Last Updated:
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಅವ್ರ ರಾಜೀನಾಮೆಯನ್ನ ಅಂಗೀಕರಿಸಿದ್ದೂ ಆಯ್ತು. ಈಗ ಚಂಪತ್ ರಾಯ್, ಘಟನೆ ಬಗ್ಗೆ ಮೌನ ಮುರಿದಿದ್ದಾರೆ.
ರಾಮ ಮಂದಿರ (Ayodhya Ram Mandir) ದೇಣಿಗೆ ಕಳ್ಳತನ ದೇಶಾದ್ಯಂತ ಕಿಚ್ಚೆಬ್ಬಿಸಿದೆ. ಯುಪಿ ಸರ್ಕಾರದ ಮೇಲೆ ಮಾತ್ರವಲ್ಲ, ಬಿಜೆಪಿ ನಾಯಕರ ಮೇಲೂ ಭಕ್ತರು ಗರಂ ಆಗಿದ್ದರು. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ (Ram Janmabhoomi Teertha Kshetra Trust) ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ (Champat Rai) ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೂ ಆಯ್ತು. ಈಗ ಚಂಪತ್ ರಾಯ್, ಘಟನೆ ಬಗ್ಗೆ ಮೌನ ಮುರಿದಿದ್ದಾರೆ.
ಈ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. ಸ್ಥಾನದಿಂದ ಕೆಳಗಿಳಿದ ನಂತರ ವಿಎಚ್ಪಿ ನಾಯಕ ಚಂಪತ್ ರಾಯ್, ಇದೇ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರು ಹೇಳಿಕೆ ನೀಡಿದ್ದು, ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದ್ದು, ಅದು ಮೊದಲು ಪೂರ್ಣಗೊಂಡು, ಪ್ರಾಥಮಿಕ ವರದಿಯಲ್ಲಿ ಏನು ಬರುತ್ತದೆ ಎಂಬುದನ್ನು ತಿಳಿಯಲು ಟ್ರಸ್ಟ್ ಬಯಸಿದ್ದರಿಂದ ಇಲ್ಲಿಯವರೆಗೂ ಏನನ್ನೂ ಪ್ರತಿಕ್ರಿಯಿಸದೆ ಮೌನವಾಗಿದ್ದೆ ಎಂದಿದ್ದಾರೆ.
ದೇಣಿಗೆ ಹಣದ ಎಣಿಕೆ ವೇಳೆ ಅಕ್ರಮಗಳಾಗಿರುವ ಬಗ್ಗೆ ಚರ್ಚೆಯಾಗುತ್ತಿದೆ. ರಾಮನ ಹಣವನ್ನೇ ಕದ್ದಿರುವುದು ಕಳವಳಕಾರಿಯಾಗಿದೆ. ನನ್ನ ಮೇಲೆ ಬರುತ್ತಿರುವ ಆರೋಪಗಳ ಬಗ್ಗೆಯೂ ವಿವರ ಕೊಡುತ್ತೇನೆ. ಎಸ್ಐಟಿ ವರದಿ ಬಂದ್ಮೇಲೆ ಸತ್ಯ ಗೊತ್ತಾಗುತ್ತೆ, ನಂತರ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಯಾವುದೇ ವದಂತಿಗಳನ್ನು ಅಥವಾ ಅಪೂರ್ಣ ಮಾಹಿತಿಯನ್ನು ನಂಬಬೇಡಿ ಮತ್ತು ಅಂತಿಮ ಎಸ್ಐಟಿ ವರದಿಗಾಗಿ ಕಾಯಿರಿ ಎಂದು ಚಂಪತ್ ರಾಯ್ ಮನವಿ ಮಾಡಿದ್ದಾರೆ. ತನಿಖೆ ಪೂರ್ಣಗೊಂಡ ನಂತರ, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಮತ್ತು ಇಡೀ ವಿಷಯದ ಸತ್ಯವನ್ನು ರಾಷ್ಟ್ರಕ್ಕೆ ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.
ಟ್ರಸ್ಟ್ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ಡಾ ಅವರನ್ನು ರಾಮ ಮಂದಿರ ಟ್ರಸ್ಟ್ನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು. ರಾಮ ಮಂದಿರ ಸಂಕೀರ್ಣದ ನೆಲದ ವರದಿಗಳ ಪ್ರಕಾರ, ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ಡಾ ಪ್ರಸ್ತುತ ಅಯೋಧ್ಯಾ ರಾಮ ಮಂದಿರ ಸಂಕೀರ್ಣದಲ್ಲಿದ್ದಾರೆ. ಆದರೆ, ಕಾರ್ಯತಂತ್ರ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ, ಅವರು ನೇರವಾಗಿ ಟ್ರಸ್ಟ್ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಔಪಚಾರಿಕತೆಗಳು ಪೂರ್ಣಗೊಂಡ ನಂತರ ಅವರು ಶೀಘ್ರದಲ್ಲೇ ತಮ್ಮ ಹೊಸ ಕರ್ತವ್ಯಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.













