Last Updated:
Bangladesh: ನೆರೆಯ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದುವೇ, ಅಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಭಾರತೀಯ ಅಧಿಕಾರಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ಢಾಕಾ (ಬಾಂಗ್ಲಾದೇಶ); ನೆರೆಯ ಬಾಂಗ್ಲಾದೇಶದ (Bangladesh) ರಾಜಧಾನಿ ಢಾಕಾದಿಂದ (Dhaka) ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದುವೇ, ಅಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ (Indian High Commission Office) ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಭಾರತೀಯ ಅಧಿಕಾರಿಯೊಬ್ಬರು (Indian Officer) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಕಚೇರಿ ಆವರಣದಲ್ಲೇ ಅವರ ಮೃತದೇಹ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ಅಲರ್ಟ್ ಆಗಿದೆ. ಆ ಕುರಿತ ವರದಿ ಇಲ್ಲಿದೆ.
ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಆವರಣದಲ್ಲಿ ಭಾರತೀಯ ಪ್ರೋಟೋಕಾಲ್ ಅಧಿಕಾರಿಯ ಮೃತದೇಹ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಅವರ ಮೃತದೇಹ ಡೇಟಾ ಸೆಂಟರ್ನ ಸ್ನಾನಗೃಹದ ಹೊರಗೆ ಪತ್ತೆಯಾಗಿದೆ ಎಂದು ವರದಿಯಾಗಿದೆ. ಘಟನೆಯ ನಂತರ, ಸ್ಥಳೀಯ ಪೊಲೀಸ್ ಆಡಳಿತ ಮತ್ತು ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಆ ಅಧಿಕಾರಿಯನ್ನು ಭಾರತದ ಚಂಡೀಗಢ ನಿವಾಸಿ 38 ವರ್ಷದ ನರೇನ್ ಧರ್ ಎಂದು ಗುರುತಿಸಲಾಗಿದೆ. ನರೇನ್ ಧರ್ ಬಾಂಗ್ಲಾದೇಶದ ಭಾರತೀಯ ಮಿಷನ್ನಲ್ಲಿ ಸಹಾಯಕ ಪ್ರೋಟೋಕಾಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನೂ, ಚಿತ್ತಗಾಂಗ್ನ ಖುಲ್ಶಿ ಪ್ರದೇಶದ ಜಾಕಿರ್ ಹುಸೇನ್ ರಸ್ತೆಯಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ ಆವರಣದಲ್ಲಿ ಮಂಗಳವಾರ ಅವರ ಮೃತದೇಹ ಪತ್ತೆಯಾಗಿದೆ.
ಏತನ್ಮಧ್ಯೆ, ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅಗತ್ಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (CMCH) ಕಳುಹಿಸಿದ್ದಾರೆ. ಇನ್ನೂ, ಆಸ್ಪತ್ರೆ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ತಸ್ಲೀಮ್ ಉದ್ದೀನ್ ಅವರು, “ನರೇನ್ ಧರ್ ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು. ಆದಾಗ್ಯೂ, ಆರಂಭಿಕ ತನಿಖೆಗಳು ಮತ್ತು ವೈದ್ಯರ ಪ್ರಾಥಮಿಕ ಪರೀಕ್ಷೆಗಳಲ್ಲಿ ಯಾವುದೇ ಗಾಯದ ಲಕ್ಷಣಗಳು ಅಥವಾ ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದಿಲ್ಲ. ಹಾಗಾಗಿ, ಅವರು ಹೃದಯ ಸ್ತಂಭನದಿಂದ ಸಾವನ್ನಪ್ಪಿರಬಹುದು” ಎಂದು ಶಂಕಿಸಿದ್ದಾರೆ.
















