Last Updated:
ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲೆ ಇರಾನಿನ ಡ್ರೋನ್ ದಾಳಿ ನಡೆದಿದ್ದು, ಅದರಲ್ಲಿ ಒಬ್ಬ ಭಾರತೀಯ ಪ್ರಜೆ ಸಾವನ್ನಪ್ಪಿ 63 ಜನರು ಗಾಯಗೊಂಡಿರುವ ದೃಶ್ಯಗಳ ಕಣ್ಗಾವಲು ವೀಡಿಯೊವನ್ನು ಕುವೈತ್ ಡಿಜಿಸಿಎ ಬಿಡುಗಡೆ ಮಾಡಿದೆ.
ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kuwait Airport) ಟರ್ಮಿನಲ್ 1 ಮೇಲೆ ಜೂನ್ 3, 2026 ರಂದು ನಡೆದ ಡ್ರೋನ್ ದಾಳಿ (Drone Attack) ಇದೀಗ ವಿಶ್ವದ ಗಮನ ಸೆಳೆದಿದೆ. ಕುವೈತ್ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಬಿಡುಗಡೆ ಮಾಡಿದ ಕಣ್ಗಾವಲು ವೀಡಿಯೊದಲ್ಲಿ, ದಾಳಿಯ ಕ್ಷಣಗಳು ಹಾಗೂ ಅದಾದ ನಂತರದ ಭೀಕರ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತವೆ. ಇರಾನ್ ನಡೆಸಿದ ‘ಕ್ರೂರ ಆಕ್ರಮಣ’ ಎಂದು ಕುವೈತ್ ಸರ್ಕಾರ ಈ ಘಟನೆಗೆ ಹೆಸರು ನೀಡಿದೆ.
ವೀಡಿಯೊದಲ್ಲಿ ಡ್ರೋನ್ ವಿಮಾನ ನಿಲ್ದಾಣದ ಕಟ್ಟಡದ ಮೇಲೆ ಬಡಿದ ಕ್ಷಣ, ಅದರ ಪರಿಣಾಮವಾಗಿ ಟರ್ಮಿನಲ್ 1 ಛಾವಣಿಯ ಒಂದು ಭಾಗ ಕುಸಿಯುವ ದೃಶ್ಯಗಳು ದಾಖಲಾಗಿವೆ. ಈ ದಾಳಿಯಿಂದ ಒಬ್ಬ ಭಾರತೀಯ ಪ್ರಜೆ ಸಾವನ್ನಪ್ಪಿದ್ದು, 63 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಈ ದಾಳಿಯಲ್ಲಿ ಒಬ್ಬ ಭಾರತಯ ಪ್ರಜೆ ಸಾವನಪ್ಪಿದ್ದಾರೆ, ಅಲ್ಲದೇ 63 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರು ಭಾರತೀಯರಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಲ್ಲಿ, ಹಾಗೂ ಮೃತರ ಕುಟುಂಬಕ್ಕೆ ಅಗತ್ಯ ಸಹಾಯ ನೀಡುವಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ.
ಈ ದಾಳಿಯಿಂದ ಕುವೈತ್ನ ಪ್ರಮುಖ ವಾಯುಯಾನ ಮೂಲಸೌಕರ್ಯಕ್ಕೆ ದೊಡ್ಡ ಹಾನಿಯಾಗಿದೆ. ಟರ್ಮಿನಲ್ 1 ಭಾಗಶಃ ಹಾನಿಗೊಳಗಾದ ಕಾರಣ, ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿ ಭೀತಿಗೊಳಗಾದರು, ಕೆಲವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದರು. ಜೀವಹಾನಿ, ಗಂಭೀರ ಗಾಯಗಳು ಮತ್ತು ವ್ಯಾಪಕ ವಸ್ತು ಹಾನಿ ಸಂಭವಿಸಿರುವುದನ್ನು DGCA ತನ್ನ ಹೇಳಿಕೆಯಲ್ಲಿ ದಾಖಲಿಸಿದೆ.
ಇದರ ವಿರುದ್ಧ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತಾವು ಕುವೈತ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಲ್ಲ ಎಂದು ಹೇಳಿಕೊಂಡಿದೆ. ಅಮೆರಿಕಾ ನಿರ್ಮಿತ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೆ, ಇರಾನಿನ ಕ್ಷಿಪಣಿಗಳನ್ನು ತಡೆಯುವಲ್ಲಿ ವಿಫಲವಾದ ನಂತರ ಅದು ಬಿದ್ದು ಹಾನಿ ಮಾಡಿರಬಹುದು ಎಂಬ ದಾವೆಯನ್ನು IRGC ಮುಂದಿಟ್ಟಿದೆ. ಆದರೆ ಕುವೈತ್ ಸೇನಾ ಅಧಿಕಾರಿಗಳು ಇದನ್ನು ‘ಕ್ರಿಮಿನಲ್ ಇರಾನಿನ ಆಕ್ರಮಣಶೀಲತೆ’ ಎಂದು ಕಟುವಾಗಿ ಖಂಡಿಸಿದ್ದಾರೆ.
ಕುವೈತ್ ಅಧಿಕಾರಿಗಳು ಈ ದಾಳಿಯನ್ನು ಇತ್ತೀಚಿನ ಪ್ರಾದೇಶಿಕ ಉದ್ವಿಗ್ನತೆಯ ಭಾಗವೆಂದು ಹೇಳಿದ್ದಾರೆ. ಫೆಬ್ರವರಿ ಅಂತ್ಯದಿಂದ ಬೇರೆ ಬೇರೆ ಗಲ್ಫ್ ರಾಷ್ಟ್ರಗಳಲ್ಲಿ, ನಾಗರಿಕ ಮತ್ತು ಮಿಲಿಟರಿ ತಾಣಗಳ ಮೇಲೆ ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಅಮೆರಿಕದ ಮಿಲಿಟರಿ ಸ್ವತ್ತುಗಳು ಇರುವ ಸ್ಥಳಗಳು ವಿಶೇಷವಾಗಿ ಗುರಿಯಾಗುತ್ತಿವೆ. ಕ್ವೆಶ್ಮ್ ದ್ವೀಪದಲ್ಲಿನ ಟ್ಯಾಂಕರ್ ಮತ್ತು ಸಂವಹನ ಸೌಲಭ್ಯಗಳ ಮೇಲೆ ನಡೆದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ ಕಠಿಣ ನಿಲುವು ತೆಗೆದುಕೊಂಡಿದ್ದು, ಇದರಿಂದ ಇಬ್ಬರ ನಡುವಿನ ಹಗೆತನ ಇನ್ನಷ್ಟು ಉಲ್ಬಣವಾಗಿದೆ.
اللحظات الأولى للاعتداء الإيراني الغاشم من قبل المسيرات الذي تعرض له مبنى الركاب T1 في مطار الكويت الدولي بتاريخ 3 يونيو 2026 وتسبب بخسائر بالأرواح وإصابات بشرية بليغة وأضرار مادية جسيمة
The first moments following the brutal Iranian drone attack on Terminal 1 (T1) at Kuwait… pic.twitter.com/eTzQoVXB4K
— الطيران المدني (@Kuwait_DGCA) June 3, 2026
ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗು ಮಾರ್ಗಗಳನ್ನು ಸುರಕ್ಷಿತಗೊಳಿಸಲು ಪ್ರಯತ್ನಗಳು ನಡೆದರೂ, ಆಯಕಟ್ಟಿನ ಯುದ್ಧ ವಿರಾಮ ಜಾರಿಯಲ್ಲಿದ್ದರೂ, ಅಲ್ಲಿ ಅಲ್ಲಿ ಇಂತಹ ದಾಳಿಗಳು ಮುಂದುವರಿಯುತ್ತಿವೆ. ಈ ಪ್ರಸ್ತುತ ದಾಳಿ ಗಲ್ಫ್ ಪ್ರದೇಶದ ಭದ್ರತೆ ಕುರಿತ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕುವೈತ್ ಸರ್ಕಾರ, ಅಂತಾರಾಷ್ಟ್ರೀಯ ಸಮುದಾಯದ ಸಹಕಾರದಿಂದ, ಈ ಘಟನೆಗೆ ಸಂಬಂಧಿಸಿದ ತನಿಖೆಯನ್ನು ಮುಂದುವರೆಸುತ್ತಿದೆ. ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುವಂತೆ, ವಿಮಾನ ನಿಲ್ದಾಣಗಳ ಮೇಲೆ ಡ್ರೋನ್ ದಾಳಿಗಳನ್ನು ತಡೆಯಲು ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆ ಯೋಜನೆ ಮಾಡುತ್ತಿದೆ.
ಈ ಘಟನೆಯಲ್ಲಿ ಬಲಿಯಾದವರ ಕುಟುಂಬಗಳಿಗೆ ಪರಿಹಾರ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಮಾನಸಿಕ ಬೆಂಬಲ ಒದಗಿಸುವುವುದು ಕೂಡ ಕುವೈತ್ ಹಾಗೂ ಭಾರತದ ಅಧಿಕಾರಿಗಳ ಪ್ರಮುಖ ಆದ್ಯತೆಯಾಗಿದೆ. ಈ ದಾಳಿ, ಗಲ್ಫ್ ಪ್ರದೇಶದ ಜನರಿಗೆ ಮಾತ್ರವಲ್ಲ, ವಿಶ್ವದ ಪ್ರಯಾಣಿಕರಿಗೆ ಕೂಡ ಎಚ್ಚರಿಕೆಯ ಗಂಟೆಯಾಗಿದೆ. ಶಾಂತಿ, ಸಂವಾದ ಮತ್ತು ಪ್ರಾದೇಶಿಕ ಸಹಕಾರದ ಅಗತ್ಯವನ್ನು ಇದು ಮತ್ತೆ ಎತ್ತಿಹಿಡಿದಿದೆ.
Jun 04, 2026 11:46 AM IST













