮಾಡಿಸಿದರೂ ಸಣ್ಣಪುಟ್ಟ ತಾಂತ್ರಿಕ ಕಾರಣ ನೀಡಿ ಕ್ಲೈಮ್ ತಿರಸ್ಕರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ ತ್ರಿಶೂರಿನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ನೀಡಿರುವ ಇತ್ತೀಚಿನ ತೀರ್ಪು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಸಣ್ಣ ತಾಂತ್ರಿಕ ವಿಚಾರಕ್ಕೆ ಕ್ಲೈಮ್ ತಿರಸ್ಕರಿಸುವುದು ಸರಿಯಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ.
Health Insurance: ಮನೆಯಲ್ಲಿ ಯಾರಿಗಾದ್ರೂ ಹಾರ್ಟ್ ಅಟ್ಯಾಕ್. ತುರ್ತಾಗಿ ಆಸ್ಪತ್ರೆಗೆ ಸೇರಿಸಿದ್ರಿ. 7 ದಿನ ICU, ಸ್ಟೆಂಟ್ ಹಾಕಿದ್ರು, ಆಸ್ಪತ್ರೆ ಬಿಲ್ (Hospital Bill) ಆಯ್ತು ₹5 ಲಕ್ಷ. ‘ಪರವಾಗಿಲ್ಲ, ಹೆಲ್ತ್ ಇನ್ಶುರೆನ್ಸ್ (Health Insurance) ಇದೆ’ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ರಿ. ಆದ್ರೆ 15 ದಿನಕ್ಕೆ ಇನ್ಶುರೆನ್ಸ್ ಕಂಪನಿಯಿಂದ (Insurance Company) ಲೆಟರ್ ಬಂತು – ಕ್ಲೈಮ್ ರಿಜೆಕ್ಟೆಡ್. ಕಾರಣ? ಡಿಸ್ಚಾರ್ಜ್ ಸಮ್ಮರಿಯಲ್ಲಿ ಅಡ್ಮಿಷನ್ ಟೈಮ್ ನಮೂದಿಸಿಲ್ಲ ಅಥವಾ ಪೂರ್ವ-ಅಸ್ತಿತ್ವದ ಕಾಯಿಲೆ ಬಗ್ಗೆ ಒಂದು ಕಾಲಂ ಖಾಲಿ ಬಿಟ್ಟಿದ್ದೀರಿ ಎಂದು ಕಾರಣ ನೀಡಲಾಗಿರುತ್ತದೆ. ಈ ನೋವು ಅನುಭವಿಸಿದವರಿಗೇ ಗೊತ್ತು. ಆದರೆ, ಇದಕ್ಕೆ ಈಗ ಬ್ರೇಕ್ ಬಿದ್ದಿದೆ.
ಹೌದು, ಇನ್ನು ಮುಂದೆ ‘ತಾಂತ್ರಿಕ ಲೋಪ’, ‘ಕ್ಲೆರಿಕಲ್ ಎರರ್’, ‘ಡಾಕ್ಯುಮೆಂಟ್ ಮಿಸ್ ಮ್ಯಾಚ್’ ಅನ್ನೋ ಕಾರಣಕ್ಕೆ ಇನ್ಶುರೆನ್ಸ್ ಹಣ ರಿಜೆಕ್ಟ್ ಮಾಡೋ ಹಾಗಿಲ್ಲ ಎಂದು ಜಿಲ್ಲಾ ಗ್ರಾಹಕ ಆಯೋಗ ಮಹತ್ವದ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ.
ಕೇರಳದ ತ್ರಿಶೂರ್‌ನಲ್ಲಿರುವ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ಬಂದ, ಕೋವಿಡ್ 19 ಆರೋಗ್ಯ ವಿಮಾ ಪಾಲಿಸಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಿಮಾ ಕಂಪನಿ 72 ಗಂಟೆಗಳ ಆಸ್ಪತ್ರೆ ವಾಸ್ತವ್ಯದ ಷರತ್ತನ್ನು ಮುಂದಿಟ್ಟು ಕ್ಲೈಮ್ ತಿರಸ್ಕರಿಸಿತ್ತು. ಪಾಲಿಸಿದಾರರು ಆಸ್ಪತ್ರೆಯಲ್ಲಿ 70 ಗಂಟೆ ಚಿಕಿತ್ಸೆ ಪಡೆದಿದ್ದರು. ಆದರೆ ಪೂರ್ಣ 72 ಗಂಟೆ ಆಗಿಲ್ಲ ಎಂಬ ಕಾರಣ ನೀಡಿ ಕಂಪನಿ 1 ಲಕ್ಷ ರೂಪಾಯಿ ಕ್ಲೈಮ್ ನಿರಾಕರಿಸಿತ್ತು. ಈ ವಿಚಾರ ಗ್ರಾಹಕ ಆಯೋಗದ ಮುಂದೆ ಬಂದಾಗ ಆಯೋಗ ಮಹತ್ವದ ತೀರ್ಪು ನೀಡಿದೆ.
ಇನ್ನು, ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು ಪ್ರಸ್ತುತ ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ತಂತ್ರಜ್ಞಾನವು ಸಾಕಷ್ಟು ಮುಂದುವರಿದಿದೆ ಎಂದು ಗಮನಿಸಿದೆ. ಅದರಲ್ಲೂ, ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳಿಂದಾಗಿ ರೋಗಿಗಳು ಆಸ್ಪತ್ರೆಯಲ್ಲಿ ಕಳೆಯುವ ಅವಧಿ ಕಡಿಮೆಯಾಗುವುದು ಸಹಜ ಪ್ರಕ್ರಿಯೆಯಾಗಿದೆ. ಅದರಂತೆ, ಕಡಿಮೆ ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದರು ಎಂದಾಕ್ಷಣ ರೋಗದ ತೀವ್ರತೆ ಕಡಿಮೆ ಇತ್ತು ಎಂದು ಅರ್ಥೈಸಿಕೊಳ್ಳುವುದು ತಪ್ಪು ಎಂದು ಆಯೋಗವು ಅಭಿಪ್ರಾಯಪಟ್ಟಿದೆ. ಅದರಂತೆ, ಕೇವಲ ಎರಡುವರೆ ಗಂಟೆಗಳ ಕಾಲಾವಧಿಯ ವ್ಯತ್ಯಾಸಕ್ಕಾಗಿ ಇಡೀ ಕ್ಲೈಮ್ ಅನ್ನು ರದ್ದುಗೊಳಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತೀರ್ಮಾನಿಸಿದೆ.
ಮುಂದುವರೆದು, ಗ್ರಾಹಕರ ಪರವಾಗಿ ತೀರ್ಪು ನೀಡಿದ ಆಯೋಗವು ವಿಮಾ ಕಂಪನಿಗೆ ಭಾರಿ ದಂಡ ವಿಧಿಸಿದೆ. ಪಾಲಿಸಿದಾರರಿಗೆ ಸೇರಬೇಕಾದ ಮೂಲ ವಿಮಾ ಮೊತ್ತ ಒಂದು ಲಕ್ಷ ರೂಪಾಯಿಗಳನ್ನು ತಕ್ಷಣವೇ ಪಾವತಿಸಬೇಕು ಎಂದು ಆದೇಶಿಸಿದೆ. ಇದರೊಂದಿಗೆ ಗ್ರಾಹಕರಿಗೆ ಉಂಟುಮಾಡಿದ ಮಾನಸಿಕ ಯಾತನೆಗೆ 10 ಸಾವಿರ ರೂಪಾಯಿಗಳ ಪರಿಹಾರ, ಜೊತೆಗೆ ನ್ಯಾಯಾಲಯದ ಮೊಕದ್ದಮೆ ವೆಚ್ಚವಾಗಿ 5 ಸಾವಿರ ರೂಪಾಯಿಗಳು ಹಾಗೂ ದೂರು ದಾಖಲಾದ ದಿನಾಂಕದಿಂದ ವಾರ್ಷಿಕ 9 ಪ್ರತಿಶತ ಬಡ್ಡಿಯನ್ನು ಸೇರಿಸಿ ಗ್ರಾಹಕರಿಗೆ ನೀಡುವಂತೆ ವಿಮಾ ಕಂಪನಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ತಜ್ಞರ ಪ್ರಕಾರ ಆರೋಗ್ಯ ವಿಮಾ ಪಾಲಿಸಿಗಳನ್ನು ಕೇವಲ ಕಟ್ಟುನಿಟ್ಟಾದ ಲಿಖಿತ ನಿಯಮಗಳ ಚೌಕಟ್ಟಿನಲ್ಲಿ ಮಾತ್ರ ನೋಡಬಾರದು, ಬದಲಿಗೆ ಗ್ರಾಹಕರ ನೈಜ ಹಿತಾಸಕ್ತಿ ಮತ್ತು ಮಾನವೀಯ ಆಧಾರದ ಮೇಲೆ ಅರ್ಥೈಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಾಲಿಸಿ ಬಜಾರ್ ಪ್ರತಿನಿಧಿಗಳು ಗ್ರಾಹಕರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಯಾವುದೇ ಆರೋಗ್ಯ ವಿಮೆಯನ್ನು ಖರೀದಿಸುವ ಮುನ್ನ ಅದರಲ್ಲಿರುವ ಕೇವಲ ಸಕಾರಾತ್ಮಕ ಪ್ರಯೋಜನಗಳನ್ನು ಮಾತ್ರವಲ್ಲದೆ, ವಿಮೆಯಿಂದ ಹೊರಗಿಡಲಾದ ಕಾಯಿಲೆಗಳು ಮತ್ತು ಆಸ್ಪತ್ರೆ ದಾಖಲಾತಿಯ ನಿಯಮ ಹಾಗೂ ಷರತ್ತುಗಳನ್ನು ಮೊದಲೇ ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.













