Last Updated:
2026ರ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಬಗ್ಗು ಬಡಿದಿದೆ. ಈ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಫೈನಲ್ ತಲುಪಿದೆ.
ಜಪಾನ್‌ನಲ್ಲಿ ನಡೆಯುತ್ತಿರುವ 2026 ಏಷ್ಯನ್ ಗೇಮ್ಸ್‌ನ ಎರಡನೇ ಸೆಮಿಫೈನಲ್ ಪಂದ್ಯ ನಿಸ್ಶಿನ್‌ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಿತು. ಭಾರತ ಮಹಿಳಾ ಕ್ರಿಕೆಟ್ ತಂಡ ಬಾಂಗ್ಲಾದೇಶವನ್ನು ಎದುರಿಸಿತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಪಂದ್ಯದಲ್ಲಿ ಸುಲಭವಾಗಿ ಮೇಲುಗೈ ಸಾಧಿಸಿತು. ಬಾಂಗ್ಲಾದೇಶವನ್ನು ದೊಡ್ಡ ಅಂತರದಿಂದ ಸೋಲಿಸಿ ಭಾರತ ಫೈನಲ್‌ಗೆ ತಲುಪಿತು.
ಭಾರತ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಆಯ್ಕೆ ಮಾಡಿತು. ಈ ನಿರ್ಧಾರವನ್ನು ಸರಿಯಾಗಿ ಬಳಸಿಕೊಂಡ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಬಳಿಕ ಭಾರತ ನೀಡಿದ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 15.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 81 ರನ್ ಮಾತ್ರ ಕಲೆ ಹಾಕಿತು. ಈ ಮೂಲಕ ಭಾರತ 114 ರನ್‌ಗಳಿಂದ ಗೆದ್ದು ಫೈನಲ್ ತಲುಪಿತು.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಫಾಲಿ ವರ್ಮಾ ಸ್ಪೋಟಕ ಬ್ಯಾಟಿಂಗ್ ಮಾಡಿದ ಶತಕ ಸಿಡಿಸಿದರು. ಕೊನೆಯ ಬಾಲ್‌ನಲ್ಲಿ 1 ರನ್ ತೆಗೆದುಕೊಂಡು 49 ಬಾಲ್‌ಗಳಲ್ಲಿ 3 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಿಂದ 100 ರನ್ ಹೊಡೆದು ಶತಕ ಪೂರೈಸಿದರು. ಕೊನೆಯವರೆಗೂ ಅವರು ಔಟ್ ಆಗಲಿಲ್ಲ. ಇದು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅವರ ಮೊದಲ ಶತಕ. ಇದಲ್ಲದೆ, ಏಷ್ಯನ್ ಗೇಮ್ಸ್‌ನಲ್ಲಿ ಶತಕ ಹೊಡೆದ ಮೊದಲ ಆಟಗಾರ್ತಿ ಎಂಬ ಹೆಸರು ಪಡೆದರು.
ಟೀಮ್ ಇಂಡಿಯಾ ನೀಡಿದ 196 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶದ ಆರಂಭ ತುಂಬಾ ಕೆಟ್ಟದಾಗಿತ್ತು. ಎರಡನೇ ಓವರ್‌ನ ಮೊದಲ ಬಾಲ್‌ನಲ್ಲೇ ಜುರಿಯಾ ಫಿರ್ದೌಸ್ ರನ್ ತೆಗೆಯದೆ ಔಟ್ ಆದರು (ಗೋಲ್ಡನ್ ಡಕ್). ಇದರಿಂದ ತಂಡಕ್ಕೆ ಮೊದಲ ಹೊಡೆತ ಬಿತ್ತು. ಅದಾದ ನಂತರ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಬಾಂಗ್ಲಾದೇಶದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಲೇ ಇದ್ದವು.
ಆರಂಭದಲ್ಲಿ ಆಡಿದ ದಿಲಿರಾ ಅಖ್ತರ್, ಶರ್ಮಿನ್ ಅಖ್ತರ್ (10 ರನ್) ಮತ್ತು ಸುಲ್ತಾನಾ ಖಾತುನ್ (12 ರನ್) ಬಿಟ್ಟರೆ ಬೇರೆ ಯಾರೂ 10 ರನ್‌ಗಿಂತ ಹೆಚ್ಚು ತೆಗೆಯಲಿಲ್ಲ.ದಿಲಿರಾ 23 ಬಾಲ್‌ನಲ್ಲಿ 27 ರನ್ ಹೊಡೆದು ಔಟಾದರು. ಅವರು 4 ಫೋರ್ ಮತ್ತು 1 ಸಿಕ್ಸ್ ಹೊಡೆದಿದ್ದರು. ಉಳಿದ ಬ್ಯಾಟರ್ಗಳು ಚೆನ್ನಾಗಿ ಆಡಲು ಸಾಧ್ಯವಾಗಲಿಲ್ಲ. ಭಾರತದ ಪರ ನಂದಿನಿ ಶರ್ಮಾ ಮತ್ತು ದೀಪ್ತಿ ಶರ್ಮಾ ತಲಾ 3 ವಿಕೆಟ್ ಪಡೆದು ಮಿಂಚಿದರು.
ಶ್ರೀಲಂಕಾ ತಂಡ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಹೋಯಿತು. ಈಗ ಭಾರತ ಮತ್ತು ಶ್ರೀಲಂಕಾ ಚಿನ್ನದ ಪದಕಕ್ಕಾಗಿ ಫೈನಲ್‌ನಲ್ಲಿ ಆಡಲಿವೆ. ಈ ಪಂದ್ಯ ಸೆಪ್ಟೆಂಬರ್ 22ರಂದು ನಡೆಯುತ್ತದೆ. ಗೆದ್ದ ತಂಡಕ್ಕೆ ಚಿನ್ನದ ಪದಕ ಸಿಗುತ್ತದೆ. ಸೋತ ತಂಡಕ್ಕೆ ಬೆಳ್ಳಿ ಪದಕ ಸಿಗುತ್ತದೆ. ಪಾಕಿಸ್ತಾನ ಕಂಚಿನ ಪದಕಕ್ಕಾಗಿ ಬಾಂಗ್ಲಾದೇಶದೊಂದಿಗೆ ಆಡುತ್ತದೆ.














