Last Updated:
ರಾಜ್ಯ ಸರ್ಕಾರ ಈ ವರ್ಷ ವಿಶ್ವವಿಖ್ಯಾತ ಮೈಸೂರು ದಸರಾವನ್ನು 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ನಾಡಹಬ್ಬ ದಸರಾ ಅಕ್ಟೋಬರ್ 11ರಂದು ಪ್ರಾರಂಭವಾಗಿ, ಅಕ್ಟೋಬರ್ 21ರಂದು ಜಂಬೂ ಸವಾರಿಯೊಂದಿಗೆ ಮುಗಿಯುತ್ತದೆ.
ವಿಶ್ವವಿಖ್ಯಾತ (World Famous) ಮೈಸೂರು (Mysuru) ದಸರಾ (Dasara) 2026ರ ಉದ್ಘಾಟನೆ(Inauguration)ಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 11ರಂದು ಉದ್ಘಾಟನೆ ಮತ್ತು ಅಕ್ಟೋಬರ್ 21ರಂದು ಜಂಬೂ ಸವಾರಿ ನಡೆಯಲಿದೆ. ಆದ್ದರಿಂದ ಈಗಿನಿಂದಲೇ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅವರು ಜುಲೈ 27ರಂದು ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಭೆ ನಡೆಸಿದ್ದಾರೆ. ಈ ಬಾರಿ 17 ಉಪಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಕಂಬಳದ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಅದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ಧಾರಕ್ಕೆ ಬಿಡಲಾಗಿದೆ. ಈ ಬಾರಿ ದಸರಾ ಉದ್ಘಾಟನೆ ಯಾರು ಮಾಡುತ್ತಾರೆ ಎಂಬ ಕುತೂಹಲವಿದೆ. ಮೈಸೂರು ದಸರಾ ಉದ್ಘಾಟನೆಗೆ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗರ ಹೆಸರುಗಳು ಕೇಳಿಬಂದಿವೆ.
ದಸರಾ ಕಾರ್ಯಕಾರಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ದಸರಾ ಕುರಿತು ಕಾರ್ಯಕಾರಿ ಸಭೆ ನಡೆಸಿದ್ದೇವೆ. ಉಪಸಮಿತಿಗಳ ರಚನೆ ಬಗ್ಗೆ ಸಲಹೆಗಳನ್ನು ಪಡೆದಿದ್ದೇವೆ. ಈ ಬಾರಿ 17 ಉಪಸಮಿತಿಗಳನ್ನು ರಚಿಸಲು ನಿರ್ಧರಿಸಿದ್ದೇವೆ. ಕಂಬಳ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಕಂಬಳ ಅಂತಿಮವಾದರೆ ಇನ್ನೊಂದು ಉಪಸಮಿತಿ ಆಗುತ್ತದೆ. ಕಂಬಳ ನಡೆಸಿದರೆ ಸಾತಗಳ್ಳಿಯಲ್ಲೇ ನಡೆಸುತ್ತಾರೆ. ಆದರೆ ಸಿಎಂ ಇನ್ನೂ ಅದರ ಬಗ್ಗೆ ಅಂತಿಮ ನಿರ್ಧಾರ ಮಾಡಿಲ್ಲ. ಎಲ್ಲವೂ ಅವರ ಕೈಯಲ್ಲಿದೆ ಎಂದು ಹೇಳಿದರು.
ಕಳೆದ ವರ್ಷ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಮೈಸೂರು ದಸರಾವನ್ನು ಯಾರು ಉದ್ಘಾಟನೆ ಮಾಡುತ್ತಾರೆ ಎನ್ನುವುದರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಇದರಲ್ಲಿ ಟೀಮ್ ಇಂಡಿಯಾದ ಇಬ್ಬರು ಮಾಜಿ ದಿಗ್ಗಜರ ಕ್ರಿಕೆಟಿಗರ ಹೆಸರುಗಳು ಕೇಳಿಬಂದಿವೆ. ಈ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ದಸರಾ ಉದ್ಘಾಟಕರನ್ನು ಆಯ್ಕೆ ಮಾಡುವುದು ಸಿಎಂ ಅವರ ನಿರ್ಧಾರವೇ ಅಂತಿಮ. ನಾವೆಲ್ಲರೂ ಆಯ್ಕೆಯನ್ನು ಅವರಿಗೆ ಬಿಟ್ಟಿದ್ದೇವೆ. ಶಾಸಕರು ಸ್ವಲ್ಪ ಸಲಹೆ ನೀಡಿದ್ದಾರೆ. ದಸರಾ ಉದ್ಘಾಟನೆಗೆ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ನಾನು ಈಗಾಗಲೇ ಹೇಳಿದ್ದೇನೆ. ಯಾವ ಹೆಸರನ್ನು ಆಯ್ಕೆ ಮಾಡಿದರೂ ಅದು ಸಿಎಂ ಅವರ ಆಯ್ಕೆಯೇ ಆಗಿರುತ್ತದೆ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.














