Last Updated:
Dr. Chirag Patel: ಛೇ ಇವನೆಂತ ವೈದ್ಯ, ವೈದ್ಯಕೀಯ ವೃತ್ತಿ ಮರ್ಯಾದೆ ಮರೆತ ಲಂಡನ್ ವೈದ್ಯ; ಚಿಕಿತ್ಸೆಗೆಂದು ಬಂದವಳಿಗೆ ಮಾತ್ರೆ ಕೊಟ್ಟು ಲೈಂಗಿಕ ಸಂಬಂಧ ಹೊಂದಿದ್ದ ಭಾರತೀಯ ಮೂಲದ ಡಾಕ್ಟರ್ ಸಸ್ಪೆಂಡ್
ಲಂಡನ್ (ಯುನೈಟೆಡ್ ಕಿಂಗ್ಡಮ್): ಇಡೀ ಜಗತ್ತು ವೈದ್ಯರನ್ನು (Doctor) ದೇವರಿಗೆ ಸಮ ಎಂದು ನಂಬುತ್ತದೆ. ಆದರೆ, ಇಂತಹ ಪವಿತ್ರ, ನಂಬಿಕೆಯ ವೃತ್ತಿಗೆ ಮಸಿ ಬಳಿಯುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಹೌದು, ಯುನೈಟೆಡ್ ಕಿಂಗ್ಡಮ್ನಲ್ಲಿ (United Kingdom) ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ನರಶಸ್ತ್ರಚಿಕಿತ್ಸಕ (Neurosurgeon) ಡಾ. ಚಿರಾಗ್ ಪಟೇಲ್ (Dr. Chirag Patel) ಅವರು ತಾವೇ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮಾಡಿದ ಮಹಿಳಾ ರೋಗಿಯೊಂದಿಗೆ ಲೈಂಗಿಕ ಸಂಬಂಧ (Sexual Relationship) ಇಟ್ಟುಕೊಂಡಿದ್ದಲ್ಲದೆ, ಮಾರ್ಫಿನ್, ಡಯಾಜೆಪಮ್‌ನಂತಹ ತೀವ್ರ ವ್ಯಸನಕಾರಿ ಔಷಧಗಳನ್ನು ಅಕ್ರಮವಾಗಿ ಶಿಫಾರಸು ಮಾಡಿ ವೈದ್ಯಕೀಯ ಜಗತ್ತನ್ನೇ ಬೆಚ್ಚಿಬೀಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ಭಾರತೀಯ ಮೂಲದ ಡಾ. ಚಿರಾಗ್ ಪಟೇಲ್ ಅವರು ಕಾರ್ಡಿಫ್‌ನ ಪ್ರಸಿದ್ಧ ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ವೇಲ್ಸ್ ಆಸ್ಪತ್ರೆಯಲ್ಲಿ ಹಿರಿಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. 2019 ರಲ್ಲಿ ಅವರು ಮಹಿಳೆಯೊಬ್ಬರಿಗೆ ಜಟಿಲವಾದ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ನಂತರ ವೈದ್ಯ-ರೋಗಿಯ ನಡುವಿನ ವೃತ್ತಿಪರ ಸಂಬಂಧವು ದೈಹಿಕ ಮತ್ತು ಲೈಂಗಿಕ ಸಂಬಂಧವಾಗಿ ಬದಲಾಯಿತು. ಆದರೆ, ವೃತ್ತಿಪರ ನಿಯಮಾವಳಿಗಳ ಪ್ರಕಾರ, ವೈದ್ಯರು ತಮ್ಮ ರೋಗಿಗಳೊಂದಿಗೆ ಇಂತಹ ಸಂಬಂಧವನ್ನು ಹೊಂದುವುದು ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿದೆ.
ಇದಕ್ಕಿಂತಲೂ ಗಂಭೀರವಾದ ವಿಷಯವೆಂದರೆ, ಡಾ. ಪಟೇಲ್ ಅವರು ಆ ಮಹಿಳೆಗೆ ಮಾರ್ಫಿನ್ ಸಲ್ಫೇಟ್ ಮತ್ತು ಡಯಾಜೆಪಮ್ ನಂತಹ ಅತ್ಯಂತ ತೀವ್ರವಾದ, ವ್ಯಸನಕಾರಿ ನೋವು ನಿವಾರಕಗಳನ್ನು ಹಾಗೂ ಸ್ನಾಯು ಸಡಿಲಗೊಳಿಸುವ ಔಷಧಗಳನ್ನು ಅಕ್ರಮವಾಗಿ ಶಿಫಾರಸು ಮಾಡುತ್ತಿದ್ದರು. ಈ ಔಷಧಗಳನ್ನು ಅಧಿಕೃತ ವೈದ್ಯಕೀಯ ದಾಖಲೆಗಳಲ್ಲಿ ನಮೂದಿಸುತ್ತಿರಲಿಲ್ಲ ಮತ್ತು ಆಕೆಯ ಕೌಟುಂಬಿಕ ವೈದ್ಯರಿಗೂ ಇದರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಇದು ಜನವರಿ 2023 ರವರೆಗೆ ಮುಂದುವರಿದಿತ್ತು ಎನ್ನಲಾಗಿದೆ.
ಭಾರತೀಯ ಮೂಲದ ಡಾ. ಚಿರಾಗ್ ಪಟೇಲ್
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ, ವಿಚಾರಣೆಯ ಸಂದರ್ಭದಲ್ಲಿ ಡಾ. ಚಿರಾಗ್ ಪಟೇಲ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡರಾದರೂ, ಅದಕ್ಕೆ ವಿಭಿನ್ನ ಕಾರಣವನ್ನು ನೀಡಿದರು. ತಾವು ಆ ಮಹಿಳೆಯೊಂದಿಗೆ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದಾಗಿ, ಆದರೆ ಆಕೆ ತಮ್ಮ ರಹಸ್ಯ ಸಂಬಂಧವನ್ನು ಸಾರ್ವಜನಿಕವಾಗಿ ಬಯಲು ಮಾಡುವುದಾಗಿ ಹೆದರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾಗಿ ತಿಳಿಸಿದರು. ಇನ್ನೂ, ಈ ಬ್ಲ್ಯಾಕ್‌ಮೇಲ್‌ಗೆ ಹೆದರಿ ಆಕೆಗೆ ನಿರಂತರವಾಗಿ ಔಷಧಗಳನ್ನು ಒದಗಿಸಬೇಕಾಯಿತು. ಜೊತೆಗೆ ವಿಷಯವನ್ನು ಮುಚ್ಚಿಡಲು ಆಕೆ ತನ್ನ ಬಳಿ 11 ಸಾವಿರ ಪೌಂಡ್‌ಗೆ ಬೇಡಿಕೆ ಇಟ್ಟಳು. ಆದರೆ, ನಾನು 5,000 ಪೌಂಡ್ (ಅಂದಾಜು 5 ಲಕ್ಷ 30 ಸಾವಿರ ಭಾರತೀಯ ರೂಪಾಯಿ) ಹಣವನ್ನು ನೀಡಲು ಮುಂದಾಗಿದ್ದಾಗಿಯೂ ಅವರು ನ್ಯಾಯಮಂಡಳಿಯ ಮುಂದೆ ಒಪ್ಪಿಕೊಂಡಿದ್ದಾರೆ.
ಏತನ್ಮಧ್ಯೆ, ಡಾ ಚಿರಾಗ್ ಪಟೇಲ್ ಅವರು ವೇಲ್ಸ್ ಪ್ರಾಂತ್ಯದಲ್ಲೇ ಜಟಿಲವಾದ ನರಶಸ್ತ್ರಚಿಕಿತ್ಸೆಗಳನ್ನು ಮಾಡುವ ಅತ್ಯಂತ ನುರಿತ ಮತ್ತು ವಿರಳ ತಜ್ಞರಲ್ಲಿ ಪ್ರಮುಖರು ಎನ್ನಲಾಗಿದೆ.













