Last Updated:
ಇಂಗ್ಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ಭಾರತ ಸೋಲು. ರವಿ ಬಿಷ್ಣೋಯ್ 17ನೇ ಓವರ್ನಲ್ಲಿ 29 ರನ್ ನೀಡಿ ಸೋಲಿಗೆ ಕಾರಣರಾದರು. ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದರು.
ಭಾರತ ತಂಡದ (Team India) ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬೌಲಿಂಗ್ನಲ್ಲಿ ಅನುಭವಿಸಿದ ವೈಫಲ್ಯ ಸೋಲಿನ ರುಚಿ ಕಾಣುವಂತೆ ಮಾಡಿದೆ. ಅದರಲ್ಲೂ ಇನ್ನಿಂಗ್ಸ್ನ ಡೆತ್ ಓವರ್ಗಳಲ್ಲಿ ಶಿಸ್ತು ಇಲ್ಲದೆ ಬೌಲಿಂಗ್ (Bowling) ಮಾಡಿದ್ದರಿಂದ ಬೆಲೆ ತೆರಬೇಕಾಯಿತು. ಮುಂಬರುವ ಪಂದ್ಯಗಳಲ್ಲಿ ಇವೇ ತಪ್ಪುಗಳನ್ನು ಪುನರಾವರ್ತನೆ ಮಾಡದೆ ಮತ್ತೆ ಕಮ್ಬ್ಯಾಕ್ ಮಾಡಬೇಕು ಎಂದು ಟೀಂ ಇಂಡಿಯಾ ಅಭಿಮಾನಿಗಳು (Fans) ಆಶಿಸುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಯಾರು ಊಹೆ ಮಾಡದ ರೀತಿಯಲ್ಲಿ ಸೋಲುಂಡಿತ್ತು. ಗೆಲುವು ಸನಿಹ ಇದ್ದ ಟೀಂ ಇಂಡಿಯಾ ಏಕಾಏಕಿ ಸೋಲಿನ ದವಡೆ ಸಿಲುಕಿತ್ತು. ಇದರೊಂದಿಗೆ ಸರಣಿಯಲ್ಲಿ ಹಿನ್ನಡೆ ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ಭಾರತ ನಾಯಕ ಶ್ರೇಯಸ್ ಅಯ್ಯರ್, ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದರು. ಅಸಲಿಗೆ ಮ್ಯಾಚ್ ಎಲ್ಲಿ ಕೈತಪ್ಪಿತು, ಯಾರ ಕಾರಣದಿಂದ ಸೋಲು ಎದುರಾಯ್ತು ಎಂದು ಕ್ಯಾಪ್ಟನ್ ನೀಡಿದ ಪ್ರತಿಕ್ರಿಯೆ, ಈಗ ಕ್ರಿಕೆಟ್ ಅಭಿಮಾನಿಗಳ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ.
ಕೊನೆಯ 24 ಎಸೆತಗಳಲ್ಲಿ ಇಂಗ್ಲೆಂಡ್ ತಂಡಕ್ಕೆ 49 ರನ್ಗಳು ಬೇಕಾಗಿತ್ತು. ಕ್ರಿಸ್ನಲ್ಲಿ ಜಾಕಬ್ ಬೆಥಲ್ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದರು. ಇಂತಹ ರೋಚಕ ಕ್ಷಣಗಳಲ್ಲಿ ಶ್ರೇಯಸ್ ಅಯ್ಯರ್ 17ನೇ ಓವರ್ ಅನ್ನು ಬೌಲ್ ಮಾಡಲು ರವಿ ಬಿಷ್ಣೋಯ್ ಅವರಿಗೆ ಚೆಂಡು ನೀಡಿದ್ದರು. ಆದರೆ ಈ ಒಂದು ಓವರ್ ಟೀಂ ಇಂಡಿಯಾ ಅಭಿಮಾನಿಗಳ ಹೃದಯ ಬ್ರೇಕ್ ಆಗುವಂತೆ ಮಾಡಿತ್ತು.
ಬಿಷ್ಣೋಯ್ ಕ್ರಮಶಿಕ್ಷಣ, ಶಿಸ್ತು ಇಲ್ಲದ ಬೌಲಿಂಗ್ ಕಾರಣದಿಂದ 29 ರನ್ ನೀಡಿದ್ದರು. ಪದೇ ಪದೇ ನೋ ಬಾಲ್ ಹಾಕಿದ್ದು, ಈ ಸಂದರ್ಭವನ್ನು ಉಪಯೋಗಿಸಿಕೊಂಡು ಇಂಗ್ಲೆಂಡ್ ಬ್ಯಾಟರ್ ಸಿಕ್ಸರ್ ಗಳ ಮಳೆ ಸುರಿಸಿದ್ದರು. ಈ ಪಂದ್ಯದಲ್ಲಿ ಒಟ್ಟು 4 ಓವರ್ ಬೌಲ್ ಮಾಡಿದ ಬಿಷ್ಣೋಯ್ 60 ರನ್ಗಳು ಕೊಟ್ಟು ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಆದ್ರು ಎಂದು ಹೇಳಬಹುದು.
ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್ ಶ್ರೇಯಸ್, ಸೋಲಿನ ಬಗ್ಗೆ ಬೇಸರ ಹೊರ ಹಾಕಿದರು. ಈ ಪಂದ್ಯದಲ್ಲಿ ಎಲ್ಲಿ ತಪ್ಪು ಆಯ್ತು ಅಂತ ನಮಗೆ ಸ್ಪಷ್ಟವಾಗಿ ತಿಳಿದಿದೆ. 15ನೇ ಓವರ್ ವರೆಗೂ ನಾವು ಅತ್ಯುತ್ತಮ ಸ್ಥಾನದಲ್ಲಿದ್ದೇವು. ಆದರೆ 17ನೇ ಓವರ್ ನಮ್ಮಿಂದ ಗೆಲುವನ್ನು ದೂರ ಮಾಡಿತ್ತು. ರವಿ ಹಾಕಿದ ನೋ ಬಾಲ್ಸ್, ಅನಗತ್ಯ ಸಿಕ್ಸರ್ ಗಳೊಂದಿಗೆ ಗೇಮ್ ಇಂಗ್ಲೆಂಡ್ ಕಡೆ ಆಯ್ತು. ಏನೇ ಆದರೂ ಈ ತಪ್ಪುಗಳಿಂದ ಖಂಡಿತ ಪಾಠ ಕಲಿತುಕೊಳ್ಳಬೇಕು ಎಂದು ಹೇಳಿದರು.
ಇದೇ ಸಮಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾಕಬ್ ಬೆಥಲ್ ಇನ್ನಿಂಗ್ಸ್ ಅನ್ನು ಶ್ರೇಯಸ್ ಅಯ್ಯರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 46 ಎಸೆತಗಳಲ್ಲಿ 76 ರನ್ ಗಳಿಸಿ ಇಂಗ್ಲೆಂಡ್ ಗೆದ್ದ ರೀತಿ ಅದ್ಭುತ ಎಂದು ಬಣ್ಣಿಸಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಸ್ಯಾಮ್ ಕರನ್, ಸತತವಾಗಿ ವಿಕೆಟ್ ಪಡೆದುಕೊಂಡು ಟೀಂ ಇಂಡಿಯಾ ಸ್ಕೋರ್ 200ರ ಗಡಿದಾಟದಂತೆ ಮಾಡಿದ್ದರು. ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡಿ, ಆತನಿಗೆ ಯಾವುದೇ ಭಯ ಇಲ್ಲ, ಮುಂಬರುವ ಪಂದ್ಯಗಳಲ್ಲಿ ಖಂಡಿತ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ಶ್ರೇಯಸ್ ಅಯ್ಯರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿರುವ ಅಭಿಮಾನಿಗಳು, ಆತನಿಗೆ ಬೌಲಿಂಗ್ ಕೊಟ್ಟು ತಪ್ಪು ಮಾಡಿದೆ. ಟೀಂ ಇಂಡಿಯಾದಲ್ಲಿ 7 ತಿಂಗಳ ಬಳಿಕ ಅವಕಾಶ ಕೊಟ್ಟರೆ ನಡುನೀರಿನಲ್ಲಿ ಮುಳುಗಿಸಿದ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Jul 05, 2026 10:44 AM IST













