Last Updated:
Operation Ghadi: ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಭೂಕಂಪ? ಆಪರೇಷನ್ ಟೈಗರ್ ನಂತರ ಈಗ ಆಪರೇಷನ್ ಘಡಿ; ಮಹಾಯುತಿಯ ಮುಂದಿನ ಟಾರ್ಗೆಟ್ ಶರದ್ ಪವಾರ್? ಶರದ್ ಪವಾರ್ ಎನ್ಸಿಪಿ ಹೊಡೆಯಲು ಬಿಜೆಪಿ ಮಾಸ್ಟರ್ ಪ್ಲಾನ್, MVA ಸಭೆಗೆ 23 ಶಾಸಕರ ಗೈರು!
ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ (Maharashtra) ರಾಜಕಾರಣದಲ್ಲಿ ಆಪರೇಷನ್ ಪರ್ವ ಮುಂದುವರಿದಿದೆ. ಶಿವಸೇನೆ (ShivaSena) ಉದ್ಧವ್ ಠಾಕ್ರೆ ಬಣದ ಆರು ಸಂಸದರನ್ನು ಆಪರೇಷನ್ ಟೈಗರ್ (Operation Tiger) ಮೂಲಕ ಏಕನಾಥ್ ಶಿಂಧೆ (Eknath Shinde) ಬಣ ತನ್ನತ್ತ ಸೆಳೆದುಕೊಂಡ ಬೆನ್ನಲ್ಲೇ, ಈಗ ಮತ್ತೊಂದು ದೊಡ್ಡ ರಾಜಕೀಯ ಕಾರ್ಯಾಚರಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಅದುವೇ, ಮೂಲಗಳ ಪ್ರಕಾರ, ಮಹಾಯುತಿಯ ಮುಂದಿನ ಗುರಿ ಶರದ್ ಪವಾರ್ (Sharad Pawar) ನೇತೃತ್ವದ ಎನ್ಸಿಪಿ ಶರದ್ಚಂದ್ರ ಪವಾರ್ ಬಣ.! ಅದರಲ್ಲೂ, ಈ ಬಾರಿಯ ಕಾರ್ಯಾಚರಣೆಗೆ ಆಪರೇಷನ್ ಘಡಿ (Operation Ghadi) ಎಂದು ಹೆಸರಿಡಲಾಗಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಕೇಳಿಬರುತ್ತಿದೆ. ಆ ಕುರಿತ ವರದಿ ಇಲ್ಲಿದೆ.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಜೂನ್ 24 ರಂದು ನಡೆದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಕಾರ್ಯತಂತ್ರ ಸಭೆಗೆ ಒಟ್ಟು 23 ಶಾಸಕರು ಗೈರು ಹಾಜರಾಗಿದ್ದರು. ಗೈರಾದವರ ಪಟ್ಟಿಯಲ್ಲಿ ಎನ್ಸಿಪಿ ಶರದ್ಚಂದ್ರ ಪವಾರ್ ಬಣ, ಕಾಂಗ್ರೆಸ್ ಮತ್ತು ಶಿವಸೇನೆ ಉದ್ಧವ್ ಬಣದ ಪ್ರಮುಖ ಶಾಸಕರಿದ್ದಾರೆ ಎನ್ನಲಾಗಿದೆ.
ಎನ್ಸಿಪಿ ಎಸ್ಪಿ ಹಿರಿಯ ನಾಯಕ ಜಯಂತ್ ಪಾಟೀಲ್, ಶಾಸಕ ರೋಹಿತ್ ಪವಾರ್, ಕಾಂಗ್ರೆಸ್ ನಾಯಕರಾದ ನಾನಾ ಪಟೋಲೆ, ವಿಜಯ್ ವಡೆಟ್ಟಿವಾರ್ ಸೇರಿದಂತೆ ಘಟಾನುಘಟಿಗಳು ಸಭೆಗೆ ಬಂದಿರಲಿಲ್ಲ. ಸಭೆಯನ್ನು ಜೂನ್ 23 ರಿಂದ 24 ಕ್ಕೆ ಹಠಾತ್ತನೆ ಮುಂದೂಡಿದ್ದರಿಂದ ಮೊದಲೇ ನಿಗದಿಯಾಗಿದ್ದ ವೈಯಕ್ತಿಕ ಕೆಲಸಗಳ ಕಾರಣ ಬರಲಾಗಲಿಲ್ಲ ಎಂದು ಜಯಂತ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಕೆಲವರು ಆರೋಗ್ಯ ಸಮಸ್ಯೆ ಮತ್ತು ಕ್ಷೇತ್ರದ ತುರ್ತು ಕೆಲಸಗಳನ್ನು ಕಾರಣ ನೀಡಿದ್ದಾರೆ.
ಎನ್ಸಿಪಿ ಶಾಸಕ ಧರ್ಮರಾವ್ ಆತ್ರಂ ಅವರು ಶರದ್ ಪವಾರ್ ಬಣದ ಎಂಟು ಸಂಸದರಲ್ಲಿ ಐವರು ಡಿಸೆಂಬರ್ ಒಳಗೆ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ನೇತೃತ್ವದ ಎನ್ಸಿಪಿ ಸೇರಲು ಸಿದ್ಧರಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶರದ್ ಪವಾರ್, ಒಬ್ಬ ಸಂಸದ ಅಥವಾ ಶಾಸಕನೂ ಪಕ್ಷಾಂತರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸುಪ್ರಿಯಾ ಸುಳೆ ಕೂಡ, ನಮ್ಮ ಎಂಟೂ ಸಂಸದರು ನಿನ್ನೆ ಒಗ್ಗಟ್ಟಾಗಿದ್ದೆವು, ಇಂದು ಇದ್ದೇವೆ, ನಾಳೆಯೂ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಬಾಬಾ ಆತ್ರಂ ಬಳಿ ಐವರ ಪಟ್ಟಿ ಇದ್ದರೆ ಹೆಸರು ಬಹಿರಂಗಪಡಿಸಲಿ, ನನ್ನನ್ನು ಯಾಕೆ ಕರೆದೊಯ್ಯುತ್ತಿಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.
ಎನ್ಸಿಪಿ ಶರದ್ಚಂದ್ರ ಪವಾರ್ ಬಣದ ಮೇಲೆ ರಾಜಕೀಯ ನಿಗಾ ಇಡಲು ಕಾರಣವಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಮೂರನೇ ಎರಡರಷ್ಟು ಶಾಸಕರು ಒಟ್ಟಾಗಿ ಪಕ್ಷ ಬಿಟ್ಟರೆ ಮಾತ್ರ ಅದು ಕಾನೂನುಬದ್ಧ. ಸದ್ಯ ಎನ್ಸಿಪಿ ಎಸ್ಪಿ 8 ಸಂಸದರು ಮತ್ತು 10 ಶಾಸಕರನ್ನು ಹೊಂದಿದೆ. ಏಕರೂಪ ನಾಗರಿಕ ಸಂಹಿತೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಂತಹ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ಅಂಗೀಕರಿಸಲು ಬಿಜೆಪಿ ನೇತೃತ್ವದ ಎನ್ಡಿಎಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಬೇಕು. ಇದಕ್ಕಾಗಿ ಎನ್ಸಿಪಿ ಎಸ್ಪಿ ಸಂಸದರ ಬೆಂಬಲ ಅಗತ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಸಭೆಯಲ್ಲಿ ಶಿವಸೇನೆ ಉದ್ಧವ್ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈತ್ರಿಕೂಟದ ಒಗ್ಗಟ್ಟು ಹೇಳಿಕೆಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ತಮ್ಮ ಪಕ್ಷದ ಆರು ಲೋಕಸಭಾ ಸಂಸದರು ಶಿಂಧೆ ಬಣಕ್ಕೆ ವಲಸೆ ಹೋದ ಕೆಲವೇ ದಿನಗಳಲ್ಲಿ ಎಂವಿಎ ಸಭೆಗೆ ಈ ಮಟ್ಟದ ಗೈರು ಹಾಜರಿ ನಾಯಕರನ್ನು ಚಿಂತೆಗೀಡು ಮಾಡಿದೆ. ಮೈತ್ರಿಕೂಟದೊಳಗೆ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
Mumbai,Maharashtra













