Last Updated:
ಏಷ್ಯನ್ ಗೇಮ್ಸ್‌ನ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಚಿನ್ನ ಗೆದ್ದ ನಂತರ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ತಂಡದ ಸ್ಟಾರ್ ಆಟಗಾರ್ತಿಗೆ ಭರ್ಜರಿ ಬಹುಮಾನ ಘೋಷಿಸಿದ್ದಾರೆ.
ಜಪಾನ್(Japan)ನ ನಾಗೋಯಾ(Nagoya)ದಲ್ಲಿ ನಡೆದ 2026 ಏಷ್ಯನ್ ಗೇಮ್ಸ್(Asian Games)ನಲ್ಲಿ ಭಾರತ(India)ದ ಮಹಿಳಾ ಕ್ರಿಕೆಟ್ (Cricket) ತಂಡ ಚಿನ್ನದ ಪದಕ ಗೆದ್ದಿದೆ. ಈ ತಂಡದಲ್ಲಿ ಆಡಿದ ತಮಿಳುನಾಡಿನ ಯುವ ಆಟಗಾರ್ತಿ ಜಿ. ಕಮಲಿನಿ(G. Kamalini)ಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (C. Joseph Vijay) ಭರ್ಜರಿ ನಗದು ಬಹುಮಾನ (Cash Prize) ಘೋಷಣೆ ಮಾಡಿದ್ದಾರೆ. ಮಹಿಳೆಯರ ಟಿ20 ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು 147 ರನ್‌ಗಳಿಂದ ಸೋಲಿಸಿ ಚಿನ್ನ (Gold) ಉಳಿಸಿಕೊಂಡಿತು.
ಇದು ಭಾರತಕ್ಕೆ ಈ ಏಷ್ಯನ್ ಗೇಮ್ಸ್‌ನ ಮೊದಲ ಚಿನ್ನ. ಮೊದಲು ಬೌಲರ್‌ಗಳು ಮಿಂಚಿನ ಪ್ರದರ್ಶನ ನೀಡಿದರೆ, ನಂತರ ಸ್ಮೃತಿ ಮಂಧಾನ, ಶಫಾಲಿ ವರ್ಮಾ ಮತ್ತು ರಿಚಾ ಘೋಷ್ ಬ್ಯಾಟಿಂಗ್‌ನಲ್ಲಿ ಉತ್ತಮ ಆಟ ತೋರಿದರು. ಭಾರತದ ಐತಿಹಾಸಿಮ ಗೆಲುವಿನಲ್ಲಿ ಯುವ ಆಟಗಾರ್ತಿ ಜಿ. ಕಮಲಿನಿ ಪ್ರಮುಖ ಪಾತ್ರವಹಿಸಿದರು. ಹೀಗಾಗಿ ಕಮಲಿನಿಗೆ ಸಿ. ಜೋಸೆಫ್ ವಿಜಯ್ ಅವರು 75 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ.
ವಿಜಯ್ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಅಭಿನಂದಿಸಿದರು. ತಮಿಳುನಾಡಿನ ಮಧುರೈನ ಕಮಲಿನಿ ಅವರನ್ನು ವಿಶೇಷವಾಗಿ ಹೆಸರಿಸಿದರು. “ಜಪಾನ್‌ನಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಕ್ರಿಕೆಟ್‌ನಲ್ಲಿ ಚಿನ್ನದ ಪದಕ ಗೆದ್ದು ದೊಡ್ಡ ಸಾಧನೆ ಮಾಡಿದ ಭಾರತೀಯ ಮಹಿಳಾ ತಂಡಕ್ಕೆ ಮತ್ತು ಆ ತಂಡದ ಸದಸ್ಯೆ ಕಮಲಿನಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು” ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಯುವ ಆಟಗಾರ್ತಿ ಕಮಲಿನಿ ಅವರ ದೊಡ್ಡ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ತಮಿಳುನಾಡು ಸರ್ಕಾರದಿಂದ 75 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ವಿಜಯ್ ಘೋಷಣೆ ಮಾಡಿದ್ದಾರೆ. ತಮಿಳುನಾಡು ಸರ್ಕಾರ ಅವರಂತಹ ಎಲ್ಲಾ ಪ್ರತಿಭಾವಂತ ಆಟಗಾರರಿಗೆ ಯಾವಾಗಲೂ ಬೆಂಬಲ ನೀಡುತ್ತದೆ. ಕಮಲಿನಿ ಗೆದ್ದಿದ್ದು ತಮಿಳುನಾಡಿನ ಯುವಕರಿಗೆ ಮತ್ತು ಹೆಣ್ಣುಮಕ್ಕಳಿಗೆ ಹೊಸ ಸ್ಫೂರ್ತಿ ಹಾಗೂ ಧೈರ್ಯ ನೀಡುತ್ತದೆ. ಅವರು ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ನಾನು ಬಯಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಇದು ಈ ಟೂರ್ನಿಯಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ. ಸ್ಮೃತಿ ಮಂಧಾನಾ 45 ಎಸೆತಗಳಲ್ಲಿ 79 ರನ್ ಗಳಿಸಿದರೆ, ಶಫಾಲಿ 48 ರನ್ ಗಳಿಸಿದರು. ರಿಚಾ ಘೋಷ್ ಕೇವಲ 22 ಎಸೆತಗಳಲ್ಲಿ ಔಟ್ ಆಗದೆ 49 ರನ್ ಗಳಿಸಿದರು. ನಂತರ ಭಾರತ ಶ್ರೀಲಂಕಾವನ್ನು 69 ರನ್‌ಗೆ ಆಲೌಟ್ ಮಾಡಿತು. ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಮಿಂಚಿದರೆ, ಶಫಾಲಿ, ಶ್ರೀ ಚರಣಿ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದರು.
ತಮಿಳುನಾಡಿನ ವಿಕೆಟ್ ಕೀಪರ್-ಬ್ಯಾಟರ್ ಜಿ. ಕಮಲಿನಿ ಭಾರತದ ಏಷ್ಯನ್ ಗೇಮ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಅವರು ಈಗಾಗಲೇ ಭಾರತ ತಂಡದಲ್ಲಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಮಹಿಳಾ ಏಷ್ಯಾ ಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಕೇವಲ 5 ಎಸೆತಗಳಲ್ಲಿ 15 ರನ್ ಗಳಿಸಿ ನಾಟೌಟ್ ಉಳಿದರು. 2024ರಲ್ಲಿ ಭಾರತ ಗೆದ್ದ ಮೊದಲ ಮಹಿಳಾ ಅಂಡರ್-19 ಏಷ್ಯಾ ಕಪ್ ಮತ್ತು 2025ರ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅವರು ಒಳ್ಳೆಯ ಆಟ ಆಡಿ ಹೆಸರು ಮಾಡಿದರು.
ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದಾಗ, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ್ತಿ ಆದರು. ಡಿಸೆಂಬರ್ 2025ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ಪಾದಾರ್ಪಣೆ ಮಾಡಿದರು.














