Last Updated:
ನವೆಂಬರ್ ಎರಡನೇ ವಾರದಲ್ಲಿ ಅನಿರುದ್ಧ್ ಹಾಗೂ ಕಾವ್ಯಾ ಮಾರನ್ ಅವರ ವಿವಾಹ ನಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ತಮಿಳು ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಹಾಗೂ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಕಾವ್ಯಾ ಮಾರನ್ (Kavya Maran) ಮದುವೆಯಾಗಲಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂಬರುವ ನವೆಂಬರ್ ಎರಡನೇ ವಾರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.
ಅನಿರುದ್ಧ್ ಮತ್ತು ಕಾವ್ಯಾ ಮಾರನ್ ನಡುವಿನ ಆತ್ಮೀಯ ಸಂಬಂಧದ ಬಗ್ಗೆ ಈ ಹಿಂದೆಯೂ ಹಲವು ಬಾರಿ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಾರಿ ಮದುವೆ ದಿನಾಂಕದವರೆಗೂ ಚರ್ಚೆಯಾಗುತ್ತಿರುವುದು ಈ ವದಂತಿಗೆ ಮತ್ತಷ್ಟು ವೇಗ ನೀಡಿದೆ.
ಈ ಮದುವೆ ಸುದ್ದಿಗೆ ಹೊಸ ಆಯಾಮ ಸಿಕ್ಕಿರುವುದು ಹಿರಿಯ ನಟ ಹಾಗೂ ಅನಿರುದ್ಧ್ ಅವರ ಆಪ್ತ ಸಂಬಂಧಿ ವೈ. ಜಿ. ಮಹೇಂದ್ರನ್ ನೀಡಿದ ಹೇಳಿಕೆಯ ನಂತರ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಜೋಡಿ ಉತ್ತಮ ಜೋಡಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದು, ಎರಡೂ ಕುಟುಂಬಗಳ ಹಿರಿಯರ ಒಪ್ಪಿಗೆಯೊಂದಿಗೆ ಮದುವೆ ನಡೆಯುವ ಸಾಧ್ಯತೆಯಿದೆ ಎಂಬ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಸನ್ ಪಿಕ್ಚರ್ಸ್ ನಿರ್ಮಿಸಿದ ‘ಬೀಸ್ಟ್’ ಹಾಗೂ ‘ಜೈಲರ್’ ಸಿನಿಮಾಗಳ ಸಂದರ್ಭದಲ್ಲಿ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ನಡುವೆ ಉತ್ತಮ ಪರಿಚಯ ಬೆಳೆದಿತ್ತೆಂದು ಹೇಳಲಾಗುತ್ತಿದೆ. ಆ ಪರಿಚಯವೇ ಬಳಿಕ ಸ್ನೇಹವಾಗಿ, ನಂತರ ಪ್ರೇಮವಾಗಿ ಬದಲಾಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಮದುವೆ ಕುರಿತ ವದಂತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಅನಿರುದ್ಧ್ ರವಿಚಂದರ್ ಅಥವಾ ಕಾವ್ಯಾ ಮಾರನ್ ಕುಟುಂಬದವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಇಂತಹ ವದಂತಿಗಳು ಹರಿದಾಡಿದಾಗ ಅನಿರುದ್ಧ್ ಸಾಮಾಜಿಕ ಜಾಲತಾಣದ ಮೂಲಕ ಅವುಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಆದರೆ ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
ಕಾವ್ಯಾ ಮಾರನ್ ಅವರು ಸನ್ ನೆಟ್‌ವರ್ಕ್ ಸಂಸ್ಥಾಪಕ ಕುಟುಂಬದ ಉತ್ತರಾಧಿಕಾರಿಗಳಲ್ಲಿ ಒಬ್ಬರು. ಜೊತೆಗೆ ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್ ಪಂದ್ಯಗಳ ವೇಳೆ ತಂಡವನ್ನು ಪ್ರೋತ್ಸಾಹಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.
ಅನಿರುದ್ಧ್ ರವಿಚಂದರ್ ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ‘ವೈ ದಿಸ್ ಕೊಲಾವೆರಿ ಡಿ’ ಹಾಡಿನ ಮೂಲಕ ದೇಶಾದ್ಯಂತ ಜನಪ್ರಿಯರಾದ ಅವರು ನಂತರ ಜೈಲರ್, ಬೀಸ್ಟ್, ವಿಕ್ರಂ, ಲಿಯೋ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ತಮಿಳು ಮಾತ್ರವಲ್ಲದೆ ವಿವಿಧ ಭಾಷೆಗಳ ಸಿನಿಮಾಗಳಲ್ಲೂ ತಮ್ಮ ಸಂಗೀತದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
Bangalore [Bangalore],Bangalore,Karnataka














