Last Updated:
ಲಡಾಖ್ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಭಾರತ-ಚೀನಾ ಸೇನಾ ಕಮಾಂಡರ್ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಲಡಾಖ್ (ನ. 12): ಲಡಾಖ್ನಲ್ಲಿ ಉಂಟಾಗಿರುವ ಭಾರತ-ಚೀನಾ ಗಡಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಈ ನಿಟ್ಟಿನಲ್ಲಿ 6 ತಿಂಗಳ ಬಳಿಕ ಮೊದಲ ಬಾರಿಗೆ ಪೂರ್ವ ಲಡಾಖ್ ಭಾಗದಿಂದ ಚೀನಾ ಸೇನಾ ಪಡೆಯನ್ನು ಹಿಂಪಡೆಯುವ ಸೂಚನೆ ನೀಡಿತ್ತು. ಲಡಾಖ್ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಇದೀಗ ಎರಡೂ ದೇಶಗಳ ಸೇನಾ ಟ್ಯಾಂಕ್ಗಳನ್ನು ಹಿಂಪಡೆಯಲು ಆರಂಭಿಸಿದೆ. ಭಾರತ-ಚೀನಾ ಸೇನಾ ಕಮಾಂಡರ್ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ಸೋಮವಾರ ನ್ಯೂಸ್18ಗೆ ಉನ್ನತ ಮೂಲಗಳು ತಿಳಿಸಿತ್ತು.
ಭಾರತದ ವ್ಯಾಪ್ತಿಗೆ ಒಳಪಡುವ ಚುಶೂಲ್ನಲ್ಲಿ ಭಾರತ-ಚೀನಾ ಸೇನೆಗಳ ಕಮಾಂಡರ್ ಮಟ್ಟದ ಸಭೆ ನಡೆದಿತ್ತು. ಈ ಸಭೆಯಲ್ಲಿ ಮೂರು ಹಂತದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸೇನಾ ಪಡೆಯನ್ನು ವಾಪಾಸ್ ಕರೆಸಿಕೊಳ್ಳಬೇಕು. ಪಾಂಗಾಂಗ್ ಸರೋವರದ ದಡದಲ್ಲಿ ನಿಯೋಜನೆಗೊಂಡಿರುವ ಸೇನಾ ತುಕಡಿಗಳನ್ನು ಹಿಂಪಡೆಯಬೇಕು. ಇದು ಎರಡೂ ದೇಶಗಳಿಗೂ ಅನ್ವಯವಾಗಲಿದೆ ಎಂಬ ಮಾತುಕತೆಯಾಗಿತ್ತು ಎನ್ನಲಾಗಿದೆ.
ಆ ಮಾತುಕತೆಯ ಮೊದಲ ಹಂತವಾಗಿ ಎರಡೂ ಸೇನೆಗಳು ಲಡಾಖ್ನ ಘರ್ಷಣಾ ಸ್ಥಳದಲ್ಲಿ ಬೀಡುಬಿಟ್ಟಿದ್ದ ಟ್ಯಾಂಕರ್ಗಳು, ಸೇನಾ ವಾಹನ, ಫಿರಂಗಿ ಮುಂತಾದ ವಾಹನಗಳನ್ನು ಹಿಂಪಡೆಯಲು ಮುಂದಾಗಿದೆ. ಈ ಒಪ್ಪಂದಕ್ಕೆ ಬೀಜಿಂಗ್ ಮತ್ತು ದೆಹಲಿಯಿಂದ ಒಪ್ಪಿಗೆ ಸಿಕ್ಕ ಬಳಿಕ ಲಡಾಖ್ ಗಡಿಯಲ್ಲಿ ಎರಡೂ ಸೇನೆಗಳು ಘರ್ಷಣಾ ಸ್ಥಳದಿಂದ ಟ್ಯಾಂಕರ್ಗಳನ್ನು ಹಿಂಪಡೆಯಲು ನಿರ್ಧರಿಸಿವೆ. ಉಭಯ ಸೇನಾ ಪಡೆಗಳು ಘರ್ಷಣಾ ಸ್ಥಳದಿಂದ ಶಸ್ತ್ರಸಜ್ಜಿತ ಸಿಬ್ಬಂದಿಗಳು, ಟ್ಯಾಂಕ್ಗಳು, ಶಸ್ತ್ರಸಜ್ಜಿತ ವಾಹನಗಳನ್ನು ವಾಪಾಸ್ ಪಡೆಯಲು ಭಾರತ-ಚೀನಾ ನಿರ್ಧರಿಸಿತ್ತು.
3ನೇ ಹಂತವಾಗಿ, ಪ್ಯಾಂಗಾಂಗ್ ಸರೋವರದ ಉತ್ತರ ಭಾಗದಲ್ಲಿ ಉಭಯ ಸೇನೆಗಳು ಒಂದು ದಿನಕ್ಕೆ ಶೇ.30ರಷ್ಟು ಸಿಬ್ಬಂದಿಗಳನ್ನು ವಾಪಾಸ್ ಕರೆಸಿಕೊಳ್ಳಲಿವೆ. ಈ ರೀತಿ ಒಟ್ಟು ಮೂರು ದಿನಗಳ ಕಾಲ ಸೇನಾ ಸಿಬ್ಬಂದಿಗಳು ವಾಪಾಸ್ ತೆರಳಲಿದ್ದಾರೆ. ಭಾರತೀಯ ಪಡೆಗಳು ಧನ್ಸಿಂಗ್ ಥಾಪಾ ಪೋಸ್ಟ್ ಗೆ ವಾಪಾಸಾಗಲಿವೆ. ಚೀನಾದ ಸೇನಾ ಪಡೆಗಳು ಫಿಂಗರ್ 8ಗೆ ಮರಳಲಿವೆ. ಈಗಾಗಲೇ ಫಿಂಗರ್ 8ರಿಂದ 4ರ ವ್ಯಾಪ್ತಿಯೊಳಗೆ ಚೀನಾ ತನ್ನ ಬಂಕರ್ಗಳನ್ನು ನಿರ್ಮಿಸಿದೆ.
Nov 12, 2020 10:08 AM IST













