Last Updated:
ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಭೀಕರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ದೇವರ ದರ್ಶನಕ್ಕೆಂದು ಕರೆದೊಯ್ದು ಗಂಡನ ಕಥೆಯನ್ನೇ ಮುಗಿಸಿದ್ದಾಳೆ. ಮಗುವಿನೆದುರೇ ಗಂಡನನ್ನು ಹತ್ಯೆ ಮಾಡಲಾಗಿದೆ.
ದೇವರ ದರ್ಶನಕ್ಕೆಂದು (Temple Visit) ಕರೆದುಕೊಂಡು ಹೋಗಿ ತನ್ನ ಗಂಡನಿಗೆ ಹೆಂಡತಿ ಮುಹೂರ್ತ ಇಟ್ಟಿದ್ದಾಳೆ. ಆಂಧ್ರಪ್ರದೇಶದ (Andhra Pradesh) ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಮಂಡಲದಲ್ಲಿ ಈ ದುರಂತ ಘಟನೆ ನಡೆದಿದೆ. ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಹಂತಕರ ಕೈಗೆ ಒಪ್ಪಿಸುವ ಘೋರ ಕೃತ್ಯವನ್ನು ಪತ್ನಿ ನಡೆಸಿದ್ದಾಳೆ. ಪ್ರಿಯಕರನೊಂದಿಗೆ ಸೇರಿ ಗಂಡನ ಕಥೆಯನ್ನೇ ಮುಗಿಸಿದ್ದಾಳೆ. ಸ್ವಂತ ಮಗು ಮುಂದಯೇ ತಾಳಿ ಕಟ್ಟಿದ ಗಂಡನನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ತಮಿಳುನಾಡಿನ ಸುಳಗಿರಿ ನಿವಾಸಿ ರಮೇಶ್ ಬಲಿಯಾದ ಗಂಡ. ಈ ಪ್ರಕರಣದಲ್ಲಿ ರಮೇಶ್ ಪತ್ನಿ ಹಾಸಿನಿ, ಆಕೆಯ ಪ್ರಿಯಕರ ಯುಗಂಧರ್ ಸೇರಿದಂತೆ ನಾಲ್ವರು ಶಂಕಿತರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಶಾಂತಿಪುರಂ ಮಂಡಲದ ಬೋಯಿನಪಲ್ಲಿ ನಿವಾಸಿ ಹಾಸಿನಿಗೆ ಎರಡು ವರ್ಷಗಳ ಹಿಂದೆ ರಮೇಶ್ ಜೊತೆ ಮದುವೆಯಾಗಿತ್ತು. ರಮೇಶ್ ಹೊಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಒಂದು ವರ್ಷದ ಹೆಣ್ಣು ಮಗಳಿದ್ದಾಳೆ. ರಮೇಶ್ ತನ್ನ ಹೆಂಡತಿ ಮತ್ತು ಮಗುವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಹಾಸಿನಿ ಮದುವೆಯ ನಂತರವೂ ತನ್ನ ಬಾಲ್ಯದ ಗೆಳೆಯ ಯುಗಂಧರ್ ಜೊತೆ ಸಂಬಂಧವನ್ನು ಮುಂದುವರೆಸುತ್ತಿದ್ದಳು ಎಂದು ಬಯಲಾಗಿದೆ. ಇತ್ತೀಚೆಗೆ ತಾಯಿಯ ಮನೆಗೆ ಬಂದಿದ್ದ ಹಾಸಿನಿ, ಗಂಡನನ್ನು ಶಾಶ್ವತವಾಗಿ ತೆಗೆದುಹಾಕಲು ಪ್ರಿಯಕರನೊಂದಿಗೆ ಸೇರಿ ಪ್ಲಾನ್ ಮಾಡಿದ್ದಳು ಎಂದು ತಿಳಿದುಬಂದಿದೆ.
ಪ್ಲಾನ್ ಪ್ರಕಾರ ಹಾಸಿನಿ ತನ್ನ ಗಂಡ ರಮೇಶ್ ರನ್ನು ಮಲ್ಲಪ್ಪ ಬೆಟ್ಟದ ಮೇಲಿರುವ ಮಲ್ಲೇಶ್ವರ ಸ್ವಾಮಿ ದರ್ಶನಕ್ಕೆ ಹೋಗೋಣ ಎಂದು ಬೈಕ್‌ನಲ್ಲಿ ಕರೆದೊಯ್ದಿದ್ದಾಳೆ. ಜೊತೆಗೆ ಒಂದು ವರ್ಷದ ಮಗುವೂ ಇತ್ತು. ಬೈಕ್‌ನಲ್ಲಿ ಹೋಗುವಾಗ ಹಾಸಿನಿ ಕಾಲಕಾಲಕ್ಕೆ ಯುಗಂಧರ್‌ಗೆ ತಾವಿರುವ ಸ್ಥಳದ ಮಾಹಿತಿಯನ್ನು ಫೋನ್ ಮೂಲಕ ನೀಡುತ್ತಿದ್ದಳು.
ಮಲ್ಲಪ್ಪ ಬೆಟ್ಟವನ್ನು ಹತ್ತುವಾಗ ಮೂರನೇ ತಿರುವಿನಲ್ಲಿ ಹಾಸಿನಿ ಉದ್ದೇಶಪೂರ್ವಕವಾಗಿ ತನ್ನ ಪರ್ಸ್ ಅನ್ನು ಕೆಳಗೆ ಬೀಳಿಸಿದ್ದಾಳೆ. ಪರ್ಸ್ ಎತ್ತಿಕೊಳ್ಳಲು ರಮೇಶ್ ಬೈಕ್ ನಿಲ್ಲಿಸಿ ಹೋದಾಗ, ಹೊಂಚು ಹಾಕಿ ಕುಳಿತಿದ್ದ ಯುಗಂಧರ್ ಮತ್ತು ಅವನ ಸಹಚರರು ರಮೇಶ್ ನನ್ನು ಬಲವಂತವಾಗಿ ಹಿಡಿದು ಪಕ್ಕದ ಅರಣ್ಯ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ.
ಅಲ್ಲಿ ಒಂದು ವರ್ಷದ ಮಗುವಿನ ಮುಂದೆಯೇ ರಮೇಶ್ ನನ್ನು ಭೀಕರವಾಗಿ ಹತ್ಯೆ ಮಾಡಿ ಶವವನ್ನು ಕಾಡಿನಲ್ಲೇ ಎಸೆದಿದ್ದಾರೆ ಎನ್ನಲಾಗಿದೆ. ನಂತರ ಹಾಸಿನಿ ತನ್ನ ಮಗುವಿನೊಂದಿಗೆ ರಮೇಶ್ ಬೈಕ್‌ನಲ್ಲೇ ಯುಗಂಧರ್ ಜೊತೆ ರೈಲ್ವೆ ನಿಲ್ದಾಣ ತಲುಪಿ ಪರಾರಿಯಾಗಿದ್ದಾಳೆ.
ರಮೇಶ್ ಕುಟುಂಬ ಮರಳಿ ಬಾರದಿದ್ದಾಗ ಹಾಸಿನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬೆಟ್ಟದ ದಾರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಹಾಸಿನಿ ಗಂಡನೊಂದಿಗೆ ಹೋಗುತ್ತಿರುವುದು, ನಂತರ ಬೇರೆ ಯುವಕರೊಂದಿಗೆ ವಾಪಸ್ ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಾಂತ್ರಿಕ ಪುರಾವೆಗಳು ಮತ್ತು ಮೊಬೈಲ್ ಲೊಕೇಶನ್ ಮೂಲಕ ಪೊಲೀಸರು ತನಿಖೆ ನಡೆಸಿ ಶವವನ್ನು ಪತ್ತೆ ಮಾಡಿದ್ದಾರೆ. ಹಾಸಿನಿ ಮತ್ತು ಯುಗಂಧರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಕುಪ್ಪಂ ಡಿಎಸ್‌ಪಿ ಪಾರ್ಥಸಾರಥಿ ಅವರ ಮೇಲ್ವಿಚಾರಣೆಯಲ್ಲಿ ರಲ್ಲಾ ಬೂದುಗುರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ಗಂಡನನ್ನು ಒಂದು ವರ್ಷದ ಮಗುವಿನ ಮುಂದೆಯೇ ಹತ್ಯೆ ಮಾಡಿಸಿದ ತಾಯಿಯ ಕ್ರೌರ್ಯವನ್ನು ಜನರು ಖಂಡಿಸುತ್ತಿದ್ದಾರೆ. ಇಂತಹ ಅಪರಾಧಗಳಲ್ಲಿ ಆಧುನಿಕ ತಂತ್ರಜ್ಞಾನವು ಪೊಲೀಸರಿಗೆ ದೊಡ್ಡ ಸಹಾಯವಾಗುತ್ತಿದೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಮೊಬೈಲ್ ದಾಖಲೆಗಳು ಅಪರಾಧಿಗಳನ್ನು ಬೇಗ ಪತ್ತೆಹಚ್ಚುತ್ತವೆ ಎಂಬುದನ್ನು ಈ ಕೇಸ್ ಮತ್ತೊಮ್ಮೆ ಸಾಬೀತುಪಡಿಸಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಘಟನೆಯು ಕುಟುಂಬಗಳ ನಡುವಿನ ಸಂಬಂಧಗಳಲ್ಲಿ ನಂಬಿಕೆಯ ಮಹತ್ವವನ್ನು ಎತ್ತಿ ತೋರಿಸುತ್ತಿದೆ.














