Last Updated:
Pulwama Terror Attack: ಪುಲ್ವಾಮಾ ಭೀಕರ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾದ, ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಮ್ಜಾ ಬುರ್ಹಾನ್ ಅಲಿಯಾಸ್ ಅರ್ಜುಮಂದ್ ಗುಲ್ಜಾರ್ ದಾರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹತನಾಗಿದ್ದಾನೆ. ಈ ನಿಟ್ಟಿನಲ್ಲಿ ಅವನ ಅಂತ್ಯಕ್ರಿಯೆ ಅಲ್ಲಿ ನಡೆದ ಆ ದೃಷ್ಯ ವೈರಲ್ ಆಗಿದೆ. ಇದರಿಂದ ಸ್ವತಃ ಪಾಕ್ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
2019ರ ಪುಲ್ವಾಮಾ ಭೀಕರ ಭಯೋತ್ಪಾದಕ ದಾಳಿಯ (Pulwama Terror Attack) ಪ್ರಮುಖ ಸಂಚುಗಾರರಲ್ಲಿ ಒಬ್ಬನಾದ, ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಮ್ಜಾ ಬುರ್ಹಾನ್ (Humza Burhan) ಅಲಿಯಾಸ್ ಅರ್ಜುಮಂದ್ ಗುಲ್ಜಾರ್ ದಾರ್ ಪಾಕಿಸ್ತಾನ (Pakistan) ಆಕ್ರಮಿತ ಕಾಶ್ಮೀರದಲ್ಲಿ (PoK) ಹತನಾಗಿದ್ದಾನೆ. ಭಾರತದ ಮೋಸ್ಟ್ ವಾಂಟೆಡ್ ಶತ್ರುಗಳ ಪಟ್ಟಿಯಲ್ಲಿದ್ದ ಈತನನ್ನು ಪಾಕಿಸ್ತಾನದ ಮುಜಫರಾಬಾದ್‌ನ ಗೊಜ್ರಾ ಎಂಬಲ್ಲಿ ಅಪರಿಚಿತ (Unknown) ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ತಲೆಗೆ ಮೂರು ಗುಂಡುಗಳು ತಗುಲಿ ಉಗ್ರ ಬುರ್ಹಾನ್ ಸ್ಥಳದಲ್ಲೇ ನರಕದ ಹಾದಿ ಹಿಡಿದಿದ್ದಾನೆ. ಆದರೆ, ಈ ಹತ್ಯೆಗಿಂತಲೂ ಮಿಗಿಲಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಆತನ ಅಂತ್ಯಕ್ರಿಯೆಯ ವೀಡಿಯೊ ಈಗ ಇಡೀ ವಿಶ್ವದಲ್ಲೇ ತೀವ್ರ ಸಂಚಲನ ಮೂಡಿಸಿದ್ದು, ಪಾಕಿಸ್ತಾನ ಸರ್ಕಾರ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ.
ಭಾರತದಲ್ಲಿ 40 ಕ್ಕೂ ಹೆಚ್ಚು ಸಿಆರ್‌ಪಿಎಫ್ ಜವಾನರ ಬಲಿಪಡೆದ ಪುಲ್ವಾಮಾ ದಾಳಿಯ ನಂತರ, ಹಮ್ಜಾ ಬುರ್ಹಾನ್ ಭಾರತೀಯ ಸಂಸ್ಥೆಗಳಿಂದ ತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ಓಡಿಹೋಗಿದ್ದ. ಅಲ್ಲಿ ಈತನಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಸಂಪೂರ್ಣ ರಕ್ಷಣೆ ನೀಡಿತ್ತು. ಮುಜಫರಾಬಾದ್‌ನಲ್ಲಿ ಒಂದು ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ (ಶಿಕ್ಷಕ) ಎಂಬ ಮುಖವಾಡದಡಿ ಈತನನ್ನು ಅಡಗಿಸಿಡಲಾಗಿತ್ತು.
ಇಸ್ಲಾಮಾಬಾದ್ ಜಗತ್ತಿನ ಕಣ್ಣಿಗೆ ತಾನು ಭಯೋತ್ಪಾದನೆಯನ್ನು ಪೋಷಿಸುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದರೂ, ತನ್ನದೇ ನೆಲದಲ್ಲಿ ಇಂತಹ ಅಪಾಯಕಾರಿ ಉಗ್ರರನ್ನು ಸಕಲ ಸೌಕರ್ಯಗಳೊಂದಿಗೆ ಸಾಕುತ್ತಿತ್ತು. ಗುರುವಾರ ಬೆಳಿಗ್ಗೆ ಕಾಲೇಜಿನಿಂದ ಹೊರಬರುತ್ತಿದ್ದಂತೆ ಅಪರಿಚಿತ ಹಂತಕರು ಈತನನ್ನು ಹೊಡೆದುರುಳಿಸಿದಾಗ, ಪಾಕಿಸ್ತಾನ ಎಂದಿನಂತೆ ಈ ಸುದ್ದಿಯನ್ನು ಜಗತ್ತಿನಿಂದ ಮುಚ್ಚಿಡಲು ವಿಫಲ ಪ್ರಯತ್ನ ನಡೆಸಿತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ವೀಡಿಯೊ ಪಾಕ್‌ನ ಎಲ್ಲಾ ಸುಳ್ಳುಗಳನ್ನು ಬೆತ್ತಲೆಗೊಳಿಸಿದೆ.
ವೈರಲ್ ಆಗಿರುವ ಆಘಾತಕಾರಿ ವಿಡಿಯೋದಲ್ಲಿ, ಹಮ್ಜಾ ಬುರ್ಹಾನ್‌ನ ಶವಸಂಸ್ಕಾರದ ಕೊನೆಯ ಪ್ರಾರ್ಥನೆ ನಡೆಯುವಾಗ ಯಾರೂ ಊಹಿಸದ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತದೇಹದ ಸುತ್ತಲೂ ಮನುಷ್ಯರಿಗಿಂತ ಹೆಚ್ಚಾಗಿ ಕೋಟ್ಯಂತರ ಕಪ್ಪು ನೊಣಗಳು ಮುತ್ತಿಕೊಂಡಿವೆ. ಶವದ ಮುಖ ಮತ್ತು ದೇಹದ ಮೇಲಷ್ಟೇ ಅಲ್ಲದೆ, ಅಲ್ಲಿ ನೆರೆದಿದ್ದವರ ಮೇಲೂ ನೊಣಗಳ ಸಾಗರವೇ ಮುಗಿಬಿದ್ದಿತ್ತು. ಬದುಕಿದ್ದಾಗ ನೂರಾರು ನಿರ್ದೋಷಿಗಳ ರಕ್ತ ಹರಿಸಿ ಅಟ್ಟಹಾಸಗೈದಿದ್ದ ಉಗ್ರನಿಗೆ ಪ್ರಕೃತಿಯೇ ಅಂತ್ಯಕಾಲದಲ್ಲಿ ಘೋರ ಶಿಕ್ಷೆ ನೀಡಿದಂತಿದೆ ಎಂದು ನೆಟ್ಟಿಗರು ವಿಡಿಯೋ ನೋಡಿ ಕಮೆಂಟ್ ಮಾಡುತ್ತಿದ್ದಾರೆ.
ಭಯೋತ್ಪಾದಕರಿಗೆ ಸ್ವರ್ಗ ಎನಿಸಿಕೊಂಡಿರುವ ಪಾಕಿಸ್ತಾನಕ್ಕೆ ಈ ವಿಡಿಯೋ ತೀವ್ರ ಮುಜುಗರ ಹಾಗೂ ಮುಖಭಂಗ ಉಂಟುಮಾಡಿದೆ. ಜಾಗತಿಕ ವೇದಿಕೆಗಳಲ್ಲಿ ‘ನಾವು ಉಗ್ರ ಮುಕ್ತ ದೇಶ’ ಎಂದು ಬೊಗಳೆ ಬಿಡುವ ಪಾಕಿಸ್ತಾನದ ರಾಜಧಾನಿಗೆ ಹತ್ತಿರದಲ್ಲೇ ಈ ಮೋಸ್ಟ್ ವಾಂಟೆಡ್ ಉಗ್ರನ ಅಂತ್ಯಕ್ರಿಯೆ ಇಷ್ಟೊಂದು ಸಾರ್ವಜನಿಕವಾಗಿ ನಡೆದಿರುವುದು ಅದರ ದ್ವಂದ್ವ ನೀತಿಯನ್ನು ಸಾಬೀತುಪಡಿಸಿದೆ. ಇನ್ನೊಂದೆಡೆ, ಭಾರತದ ವೀರ ಯೋಧರ ಸಾವಿಗೆ ಕಾರಣನಾಗಿದ್ದ ಪಾಪಿಗೆ ಸತ್ತ ಮೇಲೆಯೂ ಗೌರವದ ವಿದಾಯ ಸಿಗದೆ, ಕೇವಲ ನೊಣಗಳ ಸೈನ್ಯ ಮುತ್ತಿಕೊಳ್ಳುವಂತಾಗಿದ್ದು ದೈವಿಕ ನ್ಯಾಯಕ್ಕೆ ಹಿಡಿದ ಕನ್ನಡಿಯಾಗಿದೆ.













