Last Updated:
Delhi Hotel Fire: ದೆಹಲಿಯ ಮಾಳವೀಯ ನಗರದ ಹೋಟೆಲ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಜನ ಸಾವನ್ನಪ್ಪಿದ್ದು, ತಮ್ಮ ಅಂಗಡಿಯ ಹಾಸಿಗೆಗಳನ್ನು ರಸ್ತೆಯಲ್ಲಿ ಹಾಸುವ ಮೂಲಕ ತಂದೆ ಮತ್ತು ಮಗ 8 ಜನರ ಪ್ರಾಣ ಉಳಿಸಿದ ಸಾಹಸದ ಕಥೆ ಇಲ್ಲಿದೆ.
ನವದೆಹಲಿ: ದೆಹಲಿಯ (Delhi) ಮಾಳವೀಯ ನಗರದ (Malviya Nagar) ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್ ಒಂದರಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ 21 ಮಂದಿ ಪ್ರಾಣ ಕಳೆದುಕೊಂಡರೆ, 58ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಈ ಕರುಣಾಜನಕ ಹಾಗೂ ಭಯಾನಕ ದುರಂತದ ನಡುವೆಯೂ ಮಾನವೀಯತೆ ಮೆರೆದ ತಂದೆ ಮತ್ತು ಮಗನ ಸಾಹಸಗಾಥೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಸ್ವಂತ ನಷ್ಟದ ಬಗ್ಗೆ ಯೋಚಿಸದೆ, ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ ಮೆರೆದು ಹಲವರ ಪ್ರಾಣ ಉಳಿಸಿದ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್ ಫ್ಲೋರಿಶ್ ಸ್ಟೇ ಬಿ ಆಂಡ್ ಬಿ ಯಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 8.30ರ ಸುಮಾರಿಗೆ ಈ ಭೀಕರ ದುರಂತ ಸಂಭವಿಸಿದೆ. ಈ ಹೋಟೆಲ್ ಐದು ಅಂತಸ್ತುಗಳನ್ನು ಹೊಂದಿದ್ದು, ಬೆಂಕಿಯ ತೀವ್ರತೆ ಹೆಚ್ಚಾದಂತೆ ಕಪ್ಪು ಹೊಗೆ ಇಡೀ ಕಟ್ಟಡವನ್ನು ಆವರಿಸಿಕೊಂಡಿತ್ತು. ಕಟ್ಟಡದ ಒಳಗೆ ಸಿಲುಕಿಕೊಂಡಿದ್ದ ಜನರು ಉಸಿರುಗಟ್ಟಿ ಪ್ರಾಣಭಯದಿಂದ ಕಿಟಕಿಗಳ ಮೂಲಕ ಕೆಳಗೆ ಜಿಗಿಯಲು ಪ್ರಾರಂಭಿಸಿದರು. ಆ ಕ್ಷಣದಲ್ಲಿ ಅಲ್ಲಿಯೇ ಪಕ್ಕದಲ್ಲಿ ಹಾಸಿಗೆ ಅಂಗಡಿ ಇಟ್ಟುಕೊಂಡಿದ್ದ ರಿಯಾಜುದ್ದೀನ್ ಮನ್ಸೂರಿ ಮತ್ತು ಅವರ ಮಗ ಅರ್ಮಾನ್ ಮನ್ಸೂರಿ ದೇವದೂತರಂತೆ ಅವರ ನೆರವಿಗೆ ಧಾವಿಸಿದರು.
ಜನರು ಮಹಡಿಯಿಂದ ಕೆಳಗೆ ಜಿಗಿಯುತ್ತಿರುವುದನ್ನು ಕಂಡ ರಿಯಾಜುದ್ದೀನ್ ಮತ್ತು ಅರ್ಮಾನ್ ತಕ್ಷಣ ತಮ್ಮ ಅಂಗಡಿಯಲ್ಲಿದ್ದ ಎಲ್ಲಾ ಹಾಸಿಗೆಗಳನ್ನು ಹೊರತಂದು ರಸ್ತೆಯ ಮೇಲೆ ಅಚ್ಚುಕಟ್ಟಾಗಿ ಹಾಸಿದರು. ಇದರಿಂದಾಗಿ ಮೇಲಿನಿಂದ ಜಿಗಿದವರು ಯಾವುದೇ ದೊಡ್ಡ ಪೆಟ್ಟುಗಳಿಲ್ಲದೆ ಪಾರಾಗಲು ಸಾಧ್ಯವಾಯಿತು. ಈ ಹಾಸಿಗೆಗಳೇ ಆ ಜೀವಗಳಿಗೆ ರಕ್ಷಣಾ ಕವಚವಾಗಿ ಮಾರ್ಪಟ್ಟವು. ನಾವು ನಮ್ಮ ಅಂಗಡಿಯ ಹಾಸಿಗೆಗಳನ್ನು ಬಳಸಿ ಸುಮಾರು ಎಂಟು ಜನರ ಪ್ರಾಣ ಉಳಿಸಿದ್ದೇವೆ, ಜೊತೆಗೆ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ 20ಕ್ಕೂ ಹೆಚ್ಚು ಜನರನ್ನು ರಕ್ಷಿಸಲು ಸಹಾಯ ಮಾಡಿದ್ದೇವೆ ಎಂದು ರಿಯಾಜುದ್ದೀನ್ ಹೆಮ್ಮೆಯಿಂದ ತಿಳಿಸಿದ್ದಾರೆ.
ಜನರು ಪ್ರಾಣಾಪಾಯದಲ್ಲಿ ಸಿಲುಕಿರುವಾಗ ತಮ್ಮ ವ್ಯಾಪಾರ ಅಥವಾ ಅದರಿಂದ ಆಗುವ ಆರ್ಥಿಕ ನಷ್ಟದ ಬಗ್ಗೆ ಈ ತಂದೆ ಮಗ ಒಂದು ಕ್ಷಣವೂ ಯೋಚಿಸಲಿಲ್ಲ. ಮೃತಪಟ್ಟವರ ದೇಹಗಳನ್ನು ಮುಚ್ಚಲು ತಮ್ಮ ಅಂಗಡಿಯಲ್ಲಿದ್ದ ಬೆಡ್ ಶೀಟ್ ಗಳನ್ನು ಸಹ ಅವರು ಉಚಿತವಾಗಿ ಒದಗಿಸಿದರು. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಜನರು ಬೆಂಕಿಯಿಂದ ಪಾರಾಗಲು ಹಾಸಿಗೆಗಳ ಮೇಲೆ ಜಿಗಿಯುವ ದೃಶ್ಯಗಳು ಸೆರೆಯಾಗಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ತಂದೆ ಮಗ ಹಾಕಿದ ಹಾಸಿಗೆಗಳಿಂದಾಗಿಯೇ ಅನೇಕರು ಇಂದು ಬದುಕಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗೆ ಸ್ಥಳೀಯರು ಸೇರಿದಂತೆ ಎಲ್ಲೆಡೆಯಿಂದ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಹೋಟೆಲ್ ಯಾವುದೇ ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ ಅಂದರೆ ಎನ್ ಓ ಸಿ ಪಡೆದಿರಲಿಲ್ಲ. ಕೇವಲ ಆರು ಕೊಠಡಿಗಳಿಗೆ ಮಾತ್ರ ಅನುಮತಿ ಪಡೆದು, ಬೇಸ್ಮೆಂಟ್ ಸೇರಿ ಸುಮಾರು 25 ಕೊಠಡಿಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಹೋಟೆಲ್ ಗೆ ಕೇವಲ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವಿದ್ದು, ಕಿಟಕಿಗಳನ್ನು ಮುಚ್ಚಲಾಗಿತ್ತು.
ಜೊತೆಗೆ ಮುಖ್ಯ ದ್ವಾರವು ಸೆನ್ಸಾರ್ ಆಧಾರಿತವಾಗಿತ್ತು. ಇದು ದುರಂತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತು. ಸದ್ಯ ಹೋಟೆಲ್ ಮಾಲೀಕ ಲವ್ಕೇಶ್ ಬಜಾಜ್ ಅವರನ್ನು ಪೊಲೀಸರು ಬಂಧಿಸಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಪಟ್ಟವರಲ್ಲಿ 12 ಜನ ವಿದೇಶಿ ಪ್ರಜೆಗಳಾಗಿದ್ದು, ಅವರು ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಸಂಬಂಧಿಕರನ್ನು ನೋಡಿಕೊಳ್ಳಲು ದೆಹಲಿಗೆ ಬಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
New Delhi,Delhi
Jun 04, 2026 11:19 PM IST













