ಉತ್ತರ ಪ್ರದೇಶದ ಮೀರತ್‌ನಲ್ಲಿ (Meerut) ಪತಿಯನ್ನು ಕೊಂದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಬಾಯ್ಫ್ರೆಂಡ್ನ ಅರೆಸ್ಟ್ ಮಾಡಲಾಗಿದೆ. ಗಂಡನ ಸಾವನ್ನು ಆಕಸ್ಮಿಕ ಎಂದು ಬಿಂಬಿಸೋಕೆ ಆಕೆ ಹಾವನ್ನು ಬಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
20 ಲಕ್ಷ ರೂಪಾಯಿ ಇನ್ಶೂರೆನ್ಸ್ ಪಾಲಿಸಿ ದುಡ್ಡು ಪಡೆಯೋದಕ್ಕೆ 15 ಸಾವಿರ ಹೊಂದಿಸಿ ವಿಷ ಸರ್ಪ ತಂದಿದ್ದ ಹೆಂಡತಿ ಸಿಕ್ಕಿ ಬಿದ್ದಿದ್ದು ಹೇಗೆ?
ಹಸ್ತಿನಾಪುರದಲ್ಲಿ ತನ್ನ ಪತ್ನಿ ದಾಮಿನಿ ಜೊತೆ ಕೃಷ್ಣ ಕಿಡ್ಸ್ ಪ್ಲೇ ಸ್ಕೂಲ್ ಅನ್ನು ನಡೆಸುತ್ತಿದ್ದ ವ್ಯಕ್ತಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಇವರ ಹೆಸರು ಅತುಲ್ ಪನ್ವರ್. ಅವರು ಹಾಸಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪನ್ವರ್ ಮತ್ತು ದಾಮಿನಿ 2019 ರಲ್ಲಿ ವಿವಾಹವಾದರು. ಹಸ್ತಿನಾಪುರದಲ್ಲಿ ವಾಸಿಸುತ್ತಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಮೀರತ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಾತನಾಡಿ, ದಾಮಿನಿ ಶಾಲೆಯ ಚಾಲಕ ತುಷಾರ್ ಅಲಿಯಾಸ್ ನಿಕ್ಕಿ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮೊದಲು ಇಬ್ಬರೂ ಅಪಘಾತವನ್ನು ಸೃಷ್ಟಿಸಿ ಅತುಲ್‌ನನ್ನು ಕೊಲ್ಲಲು ಪ್ರಯತ್ನಿಸಿದರು. ಆದರೆ ಆ ಪ್ಲಾನ್ ಫೇಲ್ ಆದ ನಂತರ, ಅವರು ಮತ್ತೊಂದು ಸಂಚು ರೂಪಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಅವಳು ತನ್ನ ಪ್ರೇಮಿ ಮತ್ತು ಇತರ ಇಬ್ಬರೊಂದಿಗೆ ತನ್ನ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದಳು. ದಾಮಿನಿ ತನ್ನ ಪತಿಯ ಹಾಲಿಗೆ ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾಳೆ. ನಂತರ ವಿಷಪೂರಿತ ಹಾವನ್ನು ಹಾಸಿಗೆಯ ಮೇಲೆ ಬಿಟ್ಟಿದ್ದಾಳೆ. ಆ ಹಾವು ಆಕೆಯ ಗಂಡನನ್ನು ಕಚ್ಚಿತು.
ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅಭಿಜಿತ್ ಕುಮಾರ್ ಅವರ ಪ್ರಕಾರ, ಶುಕ್ರವಾರ ಬೆಳಿಗ್ಗೆ ಪನ್ವರ್ ಅವರನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಯಿತು.
ಪೊಲೀಸರು ತಿಳಿಸುವಂತೆ, ಈ ಪಿತೂರಿ ಹಿಂದೆ ಎರಡು ಉದ್ದೇಶಗಳಿದ್ದವು. 20 ಲಕ್ಷ ರೂಪಾಯಿ ವಿಮೆ ಪಡೆಯುವುದು ಮತ್ತು ತನ್ನ ಅಕ್ರಮ ಸಂಬಂಧ ಮುಂದುವರಿಸುವುದು. ಅದಕ್ಕಾಗಿ ಅತುಲ್‌ನನ್ನು ಮುಗಿಸುವುದು ಪ್ಲಾನ್ ಆಗಿತ್ತು.
ಅನುಮಾನ ಬರದಂತೆ ಸಾವನ್ನು ಹಾವು ಕಡಿತದ ಘಟನೆ ಎಂದು ತೋರಿಸಲು ಆರೋಪಿಗಳು ಈ ಸಂಚನ್ನು ಯೋಜಿಸಿದ್ದರು ಎನ್ನಲಾಗಿದೆ.
ಮೊಬೈಲ್ ಫೋನ್ ದಾಖಲೆಗಳು ಮತ್ತು ಇತರ ಸಾಕ್ಷಿ ವಿಶ್ಲೇಷಿಸಿದ ಪೊಲೀಸರು, ದಾಮಿನಿ ಮತ್ತು ತುಷಾರ್ ಭಾಗಿಯಾಗಿದ್ದಾರೆ ಎನ್ನಲಾದ ಪಿತೂರಿಯನ್ನು ಬಹಿರಂಗಪಡಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.













