Last Updated:
ದಿವಾ ಉತ್ಕರ್ಷ 12ನೇ ವಯಸ್ಸಿನಲ್ಲಿ ಪ್ರಾಜೆಕ್ಟ್ ಸೂರ್ಯ ಸ್ಥಾಪಿಸಿ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗೆ ನೆರವಾಗಿ, ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ
ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ (Small Age) ತಮ್ಮನ ನೋವು ಕಂಡು ಕಣ್ಣೀರು ಹಾಕಿದ ಹುಡುಗಿ ಇಂದು ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ! ಬೆಂಗಳೂರಿನ ದಿವಾ ಉತ್ಕರ್ಷ ತನ್ನ 12ನೇ ವಯಸ್ಸಿನಲ್ಲೇ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗಾಗಿ “ಪ್ರಾಜೆಕ್ಟ್ ಸೂರ್ಯ” ಎಂಬ ಸಂಸ್ಥೆ (Foundation) ಹುಟ್ಟುಹಾಕಿ ಇಂದು ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಅತ್ಯಂತ ಕಿರಿಯ ವಿಜೇತೆಯಾಗಿ ಹೊರಹೊಮ್ಮಿದ್ದಾಳೆ!
ದಿವಾ ಅವರ ತಮ್ಮ ಸೂರ್ಯನಿಗೆ ಟೈಪ್ 1 ಮಧುಮೇಹ ಇರುವುದು ಪತ್ತೆಯಾದಾಗ ಇಡೀ ಕುಟುಂಬ ಬೆಚ್ಚಿಬಿದ್ದಿತು. ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದು, ನಿರಂತರ ಗ್ಲೂಕೋಸ್ ಪರೀಕ್ಷೆ ಮತ್ತು ಭಾವನಾತ್ಮಕ ಹೋರಾಟ ಕಣ್ಣಾರೆ ಕಂಡ ದಿವಾ ಮನದಲ್ಲಿ ಒಂದು ಪ್ರಶ್ನೆ ಮೂಡಿತು. “ಇನ್ಸುಲಿನ್ ಕೊಳ್ಳಲಾಗದ ಬಡ ಮಕ್ಕಳ ಗತಿ ಏನು?” ಈ ಒಂದು ಪ್ರಶ್ನೆ 2021ರಲ್ಲಿ “ಪ್ರಾಜೆಕ್ಟ್ ಸೂರ್ಯ” ಸ್ಥಾಪನೆಗೆ ನಾಂದಿ ಹಾಡಿತು. ಕನ್ನಡದಲ್ಲಿ “ಸೂರ್ಯ” ಅಂದರೆ ಬೆಳಕು, ಟೈಪ್ 1 ಮಧುಮೇಹ ಪೀಡಿತ ಮಕ್ಕಳ ಜೀವನವನ್ನು ಸೂರ್ಯನಂತೆ ಬೆಳಗಿಸುವ ಸಂಕಲ್ಪವೇ ಈ ಸಂಸ್ಥೆಯ ಆಶಯ.
ವಿಶ್ವಸಂಸ್ಥೆಯಿಂದ ಫೋರ್ಬ್ಸ್‌ವರೆಗೆ ಮಾನ್ಯತೆ!
G20 ವಿದ್ಯಾರ್ಥಿ ಶೃಂಗ ಮತ್ತು ವಿಶ್ವಸಂಸ್ಥೆಯ ಆ್ಯಕ್ಟಿವೇಟ್ ಇಂಪ್ಯಾಕ್ಟ್ ಶೃಂಗದಲ್ಲಿ ಭಾಗವಹಿಸಿರುವ ದಿವಾ, ಡಯಾನಾ ಅವಾರ್ಡ್ 2023 ಹಾಗೂ ಗ್ಲೋಬಲ್ ಸ್ಟೂಡೆಂಟ್ ಪ್ರೈಜ್‌ನ ಭಾರತದ ಅಗ್ರ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದಾರೆ. ತೆರಿಗೆ ಮುಕ್ತ ಇನ್ಸುಲಿನ್ ಮತ್ತು ಟೈಪ್ 1 ಮಧುಮೇಹ ಪೀಡಿತರ ಸವಾಲುಗಳ ಮಾನ್ಯತೆಗಾಗಿ ನೀತಿ ಬದಲಾವಣೆಯ ಹೋರಾಟವನ್ನೂ ಮುನ್ನಡೆಸುತ್ತಿದ್ದಾರೆ. “ಪ್ರತಿ ಮಗುವಿಗೂ ಆರ್ಥಿಕ ಸ್ಥಿತಿ ಹೇಗಿದ್ದರೂ ಆರೋಗ್ಯವಾಗಿ ಕನಸು ಕಾಣುವ ಹಕ್ಕಿದೆ” ಎನ್ನುವ ದಿವಾ ಅವರ ಈ ಸ್ಫೂರ್ತಿದಾಯಕ ಕಥೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ!
Bangalore [Bangalore],Bangalore,Karnataka
Jun 05, 2026 12:45 PM IST













