Last Updated:
ಬಾರ್ಡರ್ ಸಿನಿಮಾ ಖ್ಯಾತಿಯ ನಟ ಸುದೇಶ್ ಬೆರ್ರಿ (Actor Sudesh Berry) ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬಾಲಿವುಡ್ ನಟರು ಮತ್ತು ನಟಿಯರು ಸಿನಿಮಾ ವಿಚಾರಗಳಷ್ಟೇ ಅಲ್ಲ, ತಮ್ಮ ವೈಯಕ್ತಿಕ ಅಭಿಪ್ರಾಯಗಳಿಂದಲೂ ಆಗಾಗ ಸುದ್ದಿಯಾಗುತ್ತಾರೆ. ಈ ಬಾರಿ ಬಾರ್ಡರ್ ಸಿನಿಮಾ ಖ್ಯಾತಿಯ ನಟ ಸುದೇಶ್ ಬೆರ್ರಿ (Actor Sudesh Berry) ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ (Narendra Modi) ಬಗ್ಗೆ ತಮ್ಮ ಗೌರವವನ್ನು ವ್ಯಕ್ತಪಡಿಸುವ ವೇಳೆ ನೀಡಿದ ಕೆಲವು ಹೇಳಿಕೆಗಳು ಈಗ ಪರ ವಿರೋಧ ಚರ್ಚೆಗೆ ಗ್ರಾಸವಾಗಿವೆ.
ಇತ್ತೀಚಿಗೆ ಪಾಡ್‌ಕಾಸ್ಟ್ ಒಂದರಲ್ಲಿ ಭಾಗವಹಿಸಿದ್ದ ಸುದೇಶ್ ಬೆರ್ರಿ ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ, ನಿರೂಪಕರು ನಟ ತಮ್ಮ ತಾಯಿಯ ಪಾದ ತೊಳೆದಿದ್ದ ಹಳೆಯ ವಿಡಿಯೊವನ್ನು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೇಶ್ ಬೆರ್ರಿ, ತಮಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಕುಡಿಯಲು ಬಯಸುತ್ತೇನೆ ಎಂದು ಹೇಳಿದರು.
ಹಾಗೆಯೇ ನಾನು ಪ್ರಧಾನಿ ಮೋದಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಆದರೆ ದೇವರನ್ನು ನೋಡದೆ ಪೂಜಿಸುವಂತೆ, ಅವರನ್ನು ನಾನು ಗೌರವಿಸುತ್ತೇನೆ, ಎಂದು ಅಭಿಪ್ರಾಯಪಟ್ಟರು. ಜೊತೆಗೆ, ಇದು ಯಾವುದೇ ರಾಜಕೀಯ ಸಿದ್ಧಾಂತದ ಬಗ್ಗೆ ಅಲ್ಲ, ಒಬ್ಬ ವ್ಯಕ್ತಿಯಾಗಿ ಪ್ರಧಾನಿ ಮೋದಿಯವರ ಬಗ್ಗೆ ಹೊಂದಿರುವ ಗೌರವ ಎಂದು ಸ್ಪಷ್ಟಪಡಿಸಿದರು.
ಸಂಭಾಷಣೆಯ ವೇಳೆ ಸುದೇಶ್ ಬೆರ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಷ್ಣುವಿನ ಅವತಾರ’ ಎಂದು ಬಣ್ಣಿಸಿದರು. ಜೊತೆಗೆ ಅವರ ನಾಯಕತ್ವದಲ್ಲಿ ಭಾರತ ಮಹತ್ವದ ಬದಲಾವಣೆಗಳನ್ನು ಕಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ದೇಶವು ರಾಮರಾಜ್ಯದತ್ತ ಸಾಗುತ್ತಿದೆ ಎಂದೂ ಹೇಳಿದರು.
ಇದಲ್ಲದೆ, ಆಧುನಿಕ ಭಾರತದಲ್ಲಿ ಐದು ಪಾಂಡವರು ಇದ್ದಾರೆ ಎಂದು ಹೇಳಿದ ಅವರು, ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಹಾಗೂ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ಉಲ್ಲೇಖಿಸಿದರು. ಆದರೆ ಐದನೇ ವ್ಯಕ್ತಿಯ ಹೆಸರನ್ನು ಅವರು ಬಹಿರಂಗಪಡಿಸಲಿಲ್ಲ.
ಪಾಡ್‌ಕಾಸ್ಟ್‌ನಲ್ಲಿ ಸುದೇಶ್ ಬೆರ್ರಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ಕೆಲವು ಸಂಘಟನೆಗಳ ಚಟುವಟಿಕೆಗಳನ್ನೂ ಟೀಕಿಸಿದರು.
ಸುದೇಶ್ ಬೆರ್ರಿ ಅವರ ಹೇಳಿಕೆ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಅವರ ವೈಯಕ್ತಿಕ ಅಭಿಪ್ರಾಯವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಈ ಹೇಳಿಕೆ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.
ಸುದೇಶ್ ಬೆರ್ರಿ ಹಿಂದಿ ಚಿತ್ರರಂಗ ಮತ್ತು ಕಿರುತೆರೆ ಲೋಕದಲ್ಲಿ ಪರಿಚಿತ ಹೆಸರು. ಅವರು 1988ರಲ್ಲಿ ಬಿಡುಗಡೆಯಾದ ಖತ್ರೋನ್ ಕೆ ಖಿಲಾಡಿ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ್ದರು. ನಂತರ ಬಾರ್ಡರ್ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳು ಹಾಗೂ ದೂರದರ್ಶನ ಧಾರಾವಾಹಿಗಳ ಮೂಲಕ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಪ್ರಸ್ತುತ, ಪ್ರಧಾನಿ ನರೇಂದ್ರ ಮೋದಿ ಕುರಿತು ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅದಕ್ಕೆ ಬೆಂಬಲ ಮತ್ತು ಟೀಕೆ ಎರಡೂ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
Bangalore [Bangalore],Bangalore,Karnataka














