ಭಾರತ ‘A’ ಮತ್ತು ಅಫ್ಘಾನಿಸ್ತಾನ ‘A’ ತಂಡಗಳು ತ್ರಿಕೋನ ಏಕದಿನ ಸರಣಿಯಲ್ಲಿ ಆತಿಥೇಯ ರಾಷ್ಟ್ರವಾದ ಶ್ರೀಲಂಕಾ ವಿರುದ್ಧ ಸ್ಪರ್ಧಿಸುತ್ತಿವೆ. ಸರಣಿಯ ಆರಂಭದಲ್ಲಿ, ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿದರೆ, ನಂತರದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ರೋಚಕ ಸೋಲು ಕಂಡಿತ್ತು. ನಂತರ, ಶ್ರೀಲಂಕಾ ವಿರುದ್ಧದ ಮತ್ತೊಂದು ಪಂದ್ಯದಲ್ಲಿ, ತಿಲಕ್ ವರ್ಮಾ ತಂಡವು ಸೂಪರ್ ಓವರ್ನಲ್ಲಿ ಸೋಲನ್ನು ಅನುಭವಿಸಿತು.
ಪರಿಣಾಮವಾಗಿ, ಫೈನಲ್ಗಾಗಿ ಸ್ಪರ್ಧೆಯಲ್ಲಿ ಉಳಿಯಲು, ಬುಧವಾರದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆಲುವು ಅತ್ಯಗತ್ಯವಾಗಿತ್ತು. ಇದೀಗ ತಿಲಕ್ ವರ್ಮಾ ನೇತೃತ್ವದ ತಂಡ ಭಾರೀ ಅಂತರದಿಂದ ಗೆದ್ದು ಅತ್ಯುತ್ತಮ ರನ್ರೇಟ್ ಪಡೆದು ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಎ ತಂಡಕ್ಕೆ ಆರಂಭಿಕ ಆಟಗಾರರಾದ ಪ್ರಿಯಾಂಶ್ ಆರ್ಯ ಅರ್ಧಶತಕ (58, 42 ಎಸೆತ, 9 ಬೌಂಡರಿ, 1 ಸಿಕ್ಸರ್) ಮತ್ತು ವೈಭವ್ ಸೂರ್ಯವಂಶಿ (38, 28 ಎಸೆತ, 4 ಬೌಂಡರಿ, 2 ಸಿಕ್ಸರ್) ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ರುತುರಾಜ್ ಗಾಯಕ್ವಾಡ್ 30 ರನ್ ಗಳಿಸಿದರೆ, ನಾಯಕ ತಿಲಕ್ ವರ್ಮಾ (59, 75 ಎಸೆತ, 5 ಬೌಂಡರಿ) ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕುಮಾರ್ ಕುಶಾಗ್ರ (58, 67 ಎಸೆತ, 5 ಬೌಂಡರಿ) ಅರ್ಧಶತಕಗಳೊಂದಿಗೆ ಮಿಂಚಿದರು.
ನಿಶಾಂತ್ ಸಿಂಧು ಅಜೇಯ 21 ಮತ್ತು ವಿಪ್ರಜ್ ನಿಗಮ್ 30 ರನ್ಗಳಿಸಿ ಭಾರತ 300ರ ಗಡಿ ದಾಟಲು ನೆರವಾದರು.
ಅಫ್ಘಾನ್ ಬೌಲರ್ಗಳಲ್ಲಿ ಫರೀದೂನ್ ದಾವೂದ್ಜೈ, ಅಬ್ದುಲ್ಲಾ ಅಹ್ಮದ್ಜೈ ಮತ್ತು ಫರ್ಮಾನುಲ್ಲಾ ಸಫಿ ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರೆ, ಜಹೀರ್ ಖಾನ್ ಒಂದು ವಿಕೆಟ್ ಪಡೆದರು.
320 ರನ್ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಅಫ್ಘಾನಿಸ್ತಾನ ಆರಂಭದಲ್ಲೇ ಆಘಾತ ಅನುಭವಿಸಿತು. ಅಗ್ರ ಕ್ರಮಾಂಕದಲ್ಲಿ, ಆರಂಭಿಕ ಆಟಗಾರ ಹಸನ್ ಐಸಾಖಿಲ್ (14) ಮತ್ತು ಒನ್-ಡೌನ್ ಬ್ಯಾಟರ್ ಖಾಲಿದ್ ತನಿವಾಲ್ (13) ಬೇಗನೆ ನಿರ್ಗಮಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಮತ್ತು ನಾಯಕ ಇಮ್ರಾನ್ ಮಿರ್ 32 ರನ್ಗಳಿಸಿ ಪವರ್ ಪ್ಲೇ ಒಳಗೆ ಪೆವಿಲಿಯನ್ ಸೇರಿಕೊಂಡರು.
ಉಳಿದ ಬ್ಯಾಟ್ಸ್ಮನ್ಗಳಲ್ಲಿ, ಫೈಸಲ್ ಶಿನೋಜಾಡಾ (46) ಮತ್ತು ಬಹೀರ್ ಶಾ (57) ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ತಕ್ಕಮಟ್ಟಿನ ಪ್ರಯತ್ನ ನಡೆಸಿದರು. ಆದರೆ ಉಳಿದ ಆಟಗಾರರು ಭಾರತೀಯ ಬೌಲರ್ಗಳ ದಾಳಿಗೆ ಹೋರಾಟ ನೀಡುವಲ್ಲಿ ವಿಫಲವಾದರು. ಮೊಹಮ್ಮದ್ ಇಶಾಕ್ (16) ಮತ್ತು ಫರ್ಮಾನುಲ್ಲಾ ಸಫಿ (17), ಶಮ್ಸ್-ಉರ್-ರೆಹಮಾನ್ (8), ಅಬ್ದುಲ್ಲಾ ಅಹ್ಮದ್ಜೈ (6), ಮತ್ತು ಜಹೀರ್ ಖಾನ್ (4) ಹೆಚ್ಚು ಸಮಯ ಕ್ರೀಸ್ನಲ್ಲಿ ನಿಲ್ಲಲಾಗದೆ ಪೆವಿಲಿಯನ್ ಪರೇಡ್ ನಡೆಸಿದರು.
ಪರಿಣಾಮವಾಗಿ, ಅಫ್ಘಾನಿಸ್ತಾನ 36.5 ಓವರ್ಗಳಲ್ಲಿ 218 ರನ್ಗಳಿಗೆ ಆಲೌಟ್ ಆಯಿತು. ಭಾರತ 101 ರನ್ಗಳ ಅಂತರದಿಂದ ಜಯಭೇರಿ ಬಾರಿಸಿತು. ಭಾರತೀಯ ಬೌಲರ್ಗಳಲ್ಲಿ, ನಿಶಾಂತ್ ಸಿಂಧು ನಾಲ್ಕು ವಿಕೆಟ್ಗಳನ್ನು ಪಡೆಯುವ ಮೂಲಕ ಮಿಂಚಿದರೆ, ಯಶ್ ಠಾಕೂರ್ ಎರಡು ವಿಕೆಟ್ಗಳನ್ನು ಪಡೆದರು. ಅನ್ಶುಲ್ ಕಾಂಬೋಜ್, ವಿಪ್ರಜ್ ನಿಗಮ್, ಸೂರ್ಯಾಂಶ್ ಶೆಡ್ಗೆ ಮತ್ತು ಅನುಕುಲ್ ರಾಯ್ ತಲಾ ಒಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ, ಭಾರತ ನಾಲ್ಕು ಅಂಕಗಳನ್ನು ಗಳಿಸಿದೆ ಮತ್ತು +0.797 ನಿವ್ವಳ ರನ್ ದರವನ್ನು ಹೊಂದಿದೆ. ಶ್ರೀಲಂಕಾ (+0.494) ಮತ್ತು ಅಫ್ಘಾನಿಸ್ತಾನ (-1.983) ಉಳಿದ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಶ್ರೀಲಂಕಾ ಪಂದ್ಯವನ್ನ ಹೇಗೆ ಗೆದ್ದರೆ ಫೈನಲ್ ಪ್ರವೇಶಿಸಲಿದೆ. ಆದರೆ ಅಫ್ಘಾನಿಸ್ತಾನ ತಂಡಕ್ಕೆ 90ರಿಂದ 100 ರನ್ಗಳ ಜಯ, ಅಥವಾ ಚೇಸಿಂಗ್ ಮಾಡಿದರೆ ಗುರಿಯನ್ನ 32-33 ಓವರ್ಗಳಲ್ಲಿ ತಲುಪಬೇಕಾಗಿದೆ. ಈ ಅಂತರದಿಂದ ಗೆದ್ದರೆ ಶ್ರೀಲಂಕಾ ತಂಡವನ್ನ ಹಿಂದಿಕ್ಕಿ ಫೈನಲ್ ಪ್ರವೇಶಿಸಬಹುದು. ಸಣ್ಣ ಅಂತರದಿಂದ ಗೆದ್ದರೆ ನೆಟ್ ರೇಟ್ ಕಳಪೆ ಇರುವುದರಿಂದ ಟೂರ್ನಿಯಿಂದ ಹೊರ ಬೀಳಲಿದೆ. ಆದರೆ ಭಾರತ ತಂಡಕ್ಕೆ ಕೊನೆಯ ಲೀಗ್ ಪಂದ್ಯದಲ್ಲಿ ಫಲಿತಾಂಶ ಏನೇ ಆದರೂ ಫೈನಲ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ.












