ಉತ್ತರ ಪ್ರದೇಶದ ಕಾನ್ಪೂರ್ನ ರೋಹಿತ್ ವೀರೇಂದ್ರಸಿಂಹ ಶಕ್ಯಾ ಎಂಬ ಯುವಕನನ್ನು ಗುಜರಾತ್ ಸೈಬರ್ ಕ್ರೈಂ ಸೆಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿ ಎಪಿಕೆ ಫೈಲ್ಗಳನ್ನು ತಯಾರಿಸಿ, ಜಾರ್ಖಂಡ್, ಹರಿಯಾಣ, ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಸೈಬರ್ ಅಪರಾಧಿಗಳಿಗೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾಗಿ ನ್ಯೂಸ್18 ವರದಿ ಮಾಡಿದೆ.
10ನೇ ತರಗತಿ ಪಾಸ್ ಆಗಿದ್ದ ಆರೋಪಿ ಆ ಬಳಿಕ ಪಿಯುಗೆ ಸೇರಿ ಕಾಲೇಜು ಬಿಟ್ಟಿದ್ದನಂತೆ. ಕೇವಲ 16ನೇ ವಯಸ್ಸಿಗೆ ಕೋಡಿಂಗ್ ಕಲಿತುಕೊಂಡು ಎಕ್ಸ್ಪರ್ಟ್ ತರ ಕೆಲಸ ಮಾಡುತ್ತಿದ್ದನಂತೆ. ಜೊತೆಗೆ ಎಐ ಟೂಲ್ಸ್ ಬಳಕೆ ಮಾಡಿಕೊಂಡು, ಟೆಲಿಗ್ರಾಮ್ ಮೂಲಕ ವಿವಿಧ ಬ್ಯಾಂಕ್, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನಕಲಿ ಆ್ಯಪ್ಗಳನ್ನು ತಯಾರಿಸುತ್ತಿದ್ದನಂತೆ. ಈ ಆ್ಯಪ್ಗಳನ್ನು ಸಬ್ಸ್ಕ್ರಿಪ್ಷನ್ ಮೂಲಕ ತಿಂಗಳಿಗೆ 15 ಸಾವಿರದಂತೆ ಸೈಬರ್ ಖದೀಮರಿಗೆ ನೀಡುತ್ತಿದ್ದನಂತೆ.
ಪೊಲೀಸರ ತನಿಖೆಯಲ್ಲಿ ಹಲವು ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿದ್ದು, ಆರೋಪಿ ಎರಡು ರೀತಿಯ ಆ್ಯಪ್ಗಳನ್ನು ತಯಾರಿಸುತ್ತಿದ್ದನಂತೆ. ಮೊದಲು ‘ವಿಕ್ಟಿಮ್ ಆ್ಯಪ್’, ಇದನ್ನು ಕಸ್ಟಮರ್ ಗಳು ತಮ್ಮ ಮೊಬೈಲ್ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುತ್ತಿದ್ದರು. ಎರಡನೇ ಆ್ಯಪ್ ‘ಅಡ್ಮಿನ್ ಆ್ಯಪ್’, ಇದನ್ನು ಕಸ್ಟಮರ್ ಗಳ ಒಟಿಪಿ, ಬ್ಯಾಂಕಿಂಗ್ ವಿವರ ಸೇರಿದಂತೆ ಇತರ ಮಾಹಿತಿಯನ್ನು ರಿಯಲ್ ಟೈಮ್ ನಲ್ಲಿ ಆ್ಯಕ್ಸಿಸ್ ಮಾಡಲು ಅವಕಾಶ ನೀಡಿತ್ತು.
ಭಾರತದ ಪ್ರಮುಖ ಬ್ಯಾಂಕ್ ಗಳಾಗಿರುವ ಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬಿಗ್ ಬಾಸ್ಕೆಟ್, ಅಮೆಜಾನ್ ಎಕ್ಸ್ ಪ್ರೆಸ್, ಆಧಾರ್ ಸೇವೆ, ಪಿಎಂ ಕಿಸಾನ್, ಆರ್ಟಿಒ ಸೇರಿದಂತೆ ಸಾಲ ನೀಡುವ ಹಲವು ಸಂಸ್ಥೆಗಳ ನಕಲಿ ಆ್ಯಪ್ಗಳನ್ನು ಸೃಷ್ಟಿ ಮಾಡುತ್ತಿದ್ದನಂತೆ.
ಮೇ ತಿಂಗಳಿನಲ್ಲಿ ಸೂರತ್ ಮೂಲಕ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಒಳಗಾಗಿ 5 ಲಕ್ಷ ರೂಪಾಯಿ ಕಳೆದುಕೊಂಡಿದ್ದರಂತೆ. ವಾಟ್ಸಾಪ್ ಮೂಲಕ ತಮ್ಮ ಮೊಬೈಲ್ ಬಂದ ಸಂದೇಶ ಕ್ಲಿಕ್ ಮಾಡುತ್ತಿದ್ದಂತೆ ಅವರ ಬ್ಯಾಂಕ್ ಅಕೌಂಟ್ ನಿಂದ ಹಂತ ಹಂತವಾಗಿ ಹಣ ಕಟ್ ಆಗುತ್ತಿತ್ತಂತೆ. ಕೂಡಲೇ ಆತ ಪೊಲೀಸರಿಗೆ ದೂರು ನೀಡಿದ್ದ.
🚨 An 18-year-old Class 11 dropout from Surat, Rohit Virendrasinh Shakya, has emerged as the mastermind behind a nationwide cyber fraud network that used AI and Telegram to create fake banking and mobile applications, helping cybercriminals siphon off over Rs 64 crore from… pic.twitter.com/fjjkhHmZfm
— Indian Tech & Infra (@IndianTechGuide) July 22, 2026
ಮೇ ತಿಂಗಳ 15 ಮತ್ತು 18ರ ನಡುವೆ ಸಂತ್ರಸ್ತ ವ್ಯಕ್ತಿಗೆ ವಾಟ್ಸಾಪ್ ಗೆ ‘ಪಿಎನ್ಬಿ ಒನ್.ಎಪಿಕೆ’ ಎಂಬ ನಕಲಿ ಫೈಲ್ ಬಂದಿತ್ತಂತೆ. ಇದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಆ್ಯಪ್ ಎಂದು ತಿಳಿದುಕೊಂಡಿದ್ದ ಸಂತ್ರಸ್ತ ವ್ಯಕ್ತಿ, ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡಿದ್ದರಂತೆ. ಕೂಡಲೇ ಸೈಬರ್ ಖದೀಮರು ಬ್ಯಾಂಕಿಂಗ್ ವಿವರಗಳನ್ನು ಪಡೆದುಕೊಂಡು, ಆತನ ಬ್ಯಾಂಕ್ ನಿಂದ ಯೂನಿಯನ್ ಬ್ಯಾಂಕ್ ಖಾತೆಗೆ ಐದು ಲಕ್ಷ ರೂಪಾಯಿ ಬದಲಿಸಿಕೊಂಡಿದ್ದರಂತೆ. ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಇದು ಸಣ್ಣ ಮೋಸ ಅಲ್ಲ, ಇದರ ಹಿಂದೆ ಒಂದು ದೊಡ್ಡ ಜಾಲ ಇರೋದು ತಿಳಿದು ಬಂದಿತ್ತು.
ಫೋರೆನ್ಸಿಕ್ ಪರಿಶೀಲನೆಯನ್ನು ಈತ 121ಕ್ಕೂ ಹೆಚ್ಚು ಅಪಾಯಕಾರಿ ಎಪಿಕೆ ಫೈಲ್ಗಳನ್ನು ಸಿದ್ಧಪಡಿಸಿದ್ದನಂತೆ. ದೇಶದಾದ್ಯಂತ 21,672 ಮೊಬೈಲ್ಗಳಲ್ಲಿ ಇವುಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳಲಾಗಿತ್ತಂತೆ. ಅದರಂತೆ 2,928 ಮೊಬೈಲ್ಗಳು ಸಂಪೂರ್ಣವಾಗಿ ಹ್ಯಾಕ್ ಆಗಿ, ಸುಮಾರು 64.38 ಕೋಟಿ ರೂಪಾಯಿ ಮೌಲ್ಯದ 54,094 ಹಣ ವರ್ಗಾವಣೆಗಳು ನಡೆದಿರೋದು ತಿಳಿದು ಬಂದಿದೆ. ಈ ನಕಲಿ ಆ್ಯಪ್ಗಳ ಮೂಲಕ ಸೈಬರ್ ಖದೀಮರಿಗೆ ಈಗ ನೆರವು ನೀಡುತ್ತಿದ್ದನಂತೆ. ಈತನ ಸಾಫ್ಟ್ವೇರ್ ಅನ್ನು ದೇಶದಾದ್ಯಂತ ಎಷ್ಟು ಮಂದಿ ಸೈಬರ್ ಖದೀಮರು ಬಳಕೆ ಮಾಡುತ್ತಿದ್ದಾರೆ ಅಂತ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.













