Last Updated:
ದೇವಿ ಲಕ್ಷ್ಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಧಾರ್ಮಿಕ ಭಾವನೆಗಳನ್ನ ಉದ್ದೇಶಪೂರ್ವಕವಾಗಿ ಅವಮಾನಿಸಿ ಅಶಾಂತಿ ಉಂಟು ಮಾಡಿದ್ದಾರೆ.
ಬೆಂಗಳೂರು (ಜು.09): ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ (Aryavardhan Guruji) ವಿರುದ್ಧ ಶಂಕರಪುರಂ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದ್ದು, ಗುರೂಜಿಗೆ ಬಂಧನ ಭೀತಿ ಎದುರಾಗಿದೆ. ಆರ್ಯವರ್ಧನ್ ಗುರೂಜಿ ವಿರುದ್ಧ ದೂರು ಕೊಟ್ಟವರು ಯಾರು? ಮಹಿಳೆ (Women) ಹಾಗೂ ಮಹಾಲಕ್ಷ್ಮಿ ಬಗ್ಗೆ ಆಡಿದ ಆ ಮಾತು ಗುರೂಜಿಗೆ (Guruji) ಮುಳುವಾಯ್ತಾ?
ಮಹಿಳೆಯರು ಮತ್ತು ಧರ್ಮಕ್ಕೆ ಧಕ್ಕೆ ತರುವಂತಹ ಪದಗಳನ್ನ ಬಳಸಿದ್ದಕ್ಕೆ ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ವಿರುದ್ಧ ಕೇಸ್ ದಾಖಲಾಗಿದೆ. ಸುಮನ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಶಂಕರಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೇವಿ ಲಕ್ಷ್ಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಧಾರ್ಮಿಕ ಭಾವನೆಗಳನ್ನ ಉದ್ದೇಶಪೂರ್ವಕವಾಗಿ ಅವಮಾನಿಸಿ ಅಶಾಂತಿ ಉಂಟು ಮಾಡಿದ್ದಾರೆ. ಅದ್ದರಿಂದ ಆರ್ಯವರ್ಧನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ.
ಈ ಮೊದಲು ದೂರು ಪಡೆದು ಎಲ್ಪಿಟಿ ದಾಖಲಿಸಿದ ಪೊಲೀಸರು, ನಂತರ ಕಾನೂನು ತಜ್ಞರ ಅಭಿಪ್ರಾಯ ಪಡೆದು ಎಫ್ಐಆರ್ ದಾಖಲು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ಹೇಳಿಕೆ ಸಂಗ್ರಹಿಸಿದ್ದು, ಶಂಕರಪುರಂ ಪೊಲೀಸರಿಂದ ವಿಡಿಯೋ ಪರಿಶೀಲನೆ ಕಾರ್ಯ ನಡೆಸಿದೆ.
ಆರ್ಯವರ್ಧನ್ ಗುರೂಜಿ ಕ್ರಿಸ್ಟಲ್ ನ್ಯೂಮರಾಲಜಿಸ್ಟ್, ಇವರು ಖಾಸಗಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರಿಗೆ ಮತ್ತು ಧರ್ಮಕ್ಕೆ ಧಕ್ಕೆ ತರುವಂತಹ ಅಸಭ್ಯ ಶಬ್ದಗಳನ್ನು ಉಪಯೋಗಿಸಿ ಮಾತನಾಡಿರುತ್ತಾರೆ. ಮಾನವ ಈ ಒಂದು ಅಂಗದಲ್ಲಿ ಮಹಾಲಕ್ಷ್ಮಿ ನೆಲೆಸಿದ್ದು, ಪೂಜಿಸಬೇಕು ಎಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದು ಇದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುವ, ಮಹಿಳೆಯ ಶಾರೀರಿಕ ಅಥವಾ ಮಾತಿನ ಮೂಲಕ ಅವಮಾನ ಮಾಡುವುದಾಗಿರುತ್ತದೆ
ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿ ಅಶಾಂತಿ ಹುಟ್ಟಿಸುವುದಾಗಿರುತ್ತದೆ. ಆದ್ದರಿಂದ ಸದರಿ ಆರ್ಯವರ್ಧನ್ ಗುರೂಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಎಲ್.ಪಿ.ಟಿ ನಂಬರ್ 74/2026 ರಲ್ಲಿ ನಮೂದಿಸಿ, ಪಿರ್ಯಾದುದಾರರಿಗೆ ನೊಟೀಸ್ ನೀಡಿ ಆರ್ಯವರ್ಧನ್ ಗುರೂಜಿ ಮಾತನಾಡಿರುವ ವಿಡಿಯೋ ಪಡೆದು ಪರಿಶೀಲಿಸಿ, ಕಾನೂನು ಅಧಿಕಾರಿಗಳಿಂದ ಅಭಿಪ್ರಾಯ ವರದಿ ಪಡೆದು ಪ್ರಕರಣ ದಾಖಲಾಗಿದೆ.
(ವರದಿ: ಮುನಿರಾಜು, ನ್ಯೂಸ್18 ಕನ್ನಡ, ಬೆಂಗಳೂರು)














