Last Updated:
ಮುಖ್ಯಮಂತ್ರಿ ವಿಜಯ್ (CM Vijay) ನೇತೃತ್ವದ ಸರ್ಕಾರವು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಅಧ್ಯಕ್ಷ ವೆಂಕಟ್ ಕೆ. ನಾರಾಯಣ (Venkat K. Narayana) ಅವರನ್ನು ನವದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ.
ತಮಿಳುನಾಡು ರಾಜಕೀಯದಲ್ಲಿ ಮತ್ತೊಮ್ಮೆ ಮಹತ್ವದ ಬೆಳವಣಿಗೆಯೊಂದು ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ವಿಜಯ್ (CM Vijay) ನೇತೃತ್ವದ ಸರ್ಕಾರವು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಅಧ್ಯಕ್ಷ ವೆಂಕಟ್ ಕೆ. ನಾರಾಯಣ (Venkat K. Narayana) ಅವರನ್ನು ನವದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ವೆಂಕಟ್ ಕೆ. ನಾರಾಯಣ ಅವರು ಒಂದು ವರ್ಷದ ಅವಧಿಗೆ ದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಕರ್ತವ್ಯಗಳು ಹಾಗೂ ಅಧಿಕಾರಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಈ ಹುದ್ದೆಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವೂ ಇರುವುದಾಗಿ ವರದಿಯಾಗಿದೆ.
ಕರ್ನಾಟಕ ಮೂಲದ ಉದ್ಯಮಿ ವೆಂಕಟ್ ಕೆ. ನಾರಾಯಣ ಅವರು ಸಿನಿಮಾ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ವಿಜಯ್ ಅಭಿನಯದ ಕೊನೆಯ ಸಿನಿಮಾ ಜನ ನಾಯಗನ್ ಚಿತ್ರದ ನಿರ್ಮಾಪಕರಾಗಿರುವ ಅವರು, ವಿಜಯ್ ರಾಜಕೀಯ ಪ್ರವೇಶಿಸಿದ ನಂತರವೂ ಅವರೊಂದಿಗೆ ಆಪ್ತವಾಗಿ ಕಾಣಿಸಿಕೊಂಡಿದ್ದರು.
ನವದೆಹಲಿಯಲ್ಲಿರುವ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿ ಹುದ್ದೆ ಅತ್ಯಂತ ಮಹತ್ವದ್ದಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯ ಸಾಧಿಸುವುದು, ವಿವಿಧ ಯೋಜನೆಗಳಿಗೆ ಕೇಂದ್ರದ ನೆರವು ಹಾಗೂ ಅನುದಾನ ಪಡೆಯಲು ಸಂಬಂಧಿಸಿದ ಸಚಿವಾಲಯಗಳೊಂದಿಗೆ ಸಂಪರ್ಕದಲ್ಲಿರುವುದು, ಮುಖ್ಯಮಂತ್ರಿಯವರ ದೆಹಲಿ ಭೇಟಿಗಳನ್ನು ಸಮನ್ವಯಗೊಳಿಸುವುದು ಹಾಗೂ ಸಂಸತ್ ಅಧಿವೇಶನಗಳ ವೇಳೆ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ಮುಂದಿರಿಸುವುದು ಈ ಹುದ್ದೆಯ ಪ್ರಮುಖ ಜವಾಬ್ದಾರಿಗಳಾಗಿವೆ.
ಈ ನೇಮಕಾತಿಯ ಬಳಿಕ ಡಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ನಾಯಕರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ವಿಶೇಷವಾಗಿ ಆಡಳಿತಾತ್ಮಕ ಅನುಭವವಿಲ್ಲದ ಸಿನಿಮಾ ನಿರ್ಮಾಪಕರಿಗೆ ಇಂತಹ ಮಹತ್ವದ ಹುದ್ದೆ ನೀಡುವುದು ಸರಿಯಲ್ಲ ಎಂದು ಪ್ರತಿಪಕ್ಷಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಸರ್ಕಾರವು ಅನುಭವ ಮತ್ತು ಆಡಳಿತ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಕೆಲವು ರಾಜಕೀಯ ನಾಯಕರು ವೆಂಕಟ್ ಕೆ. ನಾರಾಯಣ ಅವರು ಕರ್ನಾಟಕ ಮೂಲದವರಾಗಿರುವ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮೇಕೆದಾಟು ಸೇರಿದಂತೆ ಹಲವು ಜಲ ವಿವಾದಗಳು ಇರುವ ಸಂದರ್ಭದಲ್ಲಿ, ಕನ್ನಡಿಗರನ್ನು ದೆಹಲಿಯಲ್ಲಿ ತಮಿಳುನಾಡಿನ ಪ್ರತಿನಿಧಿಯಾಗಿ ನೇಮಿಸಿರುವುದು ಸೂಕ್ತವೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.
ಮುಖ್ಯಮಂತ್ರಿ ವಿಜಯ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡ ಕೆಲವು ನಿರ್ಧಾರಗಳು ಈಗಾಗಲೇ ರಾಜಕೀಯ ಚರ್ಚೆಗೆ ಕಾರಣವಾಗಿದ್ದವು. ಇದೀಗ ವೆಂಕಟ್ ಕೆ. ನಾರಾಯಣ ಅವರ ನೇಮಕಾತಿಯೂ ಅದೇ ಸಾಲಿಗೆ ಸೇರಿದ್ದು, ಸರ್ಕಾರದ ಆಡಳಿತಾತ್ಮಕ ಆದ್ಯತೆಗಳ ಬಗ್ಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ.
Bangalore [Bangalore],Bangalore,Karnataka













