Last Updated:
ಕರ್ನಾಟಕದ ಪ್ರಮುಖ ಜಲಾಶಯಗಳಿಗೆ 1,06,369 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೂ ಒಟ್ಟು ನೀರಿನ ಸಂಗ್ರಹ ಕೇವಲ 351.96 TMC ಇದೆ. KRS, ಕಬಿನಿ, ಆಲಮಟ್ಟಿ, ತುಂಗಭದ್ರಾ ಸೇರಿದಂತೆ ಪ್ರಮುಖ ಡ್ಯಾಂಗಳ ಇತ್ತೀಚಿನ ನೀರಿನ ಮಟ್ಟ ತಿಳಿಯಿರಿ.
ಬೆಂಗಳೂರು: ಒಂದೆಡೆ ಬಿಟ್ಟು ಬಿಡದೆ ಸುರಿಯುತ್ತಿರುವ ಮುಂಗಾರು ಮಳೆ, ಇನ್ನೊಂದೆಡೆ ಭೋರ್ಗರೆದು ತುಂಬುತ್ತಿರುವ ಡ್ಯಾಂಗಳು. ಈ ಸುದ್ದಿ ಕೇಳಿ ರೈತರು (Farmers) ಖುಷಿಯಾಗಿದ್ದಾರೆ ಅನ್ನೋದು ನಿಜ. ರಾಜ್ಯದ ಪ್ರಮುಖ ಜಲಾಶಯಗಳಿಗೆ ಬರೋಬ್ಬರಿ 1,06,369 ಕ್ಯೂಸೆಕ್ ನೀರು (Water) ಹರಿದುಬರುತ್ತಿದೆ. ಮೊದಲಿಗೆ ಇದು ಭಾರಿ ಸಂತೋಷದ ಸುದ್ದಿ ಅನ್ನಿಸಬಹುದು. ಆದರೆ ಒಳಗೆ ಇರುವ ಅಸಲಿ ವಿಷಯ ಬೇರೆ. ಕಳೆದ ವರ್ಷದ ನೀರಿನ ಮಟ್ಟಕ್ಕೂ, ಈಗಿನ ನೀರಿನ ಮಟ್ಟಕ್ಕೂ ಇರುವ ವ್ಯತ್ಯಾಸ ನೋಡಿದರೆ ನಿಮ್ಮ ಎದೆಯಲ್ಲೂ ಒಂದು ಕ್ಷಣ ಆತಂಕ ಶುರುವಾಗುವುದು ಖಂಡಿತ!
ಹೌದು, ಈ ಬಾರಿ ಮಳೆರಾಯ ಅಬ್ಬರಿಸುತ್ತಿದ್ದಾನೆ ಎಂದು ನಾವೆಲ್ಲಾ ಖುಷಿಪಡುತ್ತಿದ್ದೇವೆ. ಆದರೆ ವಾಸ್ತವ ಏನೆಂದರೆ, ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ಕೇವಲ ಶೇಕಡಾ 39 ರಷ್ಟು, ಅಂದರೆ 351.96 ಟಿಎಂಸಿ (TMC) ನೀರು ಮಾತ್ರ ಸಂಗ್ರಹವಾಗಿದೆ. ಅದೇ ಕಳೆದ ವರ್ಷ ಇದೇ ದಿನದಂದು ನಮ್ಮ ಡ್ಯಾಂಗಳಲ್ಲಿ ಬರೋಬ್ಬರಿ 646.55 ಟಿಎಂಸಿ ನೀರಿತ್ತು! ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧದಷ್ಟು ನೀರು ಕೂಡ ಜಲಾಶಯಗಳಲ್ಲಿ ಇಲ್ಲ. ಈ ಅಂಕಿ-ಅಂಶ ನೋಡಿದ ಬಳಿಕ ಮುಂದಿನ ಬೇಸಿಗೆಯ ಕಥೆ ಏನು ಎನ್ನುವ ಪ್ರಶ್ನೆ ಹಲವರನ್ನು ಕಾಡಲಾರಂಭಿಸಿದೆ.
ಇನ್ನು ದಕ್ಷಿಣ ಕರ್ನಾಟಕದ ಜೀವನಾಡಿಯಾಗಿರುವ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ ಹೇಗಿದೆ ಅಂತ ನೋಡೋಣ. ಮೈಸೂರು, ಬೆಂಗಳೂರು ಭಾಗದ ಜನರ ದಾಹ ತೀರಿಸುವ ಕೆ.ಆರ್.ಎಸ್ (K.R.S.) ಡ್ಯಾಂನಲ್ಲಿ ಸದ್ಯ 17.25 ಟಿಎಂಸಿ ನೀರಿದ್ದು, ಇದು ಅದರ ಒಟ್ಟು ಸಾಮರ್ಥ್ಯದ ಶೇಕಡಾ 35 ರಷ್ಟಾಗಿದೆ. ಇಲ್ಲಿಗೆ 7,515 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಅದೇ ರೀತಿ ಕಬಿನಿ ಜಲಾಶಯದಲ್ಲಿ 11.71 ಟಿಎಂಸಿ (ಶೇಕಡಾ 60) ಹಾಗೂ ಹೇಮಾವತಿಯಲ್ಲಿ 22.05 ಟಿಎಂಸಿ (ಶೇಕಡಾ 59) ನೀರು ಸಂಗ್ರಹವಾಗಿದೆ. ಕಾವೇರಿ ಕೊಳ್ಳದಲ್ಲಿ ಒಟ್ಟಾರೆ ಶೇಕಡಾ 49 ರಷ್ಟು (56.19 ಟಿಎಂಸಿ) ನೀರಿದ್ದು, 15,177 ಕ್ಯೂಸೆಕ್ ಒಳಹರಿವು ಇದೆ.
ನೆಮ್ಮದಿ ನೀಡಿದ ವಾಣಿ ವಿಲಾಸ ಸಾಗರ
ಮಲೆನಾಡಿನ ಜಲಾಶಯಗಳಾದ ಭದ್ರಾ ಡ್ಯಾಂನಲ್ಲಿ ಶೇಕಡಾ 45 ರಷ್ಟು (32.21 ಟಿಎಂಸಿ) ಹಾಗೂ ವಿದ್ಯುತ್ ಉತ್ಪಾದನೆಯ ಪ್ರಮುಖ ಕೇಂದ್ರವಾದ ಲಿಂಗನಮಕ್ಕಿಯಲ್ಲಿ ಶೇಕಡಾ 20 ರಷ್ಟು (30.90 ಟಿಎಂಸಿ) ನೀರು ಮಾತ್ರ ಶೇಖರಣೆಯಾಗಿದೆ. ಇದೇ ವೇಳೆ ಚಿತ್ರದುರ್ಗದ ವಾಣಿ ವಿಲಾಸ ಸಾಗರವು ಯಾವುದೇ ಒಳಹರಿವು ಇಲ್ಲದಿದ್ದರೂ ಶೇಕಡಾ 78 ರಷ್ಟು (23.68 ಟಿಎಂಸಿ) ತುಂಬಿ ನಳನಳಿಸುತ್ತಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಮಳೆ ಬರುತ್ತಿದೆ ಎಂದು ಈಗಲೇ ನೆಮ್ಮದಿಯ ನಿಟ್ಟುಸಿರು ಬಿಡುವಂತಿಲ್ಲ. ಮುಂದಿನ ದಿನಗಳಲ್ಲಿ ವರುಣ ಇನ್ನಷ್ಟು ಕೃಪೆ ತೋರಿದರೆ ಮಾತ್ರ ಜಲಾಶಯಗಳು ಸಂಪೂರ್ಣ ಭರ್ತಿಯಾಗಿ ರೈತರ ಮೊಗದಲ್ಲಿ ನೈಜ ಹರ್ಷ ಮೂಡಲು ಸಾಧ್ಯ.
Bangalore [Bangalore],Bangalore,Karnataka
Jul 14, 2026 10:18 AM IST














