Last Updated:
ನಾಳೆ ನಡೆಯಲಿರುವ ನೀಟ್ ಮರು ಪರೀಕ್ಷೆಯನ್ನು ಬಂಡವಾಳ ಮಾಡಿಕೊಳ್ಳಲು ಲೀಕಾಸುರರು, ನೀಟ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬೇಕಾದರೆ ದುಡ್ಡು ಕೊಡಿ ಅಂತಾ ಸುಳ್ಳು ಮೆಸೇಜ್ಗಳನ್ನು ಕಳುಹಿಸಿ ವಿದ್ಯಾರ್ಥಿಗಳಿಗೆ ಪಂಗನಾಮ ಹಾಕಲು ಮುಂದಾಗಿದ್ದಾರೆ.
ಬೆಂಗಳೂರು: ನಾಳೆ ದೇಶಾದ್ಯಂತ ನೀಟ್ ಮರು ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆ ಆಯೋಜನೆ ಮಾಡಿದೆ. ರೀ ಎಕ್ಸಾಮ್ ಹಿನ್ನೆಲೆ ಎನ್ಟಿಎ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಹೀಗಿದ್ದರೂ ಕೂಡ ಕೆಲ ಕಿಡಿಗೇಡಿಗಳು ನೀಟ್ ಪ್ರಶ್ನೆ ಪತ್ರಿಕೆ ಹೆಸರಲ್ಲಿ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದಾರೆ.
ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಅಂತ NTA ಸ್ಪಷ್ಟನೆ ನೀಡಿದೆ. ಈ ಬಾರಿ ಹೈ ಸೆಕ್ಯೂರಿಟಿ ಕೊಟ್ಟಿದ್ದೀವಿ ಅಂತ ಹೇಳಿದೆ. ಆದ್ರೂ ಕೂಡಾ ವಂಚಕರು ಸಾಮಾಜಿಕ ಜಾಲತಾಣದಲ್ಲಿ ಸ್ಕ್ಯಾಮ್ ಮಾಡ್ತಿದ್ದಾರೆ ಅಂತ NTA ಹೇಳಿದೆ.
ನಾಳೆ ನೀಟ್ ಮರು ಪರೀಕ್ಷೆ ಹಿನ್ನೆಲೆ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಹಾಗೇ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್, ಸೈಬರ್ ಮತ್ತು ಕಂಪ್ಯೂಟರ್ ಸೆಂಟರ್ ಬಂದ್ ಮಾಡಲು ಸೂಚನೆ ನೀಡಿದ್ದಾರೆ.
ಮರು ಪರೀಕ್ಷೆಗೆ NTA ಕೈಗೊಂಡ ಕ್ರಮಗಳೇನು?
- ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ
- ಮರುಪರೀಕ್ಷೆಯ ದಿನ, ಕಡ್ಡಾಯ ದೈಹಿಕ ತಪಾಸಣೆ ಇರಲಿದೆ
- ಅಭ್ಯರ್ಥಿಗಳು ಬೆರಳಚ್ಚು ಅಥವಾ ಮುಖ ಗುರುತಿಸುವಿಕೆ ಮೂಲಕ ಬಯೋಮೆಟ್ರಿಕ್ ಪರಿಶೀಲನೆಗೊಳಗಾಗಬೇಕು
- ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಪರೀಕ್ಷಾ ಕೊಠಡಿಗೆ ಪ್ರವೇಶ
- ಪರೀಕ್ಷೆ ಆರಂಭವಾಗುವ ಮೊದಲು ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು
- ಡ್ರೆಸ್ ಕೋಡ್ ಜಾರಿ
ಪ್ರಶ್ನೆಪತ್ರಿಕೆ ಸಾಗಾಟದಲ್ಲಿ ಭದ್ರತೆ
- ಭಾರತೀಯ ವಾಯುಪಡೆಯ ಮೂಲಕ ಪ್ರಶ್ನೆಪತ್ರಿಕೆಗಳ ಸಾಗಾಟ
- ಕೇಂದ್ರ ಪಡೆಗಳ (CRPF ಮತ್ತು CISF) ಕಾವಲು
- ಎಐ ಆಧಾರಿತ ಸಿಸಿಟಿವಿ ನಿಗಾ ಮತ್ತು ಕಟ್ಟುನಿಟ್ಟಾದ ಬಯೋಮೆಟ್ರಿಕ್ ಪರಿಶೀಲನೆ
- ಪರೀಕ್ಷೆ ಕೇಂದ್ರಗಳಲ್ಲಿ ಭದ್ರತೆ
- ಪರೀಕ್ಷಾ ಕೇಂದ್ರದ ಪ್ರವೇಶದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ
- ಬಯೋಮೆಟ್ರಿಕ್ ಮತ್ತು ಮುಖದ ಗುರುತಿಸುವಿಕೆ
- ಅಭ್ಯರ್ಥಿಗಳ ನಕಲು ತಡೆಯಲು ಆಧಾರ್-ಲಿಂಕ್ಡ್ ಬಯೋಮೆಟ್ರಿಕ್, ಬೆರಳಚ್ಚು (ಮತ್ತು ಲೈವ್ ಫೇಸ್ ರೆಕಗ್ನಿಷನ್ ಕಡ್ಡಾಯ
- ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾಗಳು
- ಪ್ರತಿ ಪರೀಕ್ಷಾ ಕೊಠಡಿಯಲ್ಲೂ 4 ಹಂತದ ಸಿಸಿಟಿವಿ ಕಣ್ಗಾವಲು -ಕೇಂದ್ರ ಕಚೇರಿಯಿಂದ ನೇರವಾಗಿ ಮೇಲ್ವಿಚಾರಣೆ
ಸೋರಿಕೆ ತಡೆಗಟ್ಟುವ ಕ್ರಮಗಳು
- ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ
- ಪತ್ರಿಕೆ ಸೋರಿಕೆ ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯಲು NTA ವಿಶೇಷ ಜಾಗ್ರತಾ ದಳ ರಚನೆ
- ವದಂತಿಗಳಿಗೆ ಕಿವಿಗೊಡದಿರಲು ಸೂಚನೆ
- ಅಕ್ರಮಗಳಿಗೆ ಕಠಿಣ ಶಿಕ್ಷೆ
- ಅಭ್ಯರ್ಥಿಗಳು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ
- ಈ ಬಾರಿ ನೀಟ್ ಪರೀಕ್ಷೆ ಸಂಪೂರ್ಣ ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿರಲು ಸರ್ಕಾರವು ಉನ್ನತ ಮಟ್ಟದಲ್ಲಿ ನಿಗಾ
(ವರದಿ: ಪ್ರಗತಿ ಶೆಟ್ಟಿ, ನ್ಯೂಸ್18 ಕನ್ನಡ, ಬೆಂಗಳೂರು)
Bangalore,Karnataka













