Last Updated:
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಐಸಿಸಿಯ ಇತ್ತೀಚಿನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸಂಚಲನ ಮಾಡಿದ್ದಾರೆ. ಸೂರ್ಯವಂಶಿ ಅವರು ಒಂದೇ ಬಾರಿಗೆ 230 ಸ್ಥಾನಗಳು ಏರಿದ್ದಾರೆ.
ಭಾರತ(India)ದ ಯುವ ಕ್ರಿಕೆಟಿಗ (Cricketer) ವೈಭವ್ ಸೂರ್ಯವಂಶಿ (Vaibhav Sooryavanshi) ಮೊದಲ ಮೂರು ಟಿ20 ಪಂದ್ಯಗಳಲ್ಲಿ ಚೆನ್ನಾಗಿ ಆಡಲಿಲ್ಲ. ಆದರೆ ಜಿಂಬಾಬ್ವೆ (Zimbabwe) ವಿರುದ್ಧದ ಟಿ20 ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು. ಇದರಿಂದ 15 ವರ್ಷದ ವಯಸ್ಸಿನಲ್ಲೇ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು. ಈಗ ಐಸಿಸಿ (ICC) ಟಿ20 ಬ್ಯಾಟಿಂಗ್ ರ್ಯಾಂಕಿಂಗ್(Ranking)ನಲ್ಲಿ ಅವರು ಭಾರೀ ಸದ್ದು ಮಾಡಿದ್ದಾರೆ.
ಜಿಂಬಾಬ್ವೆ ವಿರುದ್ಧ ಮೂರು ಟಿ20ಐ ಪಂದ್ಯಗಳಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಅಬ್ಬರಿಸಿದರು. ಆಡಿದ ಮೂರು ಪಂದ್ಯಗಳಲ್ಲಿ ಸೂರ್ಯವಂಶಿ ಎರಡು ಅರ್ಧಶತಕಗಳನ್ನು ಹೊಡೆದು ಒಟ್ಟು 151 ರನ್ಗಳನ್ನು 50.33 ಸರಾಸರಿಯಲ್ಲಿ ಗಳಿಸಿದರು.
ಇದು ಸೂರ್ಯವಂಶಿ ಐಸಿಸಿ ಟಿ20ಐ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಭಾರೀ ಜಿಗಿತ ಕಾಣಲು ನೆರವಾಗಿದೆ. ಸೂರ್ಯವಂಶಿ 536 ಅಂಕಗಳೊಂದಿಗೆ 278ನೇ ಸ್ಥಾನದಿಂದ 48ನೇ ಸ್ಥಾನಕ್ಕೆ ಏರಿದ್ದಾರೆ. ಅಂದರೆ, ಬರೋಬ್ಬರಿ 230 ಸ್ಥಾನಗಳ ಜಿಗಿತವನ್ನು ಸಾಧಿಸಿದ್ದಾರೆ.
ಐಸಿಸಿ ಟಿ20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಇಶಾನ್ ಕಿಶನ್ 145 ರನ್ ಹೊಡೆದು 910 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಇತ್ತೀಚೆಗೆ ಕುಸಿದು 819 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ ಒಂದು ಸ್ಥಾನದ ಏರಿಕೆ ಕಂಡು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.
ಇಂಗ್ಲೆಂಡ್ ವಿರುದ್ಧ ಕಳಪೆ ಬ್ಯಾಟಿಂಗ್ ಮಾಡಿದ್ದ ಭಾರತದ ಉಪನಾಯಕ ತಿಲಕ್ ವರ್ಮಾ 6ನೇ ಸ್ಥಾನಕ್ಕೆ ಬಂದಿದ್ದಾರೆ. ತಿಲಕ್ ವರ್ಮಾ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳಲ್ಲಿ ಅರ್ಧಶತಕ ಸೇರಿ ಒಟ್ಟು 77 ರನ್ ಗಳಿಸಿದ್ದಾರೆ. ಇದರಿಂದ ಅವರ ಟಿ20 ಬ್ಯಾಟಿಂಗ್ ರ್ಯಾಂಕ್ ಸುಧಾರಿಸಿ 750 ಪಾಯಿಂಟ್ಗಳೊಂದಿಗೆ 6ನೇ ಸ್ಥಾನಕ್ಕೆ ಬಂದಿದ್ದು, ಇಂಗ್ಲೆಂಡ್ನ ಹ್ಯಾರಿ ಬ್ರೂಕ್ ಮತ್ತು ಜೋಸ್ ಬಟ್ಲರ್ ಅವರನ್ನು ಹಿಂದಿಕ್ಕಿದ್ದಾರೆ.
ಕಳೆದ ಮೂರು ಸರಣಿಗಳಲ್ಲಿ ಆಡದ ಭಾರತದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಈಗ 19ನೇ ಸ್ಥಾನದಲ್ಲಿದ್ದಾರೆ. ದೀರ್ಘ ವಿರಾಮದ ನಂತರ ತಂಡಕ್ಕೆ ಹಿಂದಿರುಗಿದ ಶ್ರೇಯಸ್ ಅಯ್ಯರ್ 7 ಸ್ಥಾನಗಳು ಏರಿ 24ನೇ ಸ್ಥಾನಕ್ಕೆ ಬಂದಿದ್ದಾರೆ. ಪ್ರಸ್ತುತ ಟಾಪ್ 10ರಲ್ಲಿ ಕೇವಲ ಒಬ್ಬ ಭಾರತೀಯ ಬೌಲರ್ ಮಾತ್ರ ಇದ್ದಾರೆ.
ವರುಣ್ ಚಕ್ರವರ್ತಿ 3 ಸ್ಥಾನಗಳು ಕುಸಿದು 9ನೇ ಸ್ಥಾನಕ್ಕೆ ಇಳಿದಿದ್ದಾರೆ. ಕಳೆದ ಮೂರು ಟಿ20ಐ ಸರಣಿಗಳನ್ನು ತಪ್ಪಿಸಿದ ಜಸ್ಪ್ರೀತ್ ಬುಮ್ರಾ ಕೂಡ 5 ಸ್ಥಾನಗಳು ಕುಸಿದಿದ್ದಾರೆ. ಆಲ್ರೌಂಡರ್ ಶ್ರೇಣಿಯಲ್ಲಿ ಹಾರ್ದಿಕ್ ಪಾಂಡ್ಯ 5ನೇ ಸ್ಥಾನದಲ್ಲಿದ್ದಾರೆ.














