Last Updated:
Manmohan Singh: ಮಾಜಿ ಪ್ರಧಾನಿ, ದಿವಂಗತ, ಡಾ. ಮನಮೋಹನ್ ಸಿಂಗ್ ಆತ್ಮಹತ್ಯೆಯ ಮಾತನ್ನಾಡಿದ್ದರಾ? ಹೀಗೊಂದು ವಿಚಾರ ಇದೀಗ ಭಾರೀ ಚರ್ಚೆಗೆ ಆಸ್ಪದ ನೀಡಿದೆ. ಇದಕ್ಕೆ ಕಾರಣ ‘India and I: A Hundred Memories, Not a Memoir’ ಎಂಬ ಪುಸ್ತಕ.
ದೆಹಲಿ: ಮಾಜಿ ಪ್ರಧಾನಿ (former Prime Minister), ದಿವಂಗತ, ಡಾ. ಮನಮೋಹನ್ ಸಿಂಗ್ (Dr. Manmohan Singh) ಆತ್ಮಹತ್ಯೆಯ ಮಾತನ್ನಾಡಿದ್ದರಾ? ಹೀಗೊಂದು ವಿಚಾರ ಇದೀಗ ಭಾರೀ ಚರ್ಚೆಗೆ ಆಸ್ಪದ ನೀಡಿದೆ. ಇದಕ್ಕೆ ಕಾರಣ ‘India and I: A Hundred Memories, Not a Memoir’ ಎಂಬ ಪುಸ್ತಕ. ಇದನ್ನು ಬರೆದಿದ್ದು ಮಾಜಿ ಮುಖ್ಯ ಚುನಾವಣಾ ಆಯುಕ್ತ (former Chief Election Commissioner) ಎಸ್.ವೈ. ಖುರೈಶಿ. ತಮ್ಮ ಈ ಪುಸ್ತಕದಲ್ಲಿ ಎಸ್‌ವೈ ಖುರೈಶಿ (S.Y. Qureshi) ಹಲವು ಸ್ಫೋಟಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
“ಇಂಡಿಯಾ ಅಂಡ್ ಐ: ಎ ಹಂಡ್ರೆಡ್ ಮೆಮೊರೀಸ್, ನಾಟ್ ಎ ಮೆಮೊಯಿರ್” ಎಂಬ ಶೀರ್ಷಿಕೆಯ ತಮ್ಮ ಪುಸ್ತಕದಲ್ಲಿ, ಮಾಜಿ ಸಿಇಸಿ ಎಸ್‌ವೈ ಖುರೈಶಿ ಅವರು 2012 ರ ಉತ್ತರ ಪ್ರದೇಶದ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸಚಿವರು ಮಾಡಿದ ಕೆಲವು ಹೇಳಿಕೆಗಳ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ ನಂತರ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಅಂದಿನ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ತಮ್ಮ ಭಾಷಣದಲ್ಲಿ ಮುಸ್ಲಿಂ ಮೀಸಲಾತಿ ಹೆಚ್ಚಳದ ಬಗ್ಗೆ ಭರವಸೆ ನೀಡಿದ್ದರು. ತಮ್ಮ ಪಕ್ಷ ಅಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಇರುವ ಮೀಸಲಾತಿಯನ್ನು ಶೇ. 4.5 ರಿಂದ ಶೇ. 9 ಕ್ಕೆ ಹೆಚ್ಚಿಸಲಾಗುವುದು ಎಂದು ಖುರ್ಷಿದ್ ತಮ್ಮ ಭಾಷಣದಲ್ಲಿ ಭರವಸೆ ನೀಡಿದ್ದರು.
ರಾಜ್ಯ ಚುನಾವಣೆಗಳ ಪ್ರಚಾರದ ಸಮಯದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ್ದಕ್ಕಾಗಿ ಸಲ್ಮಾನ್ ಖುರ್ಷಿದ್ ಅವರ ಈ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ಬಗ್ಗೆ ತಕ್ಷಣವೇ ದೂರು ನೀಡಿತು, ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಮತ್ತು ಎಂಸಿಸಿ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಯಾವುದೇ ಹೊಸ ಯೋಜನೆಯನ್ನು ಘೋಷಿಸಲಾಗುವುದಿಲ್ಲ ಎಂದು ಷರತ್ತು ವಿಧಿಸಿತು ಎಂದು ಖುರೈಶಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ನಾಲ್ಕು ದಿನಗಳ ಕಾಲ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ವಾದ ಪ್ರತಿವಾದಗಳನ್ನು ಕೇಳಿದ ನಂತರ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಯನ್ನು ಚುನಾವಣಾ ಆಯೋಗ ಖಂಡಿಸಿತು. ನೀತಿ ಸಂಹಿತೆ ಅಡಿಯಲ್ಲಿ ಲಭ್ಯವಿರುವ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳೋ ಭರವಸೆ ನೀಡಿತು. ಇದರ ನಂತರ ಸಲ್ಮಾನ್ ಖುರ್ಷಿದ್ ಸೇರಿದಂತೆ ಅಂದಿನ ಕೇಂದ್ರ ಸಚಿವರು ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಚುನಾವಣಾ ಆಯೋಗವು ದುರಹಂಕಾರ ಅಥವಾ ನಿರಂಕುಶವಾಗಿದೆ ಎಂದು ಕಾಂಗ್ರೆಸ್‌ನಲ್ಲಿ ಹಲವು ನಾಯಕರು, ಸಚಿವರು ಕಿಡಿಕಾರಿದ್ದಾಗಿ ಪುಸ್ತಕದಲ್ಲಿ ಬರೆದಿದ್ದಾರೆ.
ಆಗ ಪ್ರಧಾನಮಂತ್ರಿಗಳ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಹರೀಶ್ ಖರೆ ಅವರಿಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದನ್ನು ಅವರು ನೆನಪಿಸಿಕೊಂಡರು. ಎಸ್‌ವೈ ಖುರೈಷಿಯವರ ಮಾತನ್ನು ಕೇಳಿದ ನಂತರ, ಖಾರೆ ಈ ವಿಷಯವನ್ನು ಪ್ರಧಾನ ಮಂತ್ರಿಯವರಿಗೆ ತಿಳಿಸಬೇಕೇ ಎಂದು ಕೇಳಿದರು, ಅದಕ್ಕೆ ಮಾಜಿ ಸಿಇಸಿ “ಹೌದು” ಎಂದು ಹೇಳಿದ್ದರಂತೆ.
ಮರುದಿನ, RAX ಅಂದರೆ ನಿರ್ಬಂಧಿತ ಪ್ರವೇಶ ವಿನಿಮಯ ಫೋನ್ ರಿಂಗಾಯಿತು. ‘ಪ್ರಧಾನಿ ನಿಮ್ಮೊಂದಿಗೆ ತುರ್ತಾಗಿ ಮಾತನಾಡಲು ಬಯಸುತ್ತಾರೆ’ ಎಂದರು. ಕೆಲವು ಕ್ಷಣಗಳ ನಂತರ, ಡಾ. ಮನಮೋಹನ್ ಸಿಂಗ್ ಕರೆಗೆ ಬಂದರು, ಅವರ ಧ್ವನಿ ಆತಂಕದಿಂದ ಕೂಡಿತ್ತು: ‘ಖುರೈಶಿ ಜಿ, ನಾನು ನಿಮ್ಮನ್ನು ತುರ್ತಾಗಿ ನೋಡಬಹುದೇ?’ ಅಂತ ಕೇಳಿದ್ರು. ನಾನು ಹೇಳಿದೆ. ‘ಸರ್, ನೀವು ಪ್ರಧಾನಿ, ನೀವು ಹೇಳಿದಾಗಲೆಲ್ಲಾ ನಾನು ಬರುತ್ತೇನೆ. ನಾವು ಸಂಜೆ 7 ಗಂಟೆಗೆ ಸಮಯ ನಿಗದಿಪಡಿಸಿದ್ದೇವೆ” ಎಂದು ಪುಸ್ತಕದಲ್ಲಿ ಬರೆದಿದ್ದಾರೆ.
ಭೇಟಿಯ ವೇಳೆ ಮಾತನಾಡಿದ್ದ ಮನಮೋಹನ್ ಸಿಂಗ್, ಹರೀಶ್ ನೀವು ಹೇಳಿದ್ದನ್ನು ನನಗೆ ಹೇಳಿದ್ದಾರೆ. ನೀವು ಹಾಗೆ ಭಾವಿಸಿದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಮನಮೋಹನ್ ಸಿಂಗ್ ಹೇಳಿದ್ರಂತೆ. ಚುನಾವಣಾ ಆಯೋಗವು ಭಾರತದ ಹೆಮ್ಮೆಯಷ್ಟೇ ಅಲ್ಲ; ಅದು ನಮ್ಮ ಪ್ರಜಾಪ್ರಭುತ್ವದ ಆತ್ಮ. ನಾವು ಅದನ್ನು ಕಳೆದುಕೊಂಡರೆ, ನಾವು ಎಲ್ಲವನ್ನೂ ಕಳೆದುಕೊಳ್ಳುತ್ತೇವೆ ಎಂದು ಡಾ. ಮನಮೋಹನ್ ಸಿಂಗ್ ಹೇಳಿದ್ದನ್ನು ಖುರೈಷಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.














