Last Updated:
ಆಗಸ್ಟ್ 3ರಂದು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ವಿಜಯ್ ಕಾವೇರಿ ಜಲ ವಿವಾದ, ಮೇಕೆದಾಟು ಯೋಜನೆ ಕುರಿತು ಸಭೆ ನಡೆಸಲಿದ್ದಾರೆ.
ಬೆಂಗಳೂರು: ಆಗಸ್ಟ್ 3ರಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ತಮಿಳುನಾಡು ಸಿಎಂ ವಿಜಯ್ (Joseph Vijay) ಮಹತ್ವದ ಸಭೆ ನಡೆಸಲಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಸಭೆಯಲ್ಲಿ ತಮಿಳುನಾಡು ಸಿಎಂ (Tamil nadu CM) ವಿಜಯ್ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ತಮಿಳುನಾಡು ಸಿಎಂ ಕಚೇರಿ ಮೂಲಗಳಿಂದ ಖಚಿತವಾಗಿದೆ. ಆಗಸ್ಟ್ 3ರ ಮಧ್ಯಾಹ್ನ 12 ಗಂಟೆಗೆ ಸಭೆ ನಿಗದಿಯಾಗಿದೆ. ಕಾವೇರಿ ಜಲ ವಿವಾದ, ಮೇಕೆದಾಟು ಯೋಜನೆ (Cauvery Water and Mekedatu Dam Project) ಸೇರಿ ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ಆಗಲಿದೆ ಎನ್ನಲಾಗಿದೆ.
ಕಾವೇರಿ ನೀರು ಬಿಡುವ ವಿಚಾರದ ಬಗ್ಗೆ ಉಭಯ ಸಿಎಂಗಳು ಚರ್ಚೆ ಮಾಡಲಿದ್ದಾರೆ. ಆದರೆ ಈಗ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಕರ್ನಾಟಕ ಪ್ರವಾಸಕ್ಕೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ. ಕರ್ನಾಟಕಕ್ಕೆ ಹೋಗದಂತೆಯೂ ಸಿಎಂ ವಿಜಯ್ಗೆ ಒತ್ತಡ ಹೇರಿದ್ದಾರೆ ಎನ್ನಲಾಗಿತ್ತು.
ಇನ್ನೊಂದು ಕಡೆ ಕರುನಾಡಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ರಾಜ್ಯಕ್ಕೆ ಬರೋದು ಡೌಟ್ ಎನ್ನಲಾಗಿತ್ತು. ಆಗಸ್ಟ್ 3 ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿರುವ ಮೇಕೆದಾಟು ಯೋಜನೆ ಸಂಬಂಧ ಸಭೆಗೆ ವರ್ಚುವಲ್ ಮೂಲಕ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು.
ಸೋಮವಾರ ತಮಿಳುನಾಡು ಕೃಷಿ ಸಚಿವ ಆರ್. ವಿನೋದ್ ಅವರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ರೈತರು, ಎರಡು ರಾಜ್ಯಗಳ ನಡುವಿನ ಈ ಮಾತುಕತೆಯನ್ನು ರದ್ದುಗೊಳಿಸುವಂತೆ ಕೋರಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಇದು ಶಿಷ್ಟಾಚಾರವನ್ನು ಬೈಪಾಸ್ ಮಾಡಿದಂತೆ, ಅಲ್ಲದೇ ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿರುತ್ತದೆ ಎಂದು ರೈತ ಪ್ರತಿನಿಧಿಗಳು ಹೇಳಿದ್ದಾರಂತೆ.
CWRC ಸೂಚನೆಯಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಬೆಂಗಳೂರಿಗೆ ಸಂಕಷ್ಟ ಉಂಟಾಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರೋ ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳಾ, ಸದ್ಯಕ್ಕೆ ಕಾವೇರಿ ನೀರಿನ ಸಮಸ್ಯೆಯಿಲ್ಲ. ಟ್ಯಾಂಕರ್, ಬೋರ್ವೆಲ್ಗಳ ಮೂಲಕ ನೀರು ಸಪ್ಲೈ ಮಾಡ್ತೀವಿ. ಯಾವುದೇ ಸಮಸ್ಯೆಯಿಲ್ಲದಂತೆ ನೀರಿನ ಪೂರೈಕೆ ಆಗ್ತಿದೆ ಎಂದಿದ್ದಾರೆ.
ಆದರೆ CWRC ಸೂಚನೆಯಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ರೆ ಬೆಂಗಳೂರಿಗೆ ಸಂಕಷ್ಟ ಉಂಟಾಗಲಿದೆ. ಕಾವೇರಿ ನದಿಯಿಂದ ನಿತ್ಯ ಬೆಂಗಳೂರಿಗೆ 2225 MLD ನೀರು ಪೂರೈಕೆ ಆಗ್ತಿದೆ. ಈ ವರ್ಷ ಅಂತ್ಯದವರೆಗೆ ಬೆಂಗಳೂರಿಗೆ 10 ಟಿಎಂಸಿ ನೀರು ಅಗತ್ಯ ಇದೆ. ಇದರ ಜೊತೆಗೆ ಕಾವೇರಿ ನದಿಯಿಂದ ಮಂಡ್ಯ, ಮೈಸೂರು ಭಾಗಕ್ಕೂ ನೀರು ಸಪ್ಲೈ ಆಗ್ಬೇಕು. ಹೀಗಾಗಿ ತಮಿಳುನಾಡಿಗೆ ನೀರು ಹರಿದರೆ ಬೆಂಗಳೂರಿಗೆ ಜಲ ಗಂಡಾಂತರ ಗ್ಯಾರಂಟಿ ಅಂತ ತಜ್ಞರು ಹೇಳಿದ್ದಾರೆ. ನೀರು ಕೊರತೆಯಾದರೆ ವಾರಕ್ಕೆ ಒಂದು ದಿನ ಮಾತ್ರ ಬೆಂಗಳೂರಿಗೆ ನೀರು ಪೂರೈಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸದಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. (ವರದಿ: ಕಾರ್ತಿಕ್, ನ್ಯೂಸ್18 ಕನ್ನಡ, ಬೆಂಗಳೂರು)
Bangalore [Bangalore],Bangalore,Karnataka














